ಚಾಮರಾಜನಗರ: ಯುವಜನರು ಸ್ವಯಂ ಉದ್ಯೋಗಕ್ಕೆ ಆದ್ಯತೆ ನೀಡಬೇಕು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ ಮುನ್ನ ಅವರು ಸಲಹೆ ಮಾಡಿದರು.
ನಗರದ ವಿಶುವಲ್ ಸಾಪ್ಟೆಕ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿಂದು ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ಮೇರ ಯುವ ಭಾರತ್, ಶ್ರೀ ವರಮಹಾಲಕ್ಷ್ಮಿ ಸಾಂಸ್ಕøತಿಕ ಕ್ರೀಡಾ ಸೇವಾ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಯುವ ಕೌಶಲ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರ ನಿರುದ್ಯೋಗ ಸಮಸ್ಯೆಗಳನ್ನು ಪರಿಹರಿಸಲು ಹಲವು ಯೋಜನೆಗಳನ್ನು ಜಾರಿ ಮಾಡಿದೆ. ಸ್ವಯಂ ಉದ್ಯೋಗ ಕೈಗೊಳ್ಳಲು ಸಹ ಸಾಕಷ್ಟು ಕಾರ್ಯಕ್ರಮಗಳು ಅನುಷ್ಠಾನಕ್ಕೆ ಬಂದಿವೆ. ಇದರ ಸದುಪಯೋಗ ಮಾಡಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ನಗರಸಭೆ ಸಮುದಾಯ ಅಧಿಕಾರಿ ವೆಂಕಟ್ ನಾಯಕ್ ಅವರು ಮಾತನಾಡಿ ನಗರಸಭೆ ವತಿಯಿಂದ ನಿರುದ್ಯೋಗಿ ಯುವ ಜನರಿಗೆ ಕಾರ್ಯಕ್ರಮಗಳನ್ನು ಈಗಾಗಲೇ ರೂಪಿಸಲಾಗಿದೆ. ಕಂಪ್ಯೂಟರ್ ಟ್ರೈನಿಂಗ್, ಹೊಲಿಗೆ, ಬ್ಯೂಟಿ ಪಾರ್ಲರ್ ತರಬೇತಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಈ ಯೋಜನೆಗಳ ಪ್ರಯೋಜನವನ್ನು ಪಡೆಯಬೇಕು ಎಂದು ತಿಳಿಸಿದರು.
ಇನ್ನರ್ ವೀಲ್ ಸಂಸ್ಥೆ ಅಧ್ಯಕ್ಷರಾದ ಲಕ್ಷ್ಮೀ ಶಿವಕುಮಾರ್ ಮಾತನಾಡಿ ಮಹಿಳೆಯರಿಗಾಗಿ ಸಾಕಷ್ಟು ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ಸಧೃಡ ಭಾರತ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶುವಲ್ ಸಾಫ್ಟೆಕ್ ಕಂಪ್ಯೂಟರ್ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಕೆ. ಬಿಳಿಗಿರಿರಂಗ ಅವರು ಮಾತನಾಡಿ ವಿದ್ಯಾರ್ಥಿಗಳು ಕೇಂದ್ರದಲ್ಲಿ ತರಬೇತಿ ಪಡೆದು ವಿವಿಧ ಕಡೆ ಅಧಿಕಾರಿಗಳಾಗಿ ಸೇವೆ ಮಾಡುತ್ತಿದ್ದಾರೆ. ಬಿಡುವಿನ ಸಂದರ್ಭದಲ್ಲಿ ತರಬೇತಿ ಕೇಂದ್ರಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳು ಜ್ಞಾನವೃದ್ದಿಸಿಕೊಳ್ಳಬೇಕು ಎಂದರು.
ಶ್ರೀ ವರಮಹಾಲಕ್ಷ್ಮಿ ಸಾಂಸ್ಕೃತಿಕ ಕ್ರೀಡಾ ಸಂಸ್ಥೆ ಅಧ್ಯಕ್ಷ ಜಿ ಬಂಗಾರು ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು. ನಗರಸಭೆ ಆರೋಗ್ಯಧಿಕಾರಿ ಮಂಜುನಾಥ್ ಅವರು ಆರೋಗ್ಯ ರಕ್ಷಣೆ ಕುರಿತು ಮಾತನಾಡಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ರಾಜು, ತರಬೇತಿ ಕೇಂದ್ರದ ಮುಖ್ಯ ಶಿಕ್ಷಕರಾದ ಸುಧಾರಾಣಿ, ಮೇರಾ ಯುವ ಭಾರತ್ ನ ಸಹನ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.