ಕೆರೆಗಳ ಒತ್ತುವರಿ ತೆರವುಗೊಳಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರ ಸೂಚನೆ

ಚಾಮರಾಜನಗರ: ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಕೆರೆ, ಸರ್ಕಾರಿ ಜಾಗಗಳನ್ನು ಗುರುತಿಸಿ ಅವುಗಳ ತೆರವಿಗೆ ಕ್ರಮವಹಿಸುವಂತೆ ಸಹಕಾರ ಇಲಾಖೆ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರಾದ ಎನ್. ಮಂಜುನಾಥ ಪ್ರಸಾದ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಒತ್ತುವರಿ ಸ್ಥಳಗಳಿಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆಯಬೇಕು. ಕೆರೆಗಳನ್ನು ಸರ್ವೆ ಮಾಡಿಸಿ, ಒತ್ತುವರಿ ತೆರವುಗೊಳಿಸಿ ಅಧಿಕಾರಿಗಳ ಸಮ್ಮುಖದಲ್ಲಿ ಸಂಬಂಧಪಟ್ಟ ಕೆರೆಗಳ ಒಡೆತನದ ಇಲಾಖೆಗಳಿಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯಬೇಕು.

ಬಳಿಕ ಸಂಬಂಧಪಟ್ಟ ಇಲಾಖೆಗಳು ಕೆರೆಗಳ ಸಂರಕ್ಷಣೆ ಪೋಷಣೆ ಮಾಡಬೇಕು. ಮೂಲ ದಾಖಲಾತಿಗಳನ್ನು ಪರಿಶೀಲಿಸಿ ಸರ್ಕಾರಿ ಜಮೀನು, ಆಸ್ತಿಗಳ ಒತ್ತುವರಿ ತೆರವಿಗೂ ಕ್ರಮ ತೆಗೆದುಕೊಳ್ಳಬೇಕು ಎಂದು ಉಸ್ತುವಾರಿ ಕಾರ್ಯದರ್ಶಿಯವರು ತಿಳಿಸಿದರು.

ಸಾಮಾಜಿಕ ಭದ್ರತಾ ಯೋಜನೆಗಳಡಿ ನೀಡಲಾಗುವ ಪಿಂಚಣಿ ಮಂಜೂರಾತಿ ಪ್ರಕ್ರಿಯೆ ತ್ವರಿತವಾಗಿ ಮಾಡಬೇಕು. ಅರ್ಹರು ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸುವುದನ್ನು ಕಾಯಬೇಕಿಲ್ಲ. ವಯಸ್ಸಿನ ಅರ್ಹತೆಗೆ ಅನುಗುಣವಾಗಿ ಫಲಾನುಭವಿಗಳಿಗೆ ಪಿಂಚಣಿ ಸೌಲಭ್ಯ ತಲುಪಿಸಲು ಅಧಿಕಾರಿಗಳೇ ಮುತುವರ್ಜಿ ವಹಿಸಿ ಫಲಾನುಭವಿಗಳ ಮನೆ ಬಾಗಿಲಿಗೆ ಪಿಂಚಣಿ ಮಂಜೂರಾತಿ ತಲುಪಿಸಬೇಕು.

ವಿಶೇಷಚೇತನರಿಗೂ ಪಿಂಚಣಿ ಸೌಲಭ್ಯ ಸಕಾಲಕ್ಕೆ ದೊರಕಬೇಕು ಎಂದರು. ಕಾಡಂಚಿನ ಪ್ರದೇಶದಲ್ಲಿ ಕಂಡುಬರುವ ಜನವಸತಿ ಪ್ರದೇಶಗಳಿಗೆ ಮೂಲ ಸೌಕರ್ಯಗಳು ಸಮರ್ಪಕವಾಗಿ ತಲುಪಬೇಕಿದೆ. ರಸ್ತೆ, ಕುಡಿಯುವ ನೀರು, ಆರೋಗ್ಯ, ಶಾಲೆಯಂತಹ ಅಗತ್ಯ ಸೌಲಭ್ಯಗಳಿಗೆ ಕೊರತೆಯಾಗಬಾರದು. ಸಾರಿಗೆ ವ್ಯವಸ್ಥೆಯು ಇರಬೇಕು. ಅರಣ್ಯ ಪ್ರದೇಶದ ಜನರು, ಬುಡಕಟ್ಟು ಸಮುದಾಯಗಳಿಗೆ ವಿಶೇಷ ಗಮನಹರಿಸಬೇಕು ಎಂದು ಉಸ್ತುವಾರಿ ಕಾರ್ಯದರ್ಶಿಯವರು ಸೂಚಿಸಿದರು.

