ಸಂತಸಮಯ ವೃದ್ದಾಪ್ಯ ಎರಡನೇ ಹಂತದ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ್ ಸಿ.ಇ.ಒ ಮೋನಾ ರೋತ್ ಚಾಲನೆ

ಚಾಮರಾಜನಗರ:ಗ್ರಾಮೀಣಭಿವೃದ್ದಿ ಮತ್ತು ಪಂಚಾಯತ್‍ರಾಜ್ ಇಲಾಖೆ ಹಾಗೂ ಸತ್ಯ ಎಜುಕೇರ್ ಕಾಂಪಿಟೆನ್ಸಿ ಟ್ರಸ್ಟ್ ಸಹಯೋಗದೊಂದಿಗೆ ಜಿಲ್ಲೆಯುಲ್ಲಿ ಪೈಲಟ್ ಪ್ರಾಜೆಕ್ಟ್ ಆಗಿ ಅನುಷ್ಠಾನಗೊಳಿಸುತ್ತಿರುವ ಸಂತಸಮಯ ವೃದ್ಧಾಪ್ಯ ಎರಡನೇ ಹಂತದ ಕಾರ್ಯಕ್ರಮಕ್ಕೆ ಇಂದು ನಗರದಲ್ಲಿ ಚಾಲನೆ ದೊರೆಯಿತು. 

ನಗರದ ಜಿಲ್ಲಾ ಭವನದಲ್ಲಿರುವ ಹಳೇ ಕೆ.ಡಿ.ಪಿ ಸಭಾಂಗಣದಲ್ಲಿಂದು ಆಯೋಜಿತವಾಗಿದ್ದ ಕಾರ್ಯಕ್ರಮದಲ್ಲಿ  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಸಂತಸಮಯ ವೃದ್ದಾಪ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

ಇದೇ ವೇಳೆ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಹಿರಿಯ ನಾಗರಿಕರ ದೈಹಿಕ, ಮಾನಸಿಕ ಯೋಗಕ್ಷೇಮವನ್ನು ಗಮನದಲ್ಲಿಟ್ಟುಕೊಂಡು ವೃದ್ಧಾಪ್ಯದಲ್ಲಿ ಸಂತಸವಾಗಿ ಚಟುವಟಿಕೆಯಿಂದ ಇರಲು ಜಿಲ್ಲೆಯಲ್ಲಿ ಪೈಲಟ್ ಕಾರ್ಯಕ್ರಮವಾಗಿ ಸಂತಸಮಯ ವೃದ್ದಾಪ್ಯ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದೆ ಎಂದರು.

ಕಳೆದ ಸೆಪ್ಟೆಂಬರ್‍ನಲ್ಲಿ ಚಾಮರಾಜನಗರ ತಾಲೂಕಿನ 10 ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಸತ್ಯ ಎಜುಕೇರ್ ಕಾಂಪಿಟೆನ್ಸಿ ಟ್ರಸ್ಟ್ ಸಹಯೋಗದೊಂದಿಗೆ ಯೋಜನೆ ಮೊದಲ ಹಂತದಲ್ಲಿ ಯಶಸ್ವಿಯಾಗಿ ನಡೆದಿದೆ. ಗ್ರಾಮ ಪಂಚಾಯಿತಿಗಳಲ್ಲಿರುವ ಗ್ರಂಥಾಲಯಗಳಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಈ ಯೋಜನೆಯಿಂದ ಗ್ರಂಥಾಲಯಗಳನ್ನು ಅರಿವು ಕೇಂದ್ರಗಳೆಂದು ಮಾರ್ಪಡಿಸಲಾಗಿದೆ ಎಂದು ತಿಳಿಸಿದರು. 

