ಆರೋಗ್ಯ, ಶಿಕ್ಷಣ, ಮೂಲಸೌಕರ್ಯಗಳಿಗೆ ಆದ್ಯತೆ : ಜಿಲ್ಲಾಧಿಕಾರಿ ಶಿಲ್ಪಾ ನಾಗ್

ಚಾಮರಾಜನಗರ: ಜಿಲ್ಲೆಯಲ್ಲಿ ಆರೋಗ್ಯ, ಶಿಕ್ಷಣ ಹಾಗೂ ಮೂಲ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.

ನಗರದ ಯಡಪುರದಲ್ಲಿರುವ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧನಾ ಆಸ್ಪತ್ರೆಯಲ್ಲಿ ಇಂದು ಆಯೋಜಿಸಲಾಗಿದ್ದ ನಿರಂತರ ವೈದ್ಯಕೀಯ ಕಲಿಕೆ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಂಚಾರಿ ಆರೋಗ್ಯ ಕೇಂದ್ರಗಳು ಹಾಗೂ ತಾಲೂಕು ಆಸ್ಪತ್ರೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಅಲ್ಲದೆ, ಕಾಲಕಾಲಕ್ಕೆ ಆರೋಗ್ಯ ತಪಾಸಣಾ ಶಿಬಿರಗಳ ಆಯೋಜನೆಯಿಂದ ಜನರು ಉತ್ತಮ ಆರೋಗ್ಯ ಹೊಂದಲು ಸಾಧ್ಯವಾಗಿದೆ ಎಂದರು.

ಜಿಲ್ಲೆಯ ಬುಡಕಟ್ಟು ಜನಾಂಗದಲ್ಲಿ ಸಿಕಲ್‍ಸೆಲ್ ಅನೀಮಿಯಾ ತೊಂದರೆ ಹೆಚ್ಚಾಗಿದ್ದು, 35 ಸಾವಿರ ಬುಡಕಟ್ಟು ಜನರಿಗೆ ಅನೀಮಿಯಾ ಸ್ಕ್ರೀನಿಂಗ್ ಪ್ರಾರಂಭಿಸಲಾಗಿದೆ. ಗಿರಿಜನರಿಗೆ ಆರೋಗ್ಯ ಸೇವೆ ಕಲ್ಪಿಸಲು ಕ್ರಮ ವಹಿಸಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜಿನ ಬೋಧನಾ ಆಸ್ಪತ್ರೆ ಆರಂಭಕ್ಕೂ ಮೊದಲು ಕೊಳ್ಳೇಗಾಲ, ಹನೂರು ಭಾಗದ ಜನರು ತಮಿಳುನಾಡು ಆಸ್ಪತ್ರೆಗೆ ಹಾಗೂ ಚಾಮರಾಜನಗರ ಹಾಗೂ ಗುಂಡ್ಲುಪೇಟೆ ಜನತೆ ಮೈಸೂರಿನ ಆಸ್ಪತ್ರೆಗಳಿಗೆ ಹೋಗುವ ಪರಿಸ್ಥಿತಿ ಇತ್ತು. ಆದರೆ ನಗರದಲ್ಲಿ ವೈದ್ಯಕೀಯ ಆಸ್ಪತ್ರೆ ಆರಂಭದ ಬಳಿಕ ವೈದ್ಯಕೀಯ ಸೇವೆ ಇಲ್ಲಿಯೇ ಲಭ್ಯವಾಗುತ್ತಿದ್ದು, ಹೊರ ಹೋಗಬೇಕಾದ ಪರಿಸ್ಥಿತಿ ದೂರವಾಗಿದೆ ಎಂದು ತಿಳಿಸಿದರು.

ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಮೂಲಕ ಜನರಿಗೆ ಉಚಿತವಾಗಿ ಕೀಲು ಮತ್ತು ಮೂಳೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಜನತೆ ಈ ಸೇವೆಯನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಸಲಹೆ ಮಾಡಿದರು.

ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕರಾದ ಡಾ. ಎಚ್.ಜಿ. ಮಂಜುನಾಥ್ ಅವರು ಮಾತನಾಡಿ ವೈದ್ಯಕೀಯ ಬೋಧನಾ ಆಸ್ಪತ್ರೆಯಲ್ಲಿ ಅನೇಕ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಇಲ್ಲಿ ನಡೆಸುವ ಕೀಲು ಮತ್ತು ಮೂಳೆ ಶಸ್ತ್ರಚಿಕಿತ್ಸೆ ಇಡೀ ರಾಜ್ಯದಲ್ಲಿಯೇ ಉತ್ತಮ ಹೆಸರು ಪಡೆದಿದೆ. ರಾಜ್ಯದ ಅನೇಕ ವಿವಿಧೆಡೆಗಳಿಂದ ಜನರು ಆಗಮಿಸಿ ಸೇವೆ ಪಡೆಯುತ್ತಿದ್ದಾರೆ ಎಂದರು.

ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕೀಲು ಮತ್ತು ಮೂಳೆ ವಿಭಾಗದ ಮುಖ್ಯಸ್ಥರಾದ ಡಾ. ಸಿ.ವಿ. ಮಾರುತಿ ಅವರು ಮಾತನಾಡಿ ಈ ಬಾರಿ 5 ಜನರಿಗೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದ್ದು, 20 ಮಂದಿ ತಜ್ಞ ವೈದ್ಯರ ತಂಡಗಳು 5 ಥಿಯೇಟರ್‍ಗಳಲ್ಲಿ ಶಸ್ತ್ರಚಿಕಿತ್ಸೆ ನೆರವೇರಿಸುತ್ತಿದ್ದಾರೆ.

ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಕಾರ್ಡು ಹೊಂದಿರುವವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಕೃಷ್ಣಪ್ರಸಾದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಿದಂಬರ, ಕೀಲು ಮತ್ತು ಮೂಳೆ ತಜ್ಞರಾದ ಡಾ. ಶೇಖ್ ಸಾಲ್ವ, ಡಾ. ರವಿಚಂದ್ರ, ಡಾ. ರಾಘವೇಂದ್ರ, ಡಾ. ಶಿವಣ್ಣ, ಇತರರು ಇದ್ದರು.

ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧನಾ ಆಸ್ಪತ್ರೆಯಲ್ಲಿ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ 5 ಜನರಿಗೆ ನೆರವೇರಿಸಿದ ಮೂಳೆ ಸಂಬಂಧಿ ಶಸ್ತ್ರಚಿಕಿತ್ಸೆಯ ನೇರ ಪ್ರಾತ್ಯಕ್ಷಿಕೆ ನಡೆಯಿತು. ಡಾ. ಮಾರುತಿ, ಡಾ. ಗಿರೀಶ್‍ಚಂದ್ರ, ಡಾ. ರಾಘವೇಂದ್ರ ಕೆಂಭಾವಿ, ಡಾ. ವಿಜಯ, ಡಾ. ಎಂ.ಎಸ್. ರಾಘವೇಂದ್ರ, ಡಾ. ಸಂತೋಷ್, ಡಾ. ಗಿರೀಶ್, ಡಾ. ಶ್ರೇಯಸ್, ಡಾ. ಅರ್ಜುನ್, ಡಾ. ನಮ್ರತಾ ನೇತೃತ್ವದ ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸಿತು.

Leave a Reply

Your email address will not be published. Required fields are marked *