ಚಾಮರಾಜನಗರ: ಬೆಂಗಳೂರು ಗ್ರಾಮಾಂತರ ಹಾಗೂ ಹಾವೇರಿ ಜಿಲ್ಲೆಗಳ ಪಟಾಕಿ ದಾಸ್ತಾನುಗಳಲ್ಲಿ ಇತ್ತೀಚೆಗೆ ಅಗ್ನಿ ಅವಘಡ ಸಂಭವಿಸಿದ ಹಿನ್ನಲೆಯಲ್ಲಿ ಸರ್ಕಾರದಿಂದ ನೀಡಲಾದ ನಿರ್ದೇಶನಗಳ ಅನುಸಾರ ಚಾಮರಾಜನಗರ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯಿಂದ ಅವಘಡಗಳಿಗೆ ಆಸ್ಪದ ನೀಡದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಜಿಲ್ಲೆಯಲ್ಲಿ ಅಸುರಕ್ಷಿತ ಮತ್ತು ಅನಧಿಕೃತವಾಗಿ ಪಟಾಕಿ ಸಂಗ್ರಹ ಮಾಡಿ ಮಾನವಹಾನಿ ಹಾಗೂ ಆಸ್ತಿಪಾಸ್ತಿಗಳ ಹಾನಿ ಉಂಟಾಗದಂತೆ ತಡೆಯುವ ಸಂಬಂಧ ಜಿಲ್ಲಾಧಿಕಾರಿಗಳ ಆದೇಶದಂತೆ ಪ್ರತಿ ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್ ರವರ ಅಧ್ಯಕ್ಷತೆಯಲ್ಲಿ ಪೌರಾಯುಕ್ತರು ನಗರಸಭೆ, ಕಾರ್ಯನಿರ್ವಹಣಾಧಿಕಾರಿಗಳು ತಾಲ್ಲೂಕು ಪಂಚಾಯತ್, ಪೊಲೀಸ್ ವೃತ್ತ ನಿರೀಕ್ಷಕರು, ಪರಿಸರ ಅಧಿಕಾರಿಗಳು, ತಾಲ್ಲೂಕು ಅಗ್ನಿಶಾಮಕ ಠಾಣಾಧಿಕಾರಿಗಳು, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಚೆಸ್ಕಾಂ ರವರನ್ನೊಳಗೊಂಡ ಜಂಟಿ ಪರಿಶೀಲನಾ ತಂಡ ರಚಿಸಿ ಕ್ರಮ ಕೈಗೊಳ್ಳಲಾಗಿದೆ.
ಜಿಲ್ಲೆಯಲ್ಲಿ ಈಗಾಗಲೇ ನಿಯಮ ಉಲ್ಲಂಘನೆ ಸಂಬಂಧ 2 ಪ್ರಕರಣಗಳನ್ನು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಕೊಳ್ಳೇಗಾಲ ಪಟ್ಟಣ ಠಾಣಾ ಮೊ.ನಂ 139/2023 ಕಲಂ 9(ಬಿ) ಸ್ಫೋಟಕ ಕಾಯ್ದೆ ಮತ್ತು 286 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ, ಸುಮಾರು 33 ಕೆ.ಜಿ ತೂಕದ ಪಟಾಕಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಚಾಮರಾಜನಗರ ಪೂರ್ವ ಠಾಣಾ ಮೊ.ನಂ ಮೊ.ನಂ 188/2023 ಕಲಂ 9(ಬಿ) ಸ್ಫೋಟಕ ಕಾಯ್ದೆ ಮತ್ತು 286 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ, ಸುಮಾರು 900 ಕೆ.ಜಿ ತೂಕದ ಪಟಾಕಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸರ್ವೋಚ್ಛ ನ್ಯಾಯಾಲಯದ ರಿಟ್ ಪಿಟಿಷನ್ ಸಂಖ್ಯೆ: 728/2015 ರಲ್ಲಿ ಹಾಗೂ ಈ ಸಂಬಂಧ 29-10-2021 ರಲ್ಲಿ ನೀಡಿದ ಮಧ್ಯಂತರ ಆದೇಶಗಳಲ್ಲಿ ಸುರಕ್ಷಿತವಾದ ಹಸಿರು ಪಟಾಕಿಗಳನ್ನು ಮಾತ್ರ ಬಳಸುವಂತೆ ಹಾಗೂ ಬೇರಿಯಂ ಸಾಲ್ಟ್ಸ್ ಇನ್ ದಿ ಫೈರ್ ಕ್ರಾಕರ್ಸ್, 2) ಮ್ಯಾನ್ಯುಫ್ಯಾಕ್ಚರ್, ಸೇಲ್ ಅಂಡ್ ಯೂಸ್ ಜಾಯಿಂಟ್ ಫೈರ್ ಕ್ರಾಕರ್ಸ್, 3) ಟ್ರಾನ್ಸ್ ಫೋರ್ಟಿಂಗ್ ಅಂಡ್ ಸೆಲ್ಲಿಂಗ್ ದೆಮ್ ಅಕ್ರಾಸ್ ಕಂಟ್ರಿ ಫಿಜಿಕಲಿ ಮತ್ತು/ ಅಥವಾ ಆನ್‍ಲೈನ್ ನಿಷೇಧಿಸಿ ಸೂಚನೆಗಳನ್ನು ನೀಡಿದ್ದು, ಅದರಂತೆ ನಿಯಮ ಬಾಹಿರವಾಗಿ ಪಟಾಕಿಗಳನ್ನು ತಯಾರಿಸುವ, ಸಾಗಾಣಿಕೆ ಮಾಡುವ, ಮಾರುವವರ ಹಾಗೂ ದಾಸ್ತಾನು ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತಿದೆ.
ಜಿಲ್ಲೆಯ ಸಾರ್ವಜನಿಕರು ನಿಯಮ ಬಾಹಿರವಾಗಿ ಅಕ್ರಮವಾಗಿ ಪಟಾಕಿಗಳ ತಯಾರಿಕೆ, ಸಾಗಾಣಿಕೆ, ಮಾರಾಟ ಅಥವಾ ದಾಸ್ತಾನು ಮಾಡುವುದು ಕಂಡು ಬಂದಲ್ಲಿ ತಕ್ಷಣ ಪೊಲೀಸ್ ಕಂಟ್ರೋಲ್ ರೂಂ ನ ದೂ.ಸಂ 08226-222383, ಮೊ.ಸಂ 9480804600 ಗೆ ಮಾಹಿತಿ ನೀಡುವಂತೆ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿಸಾಹು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.