ಹಿರಿಯ ನಾಗರಿಕರು ವೃದ್ದಾಪ್ಯದಲ್ಲಿ ಸಂತೋಷದಿಂದ ಇರಬೇಕು. ಒಂಟಿತನ, ಬೇಸರ ಹಿರಿಯರನ್ನು ಕಾಡಬಾರದು. ಅವರ ಆರೋಗ್ಯ ಸಮಸ್ಯೆಗಳನ್ನು ಆಲಿಸಿ ಉತ್ತಮ ಜೀವನಶೈಲಿ, ಆಹಾರ ಪದ್ದತಿಗೆ ಸಲಹೆ ನೀಡುವುದು, ಯೋಗ, ವಯಸ್ಸಿಗನುಗುಣವಾದ ದೈಹಿಕ ಚಟುವಟಿಕೆಗಳಿಗೆ ಪ್ರೋತ್ಸಾಹಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಎರಡನೇ ಹಂತದಲ್ಲಿ ಇನ್ನೂ 10 ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಲಾಗಿದ್ದು, ಕಾರ್ಯಕ್ರಮದ ಸಫಲತೆಯ ಆಧಾರದ ಮೇಲೆ ಜಿಲ್ಲಾದ್ಯಂತ ಯೋಜನೆ ವಿಸ್ತರಣೆಯಾಗಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪಿ. ಲಕ್ಷ್ಮೀ ಅವರು ಮಾತನಾಡಿ ಸಂತಸಮಯ ವೃದ್ದಾಪ್ಯ ಕಾರ್ಯಕ್ರಮ ರಾಜ್ಯದಲ್ಲಿಯೇ ಮೊದಲಿಗೆ ಚಾಮರಾಜನಗರ ಜಿಲ್ಲೆಯಲ್ಲಿ ಪೈಲಟ್ ಆಗಿ ಜಾರಿಗೊಳಿಸಲಾಗಿದೆ. ಈಗಾಗಲೇ ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿ, ಮಂಗಲ, ಭೋಗಾಪುರ, ಮಾದಾಪುರ, ಉಮ್ಮತ್ತೂರು, ಹೆಗ್ಗೋಠಾರ, ಚಂದಕವಾಡಿ, ಕುಲಗಾಣ, ದೇಮಹಳ್ಳಿ ಹಾಗೂ ಕುದೇರು ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯಕ್ರಮ ನಡೆದಿದೆ ಎಂದರು. 

ಎರಡನೇ ಹಂತದಲ್ಲಿ ತಾಲೂಕಿನ ಶಿವಪುರ, ಉಡಿಗಾಲ, ಹರದನಹಳ್ಳಿ, ವೆಂಕಟಯ್ಯನ ಛತ್ರ, ಕೊತ್ತಲವಾಡಿ, ಅರಕಲವಾಡಿ, ಬದನಗುಪ್ಪೆ, ನಂಜದೇವನಪುರ, ಹರವೆ, ಕೆಂಪನಪುರ ಗ್ರಾಮ ಪಂಚಾಯಿತಿಗಳಲ್ಲಿ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಈ ಮಹತ್ವದ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿಯ ಗ್ರಂಥಪಾಲಕರು, ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ಸ್ವಸಹಾಯ ಗುಂಪುಗಳು ಸಹಕಾರ ನೀಡಲಿದ್ದಾರೆ. ಎರಡನೇ ಹಂತದಲ್ಲೂ ಯಶಸ್ವಿಯಾಗಿ ಕಾರ್ಯಕ್ರಮ ಪೂರ್ಣಗೊಳಿಸಬೇಕಿದೆ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ, ಸೆಂಟ್ ಜಾನ್ ವೈದ್ಯಕೀಯ ಕಾಲೇಜಿನ ಸಮುದಾಯ ವೈದ್ಯಕೀಯ ವಿಭಾಗದ ಡಾ. ಪ್ರೀತೇಶ್ ಕಿರಣ್, ಮನೋನಿಧಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಸಿಬಿನ್ ವರ್ಗಿಸ್, ಸತ್ಯ ಎಜುಕೇರ್ ಕಾಂಪಿಟೆನ್ಸಿ ಟ್ರಸ್ಟ್‍ನ ಡಾ. ಶಶಾಂಕ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *