ಕಾಲುಬಾಯಿ ಜ್ವರ ಲಸಿಕೆ ಅಭಿಯಾನ : ಸದುಪಯೋಗಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಮನವಿ

ಚಾಮರಾಜನಗರ: ಜಾನುವಾರುಗಳಿಗೆ ಕಾಲುಬಾಯಿ ಜ್ವರ ಲಸಿಕೆ ನೀಡುವ ಅಭಿಯಾನ ಸೆಪ್ಟೆಂಬರ್ 26ರಿಂದ ಅಕ್ಟೋಬರ್ 25ರವರೆಗೆ ನಡೆಯಲಿದ್ದು, ರೈತರು, ಜಾನುವಾರುಗಳ ಮಾಲೀಕರು ತಮ್ಮ ಜಾನುವಾರುಗಳಿಗೆ ಲಸಿಕೆ ಕೊಡಿಸುವ ಮೂಲಕ ಕಾರ್ಯಕ್ರಮದ ಸದುಪಯೋಗ ಮಾಡಿಕೊಳ್ಳುವಂತೆ ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿಂದು ಜನತಾ ದರ್ಶನ ಕಾರ್ಯಕ್ರಮದ ವೇದಿಕೆಯಲ್ಲಿ 4ನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕೆ ಅಭಿಯಾನದ ಪೋಸ್ಟರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಜಾನುವಾರು, ರಾಸುಗಳನ್ನು ಕಾಲುಬಾಯಿ ರೋಗದಿಂದ ಮುಕ್ತಗೊಳಿಸಲು ಲಸಿಕೆ ನೀಡುವ 4ನೇ ಸುತ್ತಿನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಯವರು ಮೈಸೂರಿನಲ್ಲಿ ಸೆಪ್ಟೆಂಬರ್ 26ರಂದು ಚಾಲನೆ ನೀಡಲಿದ್ದಾರೆ. ಲಸಿಕೆ ನೀಡುವ ಕಾರ್ಯದಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲಿಯೇ ನಾಲ್ಕನೇ ಸ್ಥಾನದಲ್ಲಿದೆ ಎಂದರು.

ರಾಸುಗಳಿಗೆ ಕಾಯಿಲೆ ಬರದಂತೆ ತಡೆಗಟ್ಟಿ ಆರೋಗ್ಯ ರಕ್ಷಣೆಗೆ ಸರ್ಕಾರ ಲಸಿಕೆ ನೀಡುವ ಅಭಿಯಾನ ನಡೆಸುತ್ತಿದೆ. ಜಿಲ್ಲೆಯಲ್ಲೂ ಕಾಲುಬಾಯಿ ಜ್ವರದ ಲಸಿಕೆ ನೀಡುವ ಕಾರ್ಯಕ್ರಮಕ್ಕಾಗಿ ಎಲ್ಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಪಶುಪಾಲನಾ, ಪಶು ವೈದ್ಯಕೀಯ ಸೇವಾ ಇಲಾಖೆಯ ತಂಡದ ಲಸಿಕೆದಾರರು, ಮೇಲ್ವಿಚಾರಕರು ಶೇ. 100ರಷ್ಟು ಪ್ರಗತಿ ಸಾಧಿಸಲು ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಲಸಿಕಾ ಕಾರ್ಯಕ್ರಮದಲ್ಲಿ ಒಟ್ಟು 259279 ಜಾನುವಾರುಗಳಿಗೆ ಕಾಲುಬಾಯಿ ಜ್ವರ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತದೆ. ಚಾಮರಾಜನಗರ ಜಿಲ್ಲೆಯಲ್ಲಿ 27 ತಂಡ ರಚಿಸಲಾಗಿದ್ದು, ಪ್ರತಿ ಗ್ರಾಮಗಳಲ್ಲಿ ಬೆಳಿಗ್ಗೆ 6ರಿಂದ 10.30 ಗಂಟೆ ಹಾಗೂ ಸಂಜೆ 5 ರಿಂದ 7 ಗಂಟೆಯವರೆಗೆ ಲಸಿಕೆ ನೀಡಲಾಗುತ್ತದೆ. ಲಸಿಕಾ ತಂಡವು ಗ್ರಾಮಗಳಿಗೆ ಭೇಟಿ ನೀಡಿದಾಗ ರೈತರು, ಜಾನುವಾರು ಮಾಲೀಕರು ತಮ್ಮ ಜಾನುವಾರುಗಳಿಗೆ ಕಾಲುಬಾಯಿ ಜ್ವರದ ಲಸಿಕೆಯನ್ನು ಹಾಕಿಸಿ ರೋಗಮುಕ್ತಗೊಳಿಸಲು ಅಗತ್ಯ ಸಹಕಾರ ನೀಡಬೇಕೆಂದು ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಮನವಿ ಮಾಡಿದರು.

ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಎ.ಆರ್. ಕೃಷ್ಣಮೂರ್ತಿ, ಹೆಚ್.ಎಂ. ಗಣೇಶ್ ಪ್ರಸಾದ್, ಸಹಕಾರ ಇಲಾಖೆ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರಾದ ಎನ್. ಮಂಜುನಾಥ್ ಪ್ರಸಾದ್, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಉಪವಿಭಾಗಾಧಿಕಾರಿ ಮಹೇಶ್, ಬಿ.ಆರ್.ಟಿ. ಹುಲಿ ಸಂರಕ್ಷಿತ ಅರಣ್ಯ ಸಂರಕ್ಷಣಾಧಿಕಾರಿ ದೀಪಾ ಕಂಟ್ರಾಕ್ಟರ್, ಬಂಡೀಪುರ ಹುಲಿ ಸಂರಕ್ಷಿತಾ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಕುಮಾರ್, ಮಲೈ ಮಹದೇಶ್ವರ ವನ್ಯ ಜೀವಿ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕುಮಾರ್, ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *