ಚಾಮರಾಜನಗರ: ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಲಭ್ಯತೆಯಲ್ಲಿ ಯಾವುದೇ ಸಮಸ್ಯೆ ತಲೆದೋರದಂತೆ ಮುನ್ನೆಚ್ಚರಿಕೆ ಕ್ರಮವಹಿಸಲು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಯಾವುದೇ ಭಾಗದಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವಿನ ಲಭ್ಯತೆ, ಬೇಡಿಕೆ, ಪೂರೈಕೆಯಲ್ಲಿ ತೊಂದರೆ ಎದುರಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಪ್ರಸ್ತುತ ಸಾಲಿನ ಮಾರ್ಚ್ ಅಂತ್ಯದವರೆಗೆ ಮುನ್ನೆಚ್ಚರಿಕೆ ವಹಿಸಿ ಯಾವುದೇ ದೂರು, ಸಮಸ್ಯೆಗಳಿಗೆ ಅವಕಾಶವಾಗದಂತೆ ಎಲ್ಲಾ ಇಲಾಖೆಗಳ ತಾಲೂಕು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಈ ಸಂಬಂಧ ನಿಗಾವಹಿಸಿ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿಯವರು ಸೂಚಿಸಿದರು.
ತಾಲೂಕುಗಳಲ್ಲಿ ನೀರಿನ ಕೊರತೆಯಾಗದಂತೆ ಖಾಸಗಿ ಬೋರ್ವೆಲ್ಗಳನ್ನು ಗುರುತಿಸಬೇಕು. ಹೆಚ್ಚುವರಿ ಬೋರ್ವೆಲ್ಗಳ ಅವಶ್ಯವಿದ್ದಲ್ಲಿ ಅವುಗಳ ಪಟ್ಟಿ ಸಲ್ಲಿಸಬೇಕು. ಕುಡಿಯುವ ನೀರಿನ ಶುದ್ಧತೆ ಹಾಗೂ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ನೀರಿನ ಮಾದರಿ ಪರೀಕ್ಷಿಸಬೇಕು.
ಇದಕ್ಕಾಗಿ ನಿಗದಿಪಡಿಸಲಾದ ಮಾನದಂಡಗಳನ್ನು ಅನುಸರಿಸಬೇಕು. ಆರ್.ಒ. ಪ್ಲಾಂಟ್ಗಳ ಸುಸ್ಥಿತಿ ಕಾಪಾಡಿಕೊಳ್ಳಬೇಕು. ಬೋರ್ವೆಲ್ ಹಾಗೂ ಪೈಪ್ಲೈನ್ ನೀರು ಕಲುಷಿತವಾಗದಂತೆ ನೋಡಿಕೊಳ್ಳಬೇಕು. ತಿಂಗಳಿಗೊಮ್ಮೆ ಕುಡಿಯುವ ನೀರಿನ ಶುದ್ದತೆ ಬಗ್ಗೆ ಖುದ್ದಾಗಿ ಸ್ಥಳ ಪರಿಶೀಲಿಸಿ ಖಚಿತಪಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಯವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲೆಯ ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ವಾರ್ಡುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ನಿರ್ಲಕ್ಷ್ಯ ವಹಿಸಬಾರದು. ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಾಗಲಿದೆಯೇ ಎಂಬ ಬಗ್ಗೆ ಅಧಿಕಾರಿಗಳು ಮೊದಲೆ ಮನಗಂಡು ಕಾರ್ಯನಿರ್ವಹಿಸಬೇಕು. ನಗರದ ಜೋಡಿರಸ್ತೆಯಲ್ಲಿರುವ ಚರಂಡಿಗಳು ಅಧಿಕ ತ್ಯಾಜ್ಯದಿಂದ ಆಗಾಗ್ಗೆ ಕಟ್ಟಿಕೊಳ್ಳುತ್ತಿದ್ದು, ಮಳೆ ಹೆಚ್ಚಾದ ಸಂದರ್ಭದಲ್ಲಿ ಪಾದಚಾರಿಗಳಿಗೆ, ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ ತ್ಯಾಜ್ಯ ವಿಲೇವಾರಿ ಮಾಡುವಂತೆ ನಗರಸಭೆ ಹಾಗೂ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಾನುವಾರುಗಳಿಗೆ ಮೇವಿನ ಲಭ್ಯತೆಗಾಗಿ ಚಾಮರಾಜನಗರ ತಾಲೂಕಿಗೆ 570, ಗುಂಡ್ಲುಪೇಟೆ 354, ಕೊಳ್ಳೆಗಾಲ 367, ಹನೂರು 270 ಹಾಗೂ ಯಳಂದೂರು ತಾಲೂಕಿಗೆ 426 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 2287 ಮೇವಿನ ಕಿರು (ಕಿಟ್) ಪೊಟ್ಟಣಗಳನ್ನು ರೈತರಿಗೆ ಉಚಿತವಾಗಿ ಹಂಚಿಕೆ ಮಾಡಲಾಗಿದೆ. ಮೇವಿನ ಕಿಟ್ಗಳನ್ನು ಮನೆಮನೆಗೆ ತಲುಪಿಸುವ ನಿಟ್ಟಿನಲ್ಲಿ ಸರಬರಾಜನ್ನು ಚುರುಕುಗೊಳಿಸಿ, ಅದಷ್ಟು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದರು.
ಮೇವನ್ನು ಸಾಮಾಜಿಕ ಅರಣ್ಯ ಯೋಜನೆ, ತೋಟಗಾರಿಕಾ ಬೆಳೆಗಳ ಮಧ್ಯೆ, ಗೋಮಾಳ, ಶಾಶ್ವತ ಹುಲ್ಲುಗಾವಲು ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯಲು ಸೂಕ್ಷ್ಮ ಕಾರ್ಯಯೋಜನೆ ರೂಪಿಸಬೇಕು. ನರೇಗಾ ಯೋಜನೆ ಅನುಷ್ಠಾನದಲ್ಲಿ ಮೇವಿನ ಬೀಜಗಳನ್ನು ರೈತರಿಗೆ ವಿತರಿಸಿ ಪ್ರೋತ್ಸಾಹಿಸಬೇಕು. ಮೇವಿನ ಬೀಜಗಳ ಕಿಟ್ ವಿತರಣೆಯಲ್ಲಿ ತಾಂತ್ರಿಕ ಅನುಷ್ಠಾನಕ್ಕೆ ಸಂಬಂಧಪಟ್ಟ ಆಯಾ ಗ್ರಾಮ ಪಂಚಾಯಿತಿ ಸಹಕಾರ ಪಡೆಯಬೇಕು. ಈಗಾಗಲೇ ಮೇವಿನ ಕಿಟ್ಗಳನ್ನು ವಿತರಿಸಿರುವ ಗ್ರಾಮ ಪಂಚಾಯಿತಿವಾರು ಪಟ್ಟಿಯನ್ನು 15 ದಿನದೊಳಗೆ ಸಲ್ಲಿಸಬೇಕು. ಎಲ್ಲಾ ತಾಲೂಕುಗಳ ತಹಶೀಲ್ದಾರರು ಕುಡಿಯುವ ನೀರು ಹಾಗೂ ಮೇವು ಕುರಿತು ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್ಪೋರ್ಸ್ ಸಭೆ ನಡೆಸಿ ನವೆಂಬರ್ 30ರೊಳಗೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಯವರು ತಿಳಿಸಿದರು.
ಇನ್ನುಳಿದಂತೆ ಕೃಷಿ, ತೋಟಗಾರಿಕೆ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಸಾಧಿಸಿರುವ ಪ್ರಗತಿಯನ್ನು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಪರಿಶೀಲಿಸಿ ಅಗತ್ಯ ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಎಂ.ವಿ. ಸುಧಾ, ಕೃಷಿ ಜಂಟಿ ನಿರ್ದೇಶಕರಾದ ಅಬೀಬ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಮಧುಸೂಧನ್, ನಗರಸಭೆ ಪೌರಾಯುಕ್ತರಾದ ರಾಮದಾಸ್ ಸೇರಿದಂತೆ ಇತರೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.