ಚಾಮರಾಜನಗರ: ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಹೆಚ್ಚುತ್ತಿದ್ದು, 4 ಜನರಲ್ಲಿ ರಲ್ಲಿ ಒಬ್ಬರಿಗೆ ಸ್ತನ ಕ್ಯಾನ್ಸರ್ ಮತ್ತು 8 ಜನರಲ್ಲಿ ಒಬ್ಬರಿಗೆ ಗರ್ಭಕಂಠ ಕ್ಯಾನ್ಸರ್ ಪತ್ತೆಯಾಗುತ್ತಿದೆ ಎಂದು ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧನಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ, ಅಸ್ತಿ ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಹಾಗೂ ವಿಭಾಗ ಮುಖ್ಯಸ್ಥ ಡಾ. ಸಿ.ವಿ. ಮಾರುತಿ ತಿಳಿಸಿದರು.
ಚಾಮರಾಜನಗರದ ಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘ ಹಾಗೂ ವಿಜ್ಞಾನ ಸಂಘದ ವತಿಯಿಂದ ನಡೆದ ವಿಶ್ವ ಕ್ಯಾನ್ಸರ್ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರೋಗ್ಯಕರ ದಿನಚರಿ ಅತ್ಯವಶ್ಯಕ. ಉತ್ತಮ ಆಹಾರ, ಹೆಚ್ಚು ನೀರು ಕುಡಿಯುವುದು ಹಾಗೂ ವ್ಯಾಯಾಮ ಆರೋಗ್ಯಕ್ಕೆ ಮುಖ್ಯ. ಇಂದು 100 ರಲ್ಲಿ 15 ಮಂದಿಗೆ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಮದ್ಯಪಾನ, ಧೂಮಪಾನ, ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ಹೆಚ್ಚಾಗಿ ಸೇವಿಸುವುದು ಹಾಗೂ ಅನಾವಶ್ಯಕ ಎಕ್ಸ್ ರೇ ಮತ್ತು ಸಿಟಿ ಸ್ಕ್ಯಾನ್ ಮಾಡಿಸುವುದನ್ನು ಆದಷ್ಟು ತಡೆಯಬೇಕು ಎಂದರು.
ತೀವ್ರ ನೋವು, ದೇಹದ ವಿವಿಧ ಭಾಗಗಳಲ್ಲಿ ಗಂಟುಗಳು, ಊತ, ಸುಲಭವಾಗಿ ಮೂಳೆ ಮುರಿಯುವಿಕೆ, ತೀವ್ರ ಕಾಲದವರೆಗೆ ಜ್ವರ, ಹಸಿವುವಾಗದಿರುವುದು ಹಾಗೂ ತೂಕದಲ್ಲಿ ಭಾರಿ ಇಳಿಕೆಯಾಗುವುದು ಕ್ಯಾನ್ಸರ್‌ನ ಪ್ರಮುಖ ಲಕ್ಷಣಗಳಾಗಿದ್ದು, ಇವು ಕಾಣಿಸಿಕೊಂಡ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು ಎಂದು ಹೇಳಿದರು.
ಇಂದು ಇರುವ ನವೀನ ವೈದ್ಯಕೀಯ ಸೌಲಭ್ಯಗಳಿಂದ ಹಲವು ಕ್ಯಾನ್ಸರ್‌ಗಳನ್ನು ಪ್ರಾರಂಭದ ಹಂತದಲ್ಲೇ ವಾಸಿ ಮಾಡುವುದರ ಜೊತೆಗೆ ರೋಗಿಗಳು ತಮ್ಮ ಮುಂಚಿನ ಜೀವನಕ್ಕೆ ಮರಳಬಹುದು ಎಂದರು. ಒಂದು ಅಥವಾ ಎರಡು ವರ್ಷಗಳಿಗೊಮ್ಮೆ ಕ್ಯಾನ್ಸರ್ ಪರೀಕ್ಷೆ ಮಾಡಿಸಿಕೊಳ್ಳುವುದು ಮತ್ತು ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹೆಚ್ಚುತ್ತಿರುವುದರಿಂದ ಸ್ವಪರೀಕ್ಷೆ ಮಾಡಿಕೊಳ್ಳುವುದು, ಕ್ಯಾನ್ಸರ್ ಮುನ್ನೆಚ್ಚರಿಕಾ ಕ್ರಮಗಳೆಂದು ತಿಳಿಸಿದರು.
ಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ನಾಗರಾಜು ಮಾತನಾಡಿ, ಕ್ಯಾನ್ಸರ್ ಹೆಚ್ಚುತ್ತಿರುವ ಕಾರಣ ಜಾಗೃತಿ ಅವಶ್ಯ. ಈ ನಿಟ್ಟಿನಲ್ಲಿ ನಮ್ಮ ಜೆಎಸ್ಎಸ್ ಮಹಾವಿದ್ಯಾಲಯವು ಹಿರಿಯ ವಿದ್ಯಾರ್ಥಿಗಳ ಸಂಘದೊಂದಿಗೆ ಏರ್ಪಡಿಸಿರುವ ಈ ಕಾರ್ಯಕ್ರಮವನ್ನು ಎಲ್ಲಾ ಪ್ರಶಿಕ್ಷಣಾರ್ಥಿಗಳು ಸದುಪಯೋಗ ಪಡಿಸಿಕೊಂಡು ಪರಿಚಿತರಿಗೆ ಜಾಗೃತಿ ಮೂಡಿಸಬೇಕೆಂದರು. ಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಕೆ. ಸಿ. ಬಸವಣ್ಣ, ಜಿಲ್ಲಾ ಏಡ್ಡ್ ನಿಯಂತ್ರಣ ಘಟಕದ ಮೇಲ್ವಿಚಾರಕ ಮಹದೇವಪ್ರಸಾದ್, ಪ್ರಾಧ್ಯಾಪಕರಾದ ರಾಜು, ಸುರೇಶ್, ಯೋಗೇಶ್, ಸಿದ್ದರಾಜು, ಶಿವರಾಜ ಅರಸ್, ಶಿವಕುಮಾರ್, ಅರುಣಾಶ್ರೀ, ಉಪಸ್ಥಿತರಿದ್ದರು.