ಕಣ್ಣಿನ ಸಮಗ್ರ ಆರೋಗ್ಯ ಕುರಿತ ಆಶಾಕಿರಣ ಆಂದೋಲನ : ಜಿಲ್ಲೆಯಲ್ಲಿ ಸಮರ್ಪಕ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ಸೂಚನೆ

ಚಾಮರಾಜನಗರ: ವಿವಿಧ ಕಾರಣಗಳಿಂದಾಗುವ ಅಂಧತ್ವ ಪ್ರಮಾಣವನ್ನು ಇಳಿಸುವ ಉದ್ದೇಶದಿಂದ ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಸಮಗ್ರ ನೇತ್ರ ತಪಾಸಣೆ ಮತ್ತು ಉಚಿತ ಶಸ್ತ್ರ ಚಿಕಿತ್ಸಾ ಶಿಬಿರ ಆಶಾಕಿರಣ ಆಂದೋಲನವನ್ನು ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ಅವರು ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಸಮಗ್ರ ನೇತ್ರ ತಪಾಸಣೆ ಮತ್ತು ಉಚಿತ ಶಸ್ತ್ರ ಚಿಕಿತ್ಸಾ ಶಿಬಿರ ಆಶಾಕಿರಣ ಆಂದೋಲನ ಕುರಿತ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಂಧತ್ವ ಪ್ರಮಾಣವನ್ನು ತಗ್ಗಿಸುವ ಮಹತ್ತರ ಉದ್ದೇಶವನ್ನಿಟ್ಟುಕೊಂಡು ಸಮಗ್ರ ನೇತ್ರ ತಪಾಸಣೆ ಶಸ್ತ್ರ ಚಿಕಿತ್ಸಾ ಶಿಬಿರಗಳನ್ನು ನಡೆಸಲು ಪ್ರಾಯೋಜಿಕ ಯೋಜನೆಯಡಿ ಆಯ್ಕೆಯಾಗಿರುವ ರಾಜ್ಯದ ನಾಲ್ಕು ಜಿಲ್ಲೆಗಳ ಪೈಕಿ ಚಾಮರಾಜನಗರವು ಸಹ ಒಂದಾಗಿದೆ. ಕಣ್ಣಿನ ಆರೋಗ್ಯ ರಕ್ಷಣೆಗೆ ಒತ್ತು ನೀಡಲಿರುವ ಇಂತಹ ಸದಾವಕಾಶವನ್ನು ಜಿಲ್ಲೆ ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ. ಹೀಗಾಗಿ ಆಶಾಕಿರಣ ಆಂದೋಲನವನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕೆಂದು ಜಿಲ್ಲಾಧಿಕಾರಿಯವರು ತಿಳಿಸಿದರು.

ಜಿಲ್ಲೆಯ ಎಲ್ಲಾ ನಾಗರಿಕರಿಗೆ ಕಣ್ಣಿನ ತಪಾಸಣೆ ನಡೆಸಲಾಗುತ್ತದೆ. ಎರಡು ಹಂತಗಳಲ್ಲಿ ಕಣ್ಣಿನ ತಪಾಸಣೆ ಕಾರ್ಯ ನಡೆಯಲಿದ್ದು, ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ, ಕಣ್ಣಿನ ಇತರೆ ತೊಂದರೆಗಳಿಗೆ ಉಚಿತವಾಗಿ ಚಿಕಿತ್ಸೆ ಕನ್ನಡಕ ನೀಡಲಾಗುತ್ತದೆ. ಮನೆ ಮನೆಗೆ ಭೇಟಿ ನೀಡಿ ಕಣ್ಣಿನ ತಪಾಸಣೆ, ನಿರ್ವಹಣೆ ಉತ್ತಮ ದೃಷ್ಠಿಯ ಪ್ರಾಮುಖ್ಯತೆ, ಕಣ್ಣುಗಳ ಸಂರಕ್ಷಣೆ ಕುರಿತು ಕಾರ್ಯ ಚಟುವಟಿಕೆಗಳನ್ನು ನಡೆಸಿ ಅರಿವು ಮೂಡಿಸಲಾಗುತ್ತದೆ ಎಂದರು.

ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನೇತ್ರ ತಪಾಸಣೆ ಹಾಗೂ ಇದರ ಸಂಬಂಧಿ ಚಟುವಟಿಕೆಗಳಿಗೆ ಪ್ರತ್ಯೇಕ ಕಾರ್ಯ ಯೋಜನೆ ರೂಪಿಸಬೇಕು. ಕಣ್ಣಿನ ಪೊರೆಯಿಂದ ಗುರುತಿಸಲ್ಪಡುವವರಿಗೆ ಹತ್ತಿರದ ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತು ಸರ್ಕಾರೇತರ ಸ್ವಯಂ ಸಂಸ್ಥೆಗಳ ನೆರವು ಪಡೆದು ಶಸ್ತ್ರ ಚಿಕಿತ್ಸೆಗೆ ಶಿಫಾರಸು ಮಾಡಬೇಕು. ಶಿಬಿರಗಳ ಆಯೋಜನೆಗೆ ಸ್ವಯಂ ಸೇವಾ ಸಂಸ್ಥೆಗಳ ಸಹಕಾರ ಪಡೆಯುವುದರೊಂದಿಗೆ ಇತರರ ಸೇವೆಯನ್ನು ಪಡೆಯಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

ಸಮಗ್ರ ನೇತ್ರ ತಪಾಸಣೆ ಆಂದೋಲನಕ್ಕೆ ವಿವಿಧ ಇಲಾಖೆಗಳು ತೊಡಗಿಕೊಳ್ಳಬೇಕು. ಕಾಡಂಚಿನ ಗ್ರಾಮಗಳು, ಗುಡ್ಡಗಾಡು ಪ್ರದೇಶಗಳಲ್ಲಿಯೂ ತಪಾಸಣಾ ಕಾರ್ಯ ನಡೆಯಲಿರುವುದರಿಂದ ಅರಣ್ಯ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಅಗತ್ಯ ಅನುಕೂಲಗಳನ್ನು ಕಲ್ಪಿಸಬೇಕು. ಆಶಾ ಕಾರ್ಯಕರ್ತೆಯರ ಸಹಕಾರ ಪ್ರಮುಖವಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಈ ವಿಶೇಷ ಆರೋಗ್ಯ ಕಾರ್ಯಕ್ರಮವನ್ನು ಎಲ್ಲಾ ರೀತಿಯ ಸಮನ್ವಯದೊಂದಿಗೆ ಫಲಪ್ರದ ಗೊಳಿಸಬೇಕೆಂದು ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ಅವರು ತಿಳಿಸಿದರು.

ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಸರಸ್ವತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ, ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿ ಹಾಗೂ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ. ಪಿ. ಚಂದ್ರಶೇಖರ್, ಹಿರಿಯ ನೇತ್ರ ತಜ್ಞರಾದ ಡಾ. ಎಸ್. ಬಾಲಸುಬ್ರಹ್ಮಣ್ಯ, ಡಾ. ದೈವಿಕ್ ಸಿ.ಎಂ, ಆರ್.ಸಿ.ಹೆಚ್. ಅಧಿಕಾರಿ ಡಾ. ಮಂಜುನಾಥ್, ಜಿಲ್ಲಾ ಸರ್ವಲೆನ್ಸ್ ಅಧಿಕಾರಿ ಡಾ. ನಾಗರಾಜು, ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ಪ್ರಕಾಶ್, ಡಾ. ಗೋಪಾಲ್, ಡಾ. ಶ್ರೀನಿವಾಸ್, ಡಾ. ಜಿ. ಗಿರಿದಾಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರಾದ ಗೀತಾಲಕ್ಷ್ಮಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ, ಇತರೆ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಇದ್ದರು.

Leave a Reply

Your email address will not be published. Required fields are marked *