ಚಾಮರಾಜನಗರ: ಪ್ರಜಾಪ್ರಭುತ್ವದ ಬಲಿಷ್ಠತೆಗಾಗಿ ಹಾಗೂ ದೇಶದ ಉಜ್ವಲ ಭವಿಷ್ಯಕ್ಕಾಗಿ ಯುವಜನರು ಮತದಾನದ ಮಹತ್ವದ ಕುರಿತು ಜಾಗೃತರಾಗುವಂತೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳದ ಈಶ್ವರ ಅವರು ಸಲಹೆ ಮಾಡಿದರು.
ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿಂದು ಭಾರತ ಸರ್ಕಾರದ ಮೈ ಭಾರತ್ ಕೇಂದ್ರ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಮತದಾರರ ಜಾಗೃತಿ ಕ್ಲಬ್ ಹಾಗೂ ನಗರದ ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮತದಾನ ಪ್ರತಿಯೊಬ್ಬರಿಗೂ ಪವಿತ್ರ ಹಾಗೂ ಅಮೂಲ್ಯವಾದದ್ದು. ಮತದಾನದಲ್ಲಿ ಪಾಲ್ಗೊಳ್ಳಲು ಈ ಹಿಂದೆ ಯುವಜನರು ಆಸಕ್ತಿ ತೋರುತ್ತಿರಲಿಲ್ಲ. ಚುನಾವಣೆಯಲ್ಲಿ ಭಾಗವಹಿಸುವ ಪ್ರಮಾಣವು ಕಡಿಮೆ ಇತ್ತು. ಇದನ್ನರಿತ ಭಾರತ ಚುನಾವಣಾ ಆಯೋಗವು ನಾಗರಿಕರು ವಿಶೇಷವಾಗಿ 18 ತುಂಬಿದ ಯುವಜನರಿಗೆ ಮತದಾನ ಜಾಗೃತಿ ಮೂಡಿಸಿ ಪ್ರೇರೆಪಿಸಲು ರಾಷ್ಟ್ರೀಯ ಮತದಾರರ ದಿನ ಆಚರಿಸಲು ನಿರ್ದೇಶನ ನೀಡಿದೆ. ಈ ಪ್ರಯುಕ್ತ 2011ರಿಂದ ದೇಶಾದ್ಯಂತ ರಾಷ್ಟ್ರೀಯ ಮತದಾರರ ದಿನ ಆಚರಿಸಿ ಮತದಾನದ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮೂಡಿಸಲಾಗುತ್ತಿದೆ ಎಂದರು.
ಯುವಜನರು ಮತದಾನ ಸಂದರ್ಭದಲ್ಲಿ ಯಾವುದೇ ಹಣ, ಆಮಿಷಗಳಿಗೆ ಒಳಗಾಗದೇ, ಜಾತಿ, ಧರ್ಮಗಳಿಗೆ ಕಟ್ಟುಬೀಳದೇ ಚುನಾವಣೆಯಲ್ಲಿ ನಿರ್ಭೀತಿಯಿಂದ ಮತದಾನ ಮಾಡಬೇಕು. ದೇಶದ ಅಭಿವೃದ್ಧಿ ಚುನಾವಣೆಯಲ್ಲಿ ನಾವು ಆರಿಸುವ ವ್ಯಕ್ತಿಗಳನ್ನು ಅವಲಂಬಿಸಿದೆ. ಈ ನಿಟ್ಟಿನಲ್ಲಿ ಸಮಾಜದಲ್ಲಿ ಸಮಸ್ಯೆಗಳಿಗೆ ಸ್ಪಂದಿಸುವ, ಜನಸೇವಕರಾಗಿ ಕೆಲಸ ಮಾಡುವ ಯೋಗ್ಯ ಹಾಗೂ ಉತ್ತಮ ವ್ಯಕ್ತಿಗಳನ್ನು ಆರಿಸಬೇಕು. ಅದಕ್ಕಾಗಿ ಎಲ್ಲರೂ ಮತದಾನದ ಪ್ರಾಮುಖ್ಯತೆಯನ್ನು ಅರಿಯಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ ಅವರು ತಿಳಿಸಿದರು.
ಮತದಾನದ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು ಅವರು ರಕ್ತದಾನ, ನೇತ್ರದಾನದಂತೆ ಮತದಾನವೂ ಶ್ರೇಷ್ಠವಾದದ್ದು. ಮತವನ್ನು ದಾನ ಮಾಡಬೇಕೆ ಹೊರತು ಮಾರಾಟ ಮಾಡಬಾರದು. ಮತದಾನದ ಬಗ್ಗೆ ನಿರಂತರ ಜಾಗೃತಿ ಮೂಡಿಸಲು ಪ್ರತಿವರ್ಷ ಜನವರಿ 25ರಂದು ರಾಷ್ಟ್ರೀಯ ಮತದಾರರ ದಿನ ಆಚರಿಸಲಾಗುತ್ತಿದೆ. ಸದೃಢ ಸಮಾಜ ನಿರ್ಮಾಣಕ್ಕಾಗಿ ನಾವೆಲ್ಲರೂ ಮತದಾನದ ಮಹತ್ವದ ಅರಿತು ಇತರರಿಗೂ ತಿಳಿಹೇಳಬೇಕು ಎಂದರು. ಮತದಾನದ ಕುರಿತ ಜಾಗೃತಿಗಾಗಿ ಕಾಲೇಜಿನಲ್ಲಿ ನಡೆದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ, ಪ್ರಮಾಣಪತ್ರ ವಿತರಿಸಿ ಬಳಿಕ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ರಾಜಪ್ರಭುತ್ವದ ಅಂದಿನ ಕಾಲದಲ್ಲಿ ಭಾರತೀಯರೆಲ್ಲರಿಗೂ ಸಮಾನ ಹಕ್ಕು, ಅವಕಾಶಗಳಿರಲಿಲ್ಲ. ಬಳಿಕ ಪ್ರಜಾಸತ್ಯಾತ್ಮಕ ಆಡಳಿತ ಚಿಂತನೆಯಡಿ ಪ್ರಜಾಪ್ರಭುತ್ವ ಅಳವಡಿಸಿಕೊಳ್ಳಲು ನಿರ್ಧರಿಸಲಾಯಿತು. ಪ್ರಜಾಪ್ರಭುತ್ವದಡಿ ಎಲ್ಲರಿಗೂ ಮತದಾನ ಮಾಡುವ ಅವಕಾಶ ಲಭ್ಯವಾಗಿದೆ. ಒಂದೊಂದು ಮತವು ಬಹಳ ಅಮೂಲ್ಯವಾಗಿದೆ. ಒಂದು ಮತದ ಮಹತ್ವವನ್ನು ಇಡೀ ದೇಶಕ್ಕೆ ಪರಿಚಯಿಸಿದ ಕೀರ್ತಿ ಚಾಮರಾಜನಗರಕ್ಕೆ ಸಲ್ಲುತ್ತದೆ ಈ ನಿಟ್ಟಿನಲ್ಲಿ ಪ್ರಜ್ಞಾವಂತರಾದ ನಾವೆಲ್ಲರೂ ಮತದಾನದ ಬಗ್ಗೆ ಹೆಚ್ಚಿನ ಅರಿವು ಹೊಂದಬೇಕು ಎಂದು ತಿಳಿಸಿದರು.
ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಎಸ್. ಮಹದೇವಸ್ವಾಮಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಸಿ. ಶೈಲೇಶ್ ಕುಮಾರ್, ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ಅಧ್ಯಕ್ಷರಾದ ಜಿ. ಬಂಗಾರು, ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಶಾಂತರಾಜು, ಮೈ ಭಾರತ್ ಕೇಂದ್ರದ ಸಹನಾ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು