ಮಾನಸ ಗಂಗೋತ್ರಿ “ಬಯಲು ರಂಗ ಮಂದಿರದಲ್ಲಿ” ಯುವಕ-ಯುವತಿಯರದ್ದೆ ಕಾರುಬಾರು!.
2025ರ ವಿಶ್ವವಿಖ್ಯಾತ "ಮೈಸೂರು ದಸರಾ" ದ ದಿನಗಣನೆ ಪ್ರಾರಂಭವಾಗಿದೆ. ಮೈಸೂರು ನಗರಕ್ಕೆ ಆನೆಗಳು ಆಗಮಿಸಿದಾಗಲೇ........ ದಸರಾ ಉದ್ಘಾಟನೆ ಮಾಡುವವರ ಹೆಸರು ಘೋಷಣೆ ಮಾಡಿದಾಗಲೇ....... ದಸರಾದ ಎಲ್ಲಾ ಪ್ರಕ್ರಿಯೆಗಳು ಪ್ರಾರಂಭವಾಗುತ್ತವೆ!. ಈಗಾಗಲೇ ಆನೆಗಳು ತಯಾರಿ ನಡೆಸುತ್ತಿವೆ.
ಮೈಸೂರು ದಸರಾ ಎಂದರೆ ಸಾಕು, ಮೈ- ಮನಗಳಿಗೆ ಏನೋ ಒಂದು ರೀತಿಯಲ್ಲಿ ರೋಮಾಂಚನ! ದಸರಾದ ನೆಪದಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳ ಸುಗ್ಗಿ!!. ಈಗಾಗಲೇ ನಿಗದಿಪಡಿಸಿರುವಂತೆ ಮೈಸೂರಿನ ಹಲವು ವೇದಿಕೆಗಳಲ್ಲಿ ಕಾರ್ಯಕ್ರಮಗಳು ಜರುಗಲಿವೆ.
ಸಾಹಿತ್ಯ, ಸಂಗೀತ, ನಾಟಕ, ಚಲನಚಿತ್ರೋತ್ಸವ, ಜಾನಪದ, ಆಹಾರ ಮೇಳ, ಫಲಪುಷ್ಪ ಪ್ರದರ್ಶನ, ಗ್ರಾಮೀಣ ದಸರಾ, ರೈತರ ದಸರಾ, ಮಹಿಳಾ ದಸರಾ, ಮಕ್ಕಳ ದಸರಾ, ಕವಿಗೋಷ್ಠಿ, ಬೊಂಬೆ ಪ್ರದರ್ಶನ, ಚಿತ್ರ ಪ್ರದರ್ಶನ, ವಸ್ತು ಪ್ರದರ್ಶನ ಹೀಗೆ ಒಂದೇ ಎರಡೇ? ದಸರಾ ಒಂದಾದರೂ ಕಾರ್ಯಕ್ರಮಗಳು ನೂರಾರು!
ವೈವಿಧ್ಯಮಯ ವೇದಿಕೆಗಳಲ್ಲಿ ಇವುಗಳನ್ನೆಲ್ಲ ಕಣ್ತುಂಬಿಸಿಕೊಳ್ಳುವುದೇ ಸೋಜಿಗ!. ಇವೆಲ್ಲವುಗಳ ನಡುವೆ ಮೈಸೂರು "ನವ ವಧುವಿನಂತೆ" ಸಿಂಗಾರ ಗೊಳ್ಳುತ್ತಿದೆ. ರಸ್ತೆಯ ಇಕ್ಕಡೆಗಳಲ್ಲಿ ಸಾಲಂಕೃತ ವರ್ಣ ರಂಜಿತ ವಿದ್ಯುತ್ ದೀಪಗಳ ಅಲಂಕಾರ ಕಣ್ಮನ ಸೆಳೆಯುತ್ತದೆ.
ದಸರಾದ ನೆಪದಲ್ಲಿ ಇಡೀ ನಗರವೇ ಸ್ವಚ್ಛವಾಗುತ್ತಿದೆ. ಎಲ್ಲೆಲ್ಲೂ ಹಬ್ಬದ ವಾತಾವರಣ.
ಈಗಾಗಲೇ ನಗರಕ್ಕೆ ಆಗಮಿಸಿರುವ ಗಜ ಪಡೆಗಳು ದಿನಾಲು ಬೆಳಿಗ್ಗೆ ಮತ್ತು ಸಂಜೆ ಬನ್ನಿಮಂಟಪದವರೆಗೆ ತರಬೇತಿ ಪಡೆಯುತ್ತಿವೆ. ಆ ದೃಶ್ಯವನ್ನು ನೋಡುವುದೇ ಒಂದು ರೀತಿಯಲ್ಲಿ ಕಣ್ಮನಗಳಿಗೆ ದಸರಾದ ವೈಭವ ನೆನಪು ಮೂಡಿಸುತ್ತದೆ.
ಮೈಸೂರಿಗೆ ಆಗಲೇ ನೆಂಟರಿಷ್ಟರೆಲ್ಲ ಆಗಮಿಸುತ್ತಿದ್ದಾರೆ. ಶಾಲಾ- ಕಾಲೇಜುಗಳಿಗೂ ರಜೆ ಇರುವುದರಿಂದ ಮಕ್ಕಳ ಸಂಭ್ರಮ ಮುಗಿಲು ಮುಟ್ಟುತ್ತದೆ. ಅವರು ತಮ್ಮ ದಸರಾ ರಜೆಯ ಸಂಭ್ರಮದಲ್ಲಿ ತೊಡಗಿದ್ದಾರೆ. ದಸರಾದ ಸಂದರ್ಭದಲ್ಲಿ ಅನೇಕ ಕ್ರೀಡೆಗಳು ನಡೆಯುತ್ತವೆ. ದಸರಾ ಕುಸ್ತಿ, ವಸ್ತು ಪ್ರದರ್ಶನ, ಅಲ್ಲದೆ ಹಲವು ಬಡಾವಣೆಗಳಲ್ಲೂ ಕೂಡ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸ್ಪರ್ಧೆಗಳು ನಡೆಯುತ್ತವೆ.
ದಸರಾಕ್ಕೆ "ಮುನ್ನುಡಿ" ಎನ್ನುವಂತೆ "ಯುವ ಸಂಭ್ರಮ!" ಯುವ ಮನಸ್ಸುಗಳ ಪಿಸು ಮಾತಾಗಿ, ವೈವಿಧ್ಯಮಯ ನೃತ್ಯಗಳೊಂದಿಗೆ ಒಂದಲ್ಲ ಒಂದು ರೀತಿಯಲ್ಲಿ ರಂಗೇರಿಸುವ ಉತ್ಸವ ವಾಗಲಿದೆ.
ಈಗಾಗಲೇ ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿ ಬಯಲು ರಂಗ ಮಂದಿರದಲ್ಲಿ ಯುವಕ ಯುವತಿಯರ ನಾಡಿ-ಮಿಡಿತದಂತೆ ಕಣ್ಮನ ಸೆಳೆಯುವ ಯುವ ಸಂಭ್ರಮ ಬುಧವಾರದಿಂದ ಪ್ರಾರಂಭವಾಗಿದೆ. ನಟ ಯುವ ರಾಜ್ ಕುಮಾರ್ ಹಾಗೂ ನಟಿ ಅಮೃತ ಅಯ್ಯಂಗಾರ್ "ಎಕ್ಕಾ" ಸಿನಿಮಾದ "ಬ್ಯಾಂಗಲ್ ಬಂಗಾರಿ..." ಗೀತೆಗೆ ಹೆಜ್ಜೆ ಹಾಕುವ ಮೂಲಕ ಯುವಜನತೆಯನ್ನು ಆಕರ್ಷಿಸಿತು. ಜೊತೆಗೆ ದಸರಾ ಯುವ ಸಂಭ್ರಮಕ್ಕೆ ಚಾಲನೆ ದೊರೆಯಿತು. ಸೆಪ್ಟಂಬರ್ 10 ರಿಂದ 17ರವರೆಗೆ ಯುವ ಸಂಭ್ರಮವನ್ನು ಆಯೋಜಿಸಲಾಗಿದೆ. ಪ್ರತಿದಿನ ಸಂಜೆ 4 ರಿಂದ ರಾತ್ರಿ 10.30 ರವರೆಗೆ ಯುವ ಸಮೂಹ ಗಂಗೋತ್ರಿಯಲ್ಲಿ ಅನಾವರಣಗೊಂಡಿರುತ್ತದೆ!.
ಈ ಕಾರ್ಯಕ್ರಮದಲ್ಲಿ ದಾಖಲೆ ರೀತಿಯಲ್ಲಿ 400 ರಿಂದ 500 ತಂಡಗಳು ಭಾಗವಹಿಸುತ್ತಿರುವುದು ವಿಶೇಷವಾಗಿದೆ!. ವರ್ಷದಿಂದ ವರ್ಷಕ್ಕೆ ಕಾಲೇಜು ತಂಡಗಳು ಭಾಗವಹಿಸುವುದು ಹೆಚ್ಚಾಗುತ್ತಿದೆ. ಸಿಕ್ಕ ವೇದಿಕೆಯನ್ನ ಕಾಲೇಜು ಮಕ್ಕಳು ಉಪಯೋಗಿಸಿಕೊಳ್ಳುತ್ತಿದ್ದಾರೆ. ಹೆಚ್ಚು ಕಾಲೇಜು ತಂಡಗಳು ಭಾಗವಹಿಸುತಿವೆ. ಉದ್ಯಾನಗರ ಮೈಸೂರಿನಲ್ಲೇ ಹಲವು ಕಾಲೇಜು ತಂಡಗಳಿವೆ. ಅದಲ್ಲದೆ ನಮ್ಮ ರಾಜ್ಯದ ಹಲವು ಜಿಲ್ಲೆಗಳಿಂದಲೂ ಕೂಡ ತಂಡಗಳು ಆಗಮಿಸಲಿವೆ.
ಎಂಟು ದಿನಗಳ ಕಾಲ ಸಾಂಸ್ಕೃತಿಕ ಸಂಭ್ರಮ ಮೈಸೂರಿನಲ್ಲಿ ಕಳೆಗಟ್ಟಲಿದೆ. ಯುವ ಸಂಭ್ರಮದ ಶೀರ್ಷಿಕೆಯ ಗೀತೆ ಹಾಡಿದ ಖ್ಯಾತ ಗಾಯಕ ವಿಜಯ ಪ್ರಕಾಶ್ ರಾಜ್ಯದ ವಿವಿಧ ಕಾಲೇಜುಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಲು ಕರೆ ನೀಡಿದ್ದರು. ಕಾಲೇಜುಗಳ ವಿದ್ಯಾರ್ಥಿ ತಂಡದವರು ಪ್ರತಿದಿನ ಸಂಜೆಯಿಂದ ರಾತ್ರಿವರೆಗೂ ಕಾರ್ಯಕ್ರಮವನ್ನ ಯಶಸ್ವಿಗೊಳಿಸುತ್ತಿದ್ದಾರೆ.
ಈ ಕಾರ್ಯಕ್ರಮ ವಿದ್ಯಾರ್ಥಿಗಳ ಪ್ರತಿಭೆಗೆ ಒಂದು ಸುಮಧುರ ವೇದಿಕೆಯಾಗಿದೆ. ಕಳೆದ ಬಾರಿಯ ಯುವ ಸಂಭ್ರಮ ಅತ್ಯಂತ ಯಶಸ್ವಿಯಾಗಿ ಯುವ ಮನಸ್ಸುಗಳ ಮನ ಸೆಳೆದಿತ್ತು. ನಾವೂ ಕೂಡ ದಸರಾ ಯುವ ಸಂಭ್ರಮದಲ್ಲೀ ಹತ್ತಿರದಿಂದ ಭಾಗವಹಿಸಿದ ಸಂಭ್ರಮ ಕಣ್ಣಿಗೆ ಕಟ್ಟಿದಂತಿದೆ. ಈ ಬಾರಿಯೂ ಕೂಡ ಮತ್ತಷ್ಟು ವಿನೂತನವಾಗಿ ಕಾರ್ಯಕ್ರಮ ರಂಗೇರಲಿದೆ.
ಪ್ರತಿವರ್ಷದಂತೆ ಈ ಬಾರಿಯೂ ಕೂಡ ಪ್ರಚಲಿತ ವಿಷಯಗಳನ್ನು ಒಳಗೊಂಡಂತೆ 14 ವಸ್ತು ವಿಷಯಗಳು ಯುವ ಸಂಭ್ರಮದಲ್ಲಿ ಸೇರ್ಪಡೆಯಾಗಿವೆ.
ಕನ್ನಡ ನಾಡು- ನುಡಿ- ಸಂಸ್ಕೃತಿಗೆ ಸಂಬಂಧಿಸಿದಂತೆ, ಅಲ್ಲದೆ ಕರ್ನಾಟಕ ಜಾನಪದ ವೈವಿಧ್ಯತೆ ಮತ್ತು ಪರಂಪರೆ ಪ್ರತಿ ಜಿಲ್ಲೆಯ ಪ್ರಚಲಿತ ನೃತ್ಯ ಪ್ರಕಾರ, ಕನ್ನಡ ಸಿನಿಮಾ ದಾರಿತ ಆಧುನಿಕ ನೃತ್ಯ ಪ್ರಕಾರಗಳು, ಹಳೆ ಹಾಗೂ ಹೊಸ ಗೀತೆಗಳ ಗಾಯನ ಸುಧೆ, ಜೊತೆಗೆ ಕರ್ನಾಟಕದ ವೈಭವ ಸಾರುವಂತಹ ನೃತ್ಯ ಪ್ರದರ್ಶನಗಳಿಗೂ ಕೂಡ ಅವಕಾಶ ಕಲ್ಪಿಸಲಾಗಿದೆ. ಮುಂದುವರೆದು....... ಕನ್ನಡ ಸಾಹಿತ್ಯ, ಕವಿ, ಕರ್ನಾಟಕ ಸಾಹಿತ್ಯ ಪರಂಪರೆ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವ್ಯಕ್ತಿಗಳ ಜೀವನ ಚರಿತ್ರೆ ಬಿಂಬಿಸುವ ನೃತ್ಯರೂಪಕ, ದೇಶಭಕ್ತಿಯ ಅನಾವರಣ, ಸ್ವಾತಂತ್ರ್ಯ ಚಳುವಳಿ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆ ಆಪರೇಷನ್ ಸಿಂಧೂರ್ ಹಿನ್ನೆಲೆಯಲ್ಲಿ ಭಾರತೀಯ ಸೈನ್ಯದಲ್ಲಿ ಮಹಿಳಾ ಯೋಧರ ಪಾತ್ರದ ಅನಾವರಣಕ್ಕೂ ಕೂಡ ಅವಕಾಶ ಕಲ್ಪಿಸಿದೆ. ಯೋಧ ಮತ್ತು ರೈತ ಸಮುದಾಯದ ಕೊಡುಗೆಗಳನ್ನು ವೇದಿಕೆಯಲ್ಲಿ ಕಾಲೇಜು ತಂಡಗಳು ಬಿಂಬಿಸಲಾಗುತ್ತವೆ.
ಜೊತೆಗೆ ಲಿಂಗ ಸಮಾನತೆ, ಮಹಿಳಾ ಸಬಲೀಕರಣ, ಮಹಿಳಾ ಸ್ವಯಂ ರಕ್ಷಣಾ ಕಲೆಯನ್ನು ನೃತ್ಯದಲ್ಲಿ ಮೂಡಿಸಲು ಕೂಡ ಅವಕಾಶ ನೀಡಲಾಗಿದೆ. ಜೊತೆಗೆ ಸಮಾಜಕ್ಕೆ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ವಿಷಯ ಕುರಿತ ಸಹ ನೃತ್ಯ ಪ್ರದರ್ಶನ, ದುಶ್ಚಟಗಳಿಂದ ದೂರವಿರಬೇಕೆಂಬ ಸಂದೇಶವನ್ನು ನೃತ್ಯದ ಮೂಲಕ ಜಾಗೃತಿ ಮೂಡಿಸುವಂಥದ್ದು. ಹೀಗೆ ಒಂದು ಎರಡೇ?!.
