- ಕ್ರಿಕೆಟ್ ಪಂದ್ಯಾವಳಿ : ಹನೂರು ಕ್ರಿಕೆಟ್ ತಂಡ ಪ್ರಥಮ, ಗಟ್ಟವಾಡಿಪುರ ಕ್ರಿಕೆಟ್ ತಂಡ ದ್ವಿತೀಯ
ಚಾಮರಾಜನಗರ : ಚಾಮರಾಜೇಶ್ವರ ಕ್ರಿಕೆಟ್ ಕ್ಲಬ್ ವತಿಯಿಂದ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ
ಗುಂಡ್ಲುಪೇಟೆ ತಾಲೂಕಿನ ಹನೂರು ಕ್ರಿಕೆಟ್ ತಂಡ ಪ್ರಥಮ ಸ್ಥಾನ ಪಡೆದು ನಗದು ಬಹುಮಾನ, ಆಕರ್ಷಕ ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಂಡಿರೆ. ನಂಜನಗೂಡು ತಾಲೂಕಿನ ಗಟ್ಟವಾಡಿಪುರ ಕ್ರಿಕೆಟ್ ತಂಡ ದ್ವಿತೀಯ ಸ್ಥಾನ ಪಡೆದು ನಗದು ಬಹುಮಾನ, ಆಕರ್ಷಕ ಟ್ರೋಫಿಯನ್ನು ಪಡೆದುಕೊಂಡಿದೆ.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ನಾಲ್ಕು ದಿನಗಳಿಂದ ನಡೆದ ಕ್ರಿಕೆಟ್ ಪಂದ್ಯಾವಳಿಯ ಅಂತಿಮ ಸುತ್ತಿನಲ್ಲಿ ಗುಂಡ್ಲುಪೇಟೆ ತಾಲೂಕಿನ ಹನೂರು ಕ್ರಿಕೆಟ್ ತಂಡ, ನಂಜನಗೂಡು ತಾಲೂಕಿನ ಗಟ್ಟವಾಡಿಪುರ ಕ್ರಿಕೆಟ್ ತಂಡದ ನಡುವೆ ಸೆಣಸಾಟ ಏರ್ಪಟ್ಟು ಹನೂರು ಕ್ರಿಕೆಟ್ ತಂಡ ಪ್ರಥಮ ಸ್ಥಾನ, ಗಟ್ಟವಾಡಿಪುರ ಕ್ರಿಕೆಟ್ ತಂಡ ದ್ವಿತೀಯ ಸ್ಥಾನ ಪಡೆದಿದೆ.
ಸಮಾರೋಪ ಸಮಾರಂಭದಲ್ಲಿ ಎರಡು ತಂಡಗಳಿಗೆ ಉದ್ಯಮಿ ಶ್ರೀನಿಧಿ ಕುದರ್ ನಗದು ಬಹುಮಾನ, ಆಕರ್ಷಕ ಟ್ರೋಫಿ ವಿತರಿಸಿ ಮಾತನಾಡಿ, ಎಲ್ಲ ಕ್ರೀಡಾಭಿಮಾನಿಗಳನ್ನು ಕ್ರೀಡಾಂಗಣದಲ್ಲಿ ಹಿಡಿದಿಟ್ಟುಕೊಳ್ಳುವ ಶಕ್ತಿ ಕ್ರಿಕೆಟ್ ಪಂದ್ಯಾವಳಿಗಿದೆ. ಕ್ರೀಡಾಭಿಮಾನಿಗಳಿಗೆ ಹಬ್ಬದ ವಾತಾವರಣವೇ ಸೃಷ್ಟಿಯಾಗಲಿದೆ. ಹಾಗಾಗಿ ಕ್ರಿಡಾಪಟುಗಳು ಕ್ರೀಡಾ ಮನೋಭಾವನೆಯಿಂದ ಭಾಗವಹಿಸಿ ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಬೇಕು. ಗೆದ್ದವರು ಅಹಂಪಡದೆ ಸೋತವರು ಧೃತಿಗೆಡದೆ ಸತತ ಅಭ್ಯಾಸದಲ್ಲಿ ತೊಡಗಿಕೊಳ್ಳಬೇಕು ಎಂದರು.
ಸಮಾರೋಪ ಸಮಾರಂಭದಲ್ಲಿ ಬುಲೆಟ್ ಚಂದ್ರು, ವಿಶಾಲ್, ವಿಶ್ವ, ಮಹೇಂದ್ರ, ನಿರಂಜನ್, ವಿನಯ್, ಮಹೇಶ್ ವಿರಾಟ್, ಚಿದು, ಕ್ರಿಕೆಟ್ ಆಟಗಾರರು, ಅಭಿಮಾನಿಗಳು ಭಾಗವಹಿಸಿದ್ದರು.