ಈ ಬಾರಿ ಮತ್ತೊಂದು "ಯುವ ಸಂಭ್ರಮದ"- ವಿಶೇಷ ಎಂದರೆ ದಸರಾ ಯುವ ಸಂಭ್ರಮದ ಶೀರ್ಷಿಕೆ ಗೀತೆ ಬಿಡುಗಡೆಯಾಗಿರುವುದು. ಹೆಜ್ಜೆ ಜೊತೆ ಹೆಜ್ಜೆ ಸೇರಿದೆ..... ಸದ್ದು ಊರ ತುಂಬಾ ಕೇಳಿದೆ..... ಎನ್ನುವ ಗೀತೆಯನ್ನು ಖ್ಯಾತ ಗಾಯಕ ವಿಜಯ ಪ್ರಕಾಶ್ ಅವರು ಹಾಡಿದ್ದಾರೆ. ಕೆ ಆರ್ ಐ ಕನ್ಸಲ್ಟ್ ವತಿಯಿಂದ ನಿರ್ಮಿಸಿರುವ ಹಾಡಿಗೆ ಯುವ ಸಂಭ್ರಮದ ಸಮಿತಿಯ ಸಮನ್ವಯ ಅಧಿಕಾರಿಯೂ ಆದ ನಗರ ಪಾಲಿಕೆ ಕಂದಾಯ ಉಪಆಯುಕ್ತ ಸೋಮಶೇಖರ್ ಜಿಗಣಿ ಮತ್ತು ಮನೋಜ್ ಸೌಗಂದ್ ಸಾಹಿತ್ಯ ರಚಿಸಿದ್ದು, ನೀತು ನಿನಾದ ಸಂಗೀತ ಸಂಯೋಜನೆ ಮಾಡಿರುವ ಗೀತೆ ಎಲ್ಲರನ್ನ ಆಕರ್ಷಿಸುತ್ತಿದೆ. ಹಾಡಿನ ವಿಡಿಯೋದಲ್ಲಿ ಯುವ ಸಂಭ್ರಮದ ವೇದಿಕೆಯಲ್ಲಿ ಹೆಜ್ಜೆ ಹಾಕಲಿರುವ 5 ಕಾಲೇಜಿನ ವಿದ್ಯಾರ್ಥಿಗಳನ್ನು ಜೊತೆಗೆ ನಟ ಯುವರಾಜ್ ಕುಮಾರ್ ಮತ್ತು ಸಮಿತಿಯ ಪದಾಧಿಕಾರಿಗಳು ಮತ್ತು ನಿರೂಪಣೆ ಮಾಡುವ ಕಲಾವಿದರು ಕಾಣಿಸಿಕೊಂಡಿದ್ದಾರೆ. ಮೊದಲ ದಿನವೇ ವಿದ್ಯಾರ್ಥಿಗಳಿಂದ ಅತ್ಯುತ್ತಮ ಪ್ರತಿಕ್ರಿಯೆ ಬಂದಿದೆ.
ಇವೆಲ್ಲವುಗಳ ನಡುವೆ ಜನಪದದ ಸೊಗಡು, ಚಿತ್ರಗೀತೆಗಳಿಗೆ ತಕ್ಕಂತೆ ಕುಣಿತ ಒಟ್ಟಾರೆ ಮಾನಸಗಂಗೋತ್ರಿ ಬಯಲು ರಂಗ ಮಂದಿರದಲ್ಲಿ ಎಲ್ಲೆಲ್ಲಿ ನೋಡಿದರೂ ಯುವ ಸಮೂಹವನ್ನೇ ಕಾಣಬಹುದಾಗಿದೆ!. ನಾವು ಶಾಲಾ- ಕಾಲೇಜುಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮಾಡುತ್ತಿದ್ದ ನೆನಪು ಮನದಲ್ಲಿ ಮೂಡುತ್ತದೆ!. ಬಾಲ್ಯ ಮತ್ತೆ ಮರುಕಳಿಸುತ್ತದೆ!!.
ಯುವ ಸಂಭ್ರಮದಲ್ಲಿ ನಿತ್ಯವೂ ಪ್ರದರ್ಶನ ನೀಡುವ ಅತ್ಯುತ್ತಮ ತಂಡಗಳನ್ನು ಆಯ್ಕೆ ಮಾಡಿ ಸೆಪ್ಟಂಬರ್ 23 ರಿಂದ 27ರವರೆಗೆ ಐದು ದಿನಗಳ ಕಾಲ ಸಂಜೆ 6 ರಿಂದ ರಾತ್ರಿ 10.30 ರವರಿಗೆ "ಯುವ ದಸರಾ"- ಉತ್ತನಹಳ್ಳಿಯ ಬಯಲು ಮೈದಾನದಲ್ಲಿ ಆ ಯೋಜನೆಗೊಳ್ಳಲಿದೆ. "ಯುವ ದಸರಾ"ದಲ್ಲಿ ಅಂತಹ ತಂಡಗಳನ್ನು ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ. ಇದರ ಜೊತೆ ಅಲ್ಲಿನ ಕಾರ್ಯಕ್ರಮವು ಕೂಡ ಮತ್ತಷ್ಟು ರಂಗೇರಿಸುತ್ತದೆ. ಏಕೆಂದರೆ ಖ್ಯಾತ ಕಲಾವಿದರು ಈ ಕಾರ್ಯಕ್ರಮಕ್ಕೆ ಆಗಮಿಸುತ್ತಾರೆ.
ಸೆಪ್ಟೆಂಬರ್ 23ರಂದು ಸ್ಯಾಂಡಲ್ ವುಡ್ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದೆ. ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ತಂಡ ಸೇರಿ ಇತರರು ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. 24ರಂದು ಖ್ಯಾತ ಸಂಗೀತ ನಿರ್ದೇಶಕ ಆಲ್ಬಮ್ ನಿರ್ಮಾಪಕ ಪ್ರೀತಂ ಮತ್ತು ತಂಡದವರಿಂದ ಕಾರ್ಯಕ್ರಮ. 25 ರಂದು ಖ್ಯಾತ ಗಾಯಕ ಜುಬಿನ್ ನೌಟಿಯಾಲ್ ರವರಿಂದ, 26ರಂದು ಖ್ಯಾತ ಸಂಗೀತ ನಿರ್ದೇಶಕ ಡಿಎಸ್ ಪಿ ದೇವಿಶ್ರೀ ಪ್ರಸಾದ್ ಅವರಿಂದ, 27ರಂದು ಖ್ಯಾತ ಗಾಯಕಿ ಸುನಿಧಿ ಚೌಹಾಣ್ ರವರಿಂದ ಕಾರ್ಯಕ್ರಮ ವೈವಿಧ್ಯ ಇರಲಿದೆ.
ಯುವ ಸಂಭ್ರಮ", ಮತ್ತು "ಯುವ ದಸರಾ"ದಲ್ಲಿ ಭಾಗವಹಿಸುವ ಪ್ರತಿಯೊಂದು ಕಾಲೇಜು ತಂಡಗಳನ್ನು ಗೌರವಿಸುವುದರ ಜೊತೆಗೆ ಪ್ರಯಾಣ ಭತ್ಯೆ, ವಸ್ತ್ರ ವಿನ್ಯಾಸದ ಖರ್ಚು ನೀಡಲಾಗುತ್ತದೆ. ಜೊತೆಗೆ ದೂರದಿಂದ ಬಂದವರಿಗೆ ಮಾತ್ರ ವಸತಿ ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ.
ಪ್ರತಿ ದಿನವೂ ಸಹ ಅನೇಕ ನಟ- ನಟಿಯರು, ಗಾಯಕರು, ಸಂಗೀತ ನಿರ್ದೇಶಕರು ಮುಂತಾದವರು ಬರುವವರಿದ್ದಾರೆ. ಜೊತೆಗೆ ಹೊಸ ಚಿತ್ರಗಳ ಮಾಹಿತಿ ಕೂಡ ನಿಮಗೆ ಸಿಗುತ್ತದೆ.
ಕಾಲೇಜು ತಂಡಗಳ ನೃತ್ಯಕ್ಕೆ ಇಡೀ ಗಂಗೋತ್ರಿ ಬಯಲು ರಂಗ ಮಂದಿರದ ವೀಕ್ಷಕರು ಕೂಡ ಹುಚ್ಚೆದ್ದು ಕುಣಿಯುತ್ತಾರೆ!.
ಯುವ ಸಂಭ್ರಮ" ಕಾರ್ಯಕ್ರಮ ವರ್ಷದಿಂದ ವರ್ಷಕ್ಕೆ ಎಲ್ಲರ ಮನಸ್ಸನ್ನು ಸೂರೆಗೊಂಡು ಆಬಾಲರುದ್ಧರಾದಿಯಾಗಿ ಒಂದಲ್ಲ ಒಂದು ರೀತಿಯಲ್ಲಿ ಮುದ ನೀಡುತ್ತಿದೆ.
ದಸರಾದ ನೆಪದಲ್ಲಿ ಮೈಸೂರು ಹಲವಾರು ಕಾರ್ಯಕ್ರಮಗಳೊಂದಿಗೆ ಮೈಸೂರಿಗರಿಗೆ ಅಷ್ಟೇ ಅಲ್ಲದೆ, ಹೊರ ಜಿಲ್ಲೆ, ರಾಜ್ಯ, ವಿದೇಶಗಳಿಂದಲೂ ಕೂಡ ಎಲ್ಲರ ಮೆಚ್ಚುಗೆ ಪಾತ್ರವಾಗುತ್ತಿದೆ.
ಮೈಸೂರು ಪೇಟ, ಮೈಸೂರು ಮಲ್ಲಿಗೆ, ಮೈಸೂರು ಪಾಕ್, ಮೈಸೂರು ವೀಳ್ಯದೆಲೆ, ಮೈಸೂರು ಗಂಧದ ಗಮ,ಅರಮನೆಯ ನಗರಿ, ಮೈಸೂರು ಸಿಲ್ಕ್, ಇವೆಲ್ಲದರ ಜೊತೆಗೆ “ಮೈಸೂರು ದಸರಾ” ಕೂಡ ತನ್ನತನವನ್ನು ಕಾಯ್ದುಕೊಂಡು, ಮೈಸೂರನ್ನು ವಿಶ್ವ ಮಟ್ಟದೆಡೆಗೆ ಕೊಂಡೊಯ್ಯುತ್ತಿದೆ.
ಈ ಸಂದರ್ಭದಲ್ಲಿ ಮೈಸೂರಿಗರಾದ ನಾವು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಕೊಟ್ಟು, ರಸ್ತೆ ನಿಯಮಗಳನ್ನು ಸರಿಯಾಗಿ ಪಾಲಿಸಿ, ಮೈಸೂರಿನಲ್ಲಿ ನಡೆಯುವ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಂದರೆ ಆಗದಂತೆ ನೋಡಿಕೊಂಡು, ಮೈಸೂರಿನ ಹೆಸರನ್ನು ಉಳಿಸೋಣ. ಎಲ್ಲರಿಗೂ ಮುಂಚಿತವಾಗಿ ಬರಲಿರುವ ವಿಶ್ವವಿಖ್ಯಾತ “ಮೈಸೂರು ದಸರಾದ” ಹಾರ್ದಿಕ ಶುಭಾಶಯಗಳು.

ಕಾಳಿಹುಂಡಿ ಶಿವಕುಮಾರ್, ಮೈಸೂರು