ಇದೇ ವೇಳೆ ಜಿಲ್ಲಾಧಿಕಾರಿಯವರಾದ ಸಿ.ಟಿ. ಶಿಲ್ಪಾನಾಗ್ ಅವರು ಮಾತನಾಡಿ ಬುಡಕಟ್ಟು ಜನಾಂಗದವರಲ್ಲಿ ರಕ್ತಹೀನತೆಯನ್ನು ಹೋಗಲಾಡಿಸುವ ಉದ್ದೇಶದಿಂದ ಸೆಪ್ಟೆಂಬರ್ ೧ ರಿಂದ ವಿಶೇಷ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲು ಯೋಜನೆ ಸಿದ್ದಪಡಿಸಲಾಗುತ್ತಿದೆ. ಬುಡಕಟ್ಟು ಸಮುದಾಯದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಅಧಿಕಾರಿಗಳಿಗೆ ವಿಶೇಷ ಜವಾಬ್ದಾರಿ ನೀಡಲಾಗಿದೆ. ಎಸ್.ಎಸ್.ಎಲ್.ಸಿ ಹಂತದಲ್ಲಿ ಶಾಲೆ ತೊರೆದಿರುವ ಹಾಗೂ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ವಿಶೇಷ ಶಿಬಿರ ಆಯೋಜಿಸಿ ಅವರ ಕಲಿಕಾ ಉತ್ತೇಜನಕ್ಕೆ ಕ್ರಮವಹಿಸಲಾಗುತ್ತಿದೆ ಎಂದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರಾದ ಎನ್. ಮಂಜುನಾಥ ಪ್ರಸಾದ್ ಅವರು ಮಾತನಾಡಿ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೇರಿದಂತೆ ಇತರೆ ಇಲಾಖೆಗಳ ಹಾಸ್ಟೆಲ್ ಗಳಲ್ಲಿ ಪ್ರವೇಶ ಪಡೆದಿರುವ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಗಮನ ಹರಿಸಬೇಕು. ಇಲಾಖೆಗಳ ವ್ಯಾಪ್ತಿಯ ವಸತಿ ಶಾಲೆಗಳ ಕಟ್ಟಡ ನಿರ್ಮಾಣಕ್ಕೆ ನಿವೇಶನ ಪಡೆದು ಮುಂದಿನ ಪ್ರಕ್ರಿಯೆ ಕೈಗೊಳ್ಳಬೇಕು ಎಂದರು.

ಸಹಕಾರ ಸಂಘಗಳ ಸದಸ್ಯರಿಗೆ, ರೈತರಿಗೆ ದೊರಕುವ ಸರ್ಕಾರದ ಸಾಲ ಸೌಲಭ್ಯ, ಆರ್ಥಿಕ ಉದ್ಯಮ ಚಟುವಟಿಕೆಗಳಿಗೆ ನೀಡಲಾಗುವ ನೆರವು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಸಹಕಾರ ಸಂಘದ ಸದಸ್ಯರಿಗೆ ಕೊಡಲಾಗುವ ಸೌಲಭ್ಯಗಳ ಬಗ್ಗೆ ಸಹಕಾರ ಇಲಾಖೆ ಮನವರಿಕೆ ಮಾಡಿಕೊಡಬೇಕು ಎಂದು ತಿಳಿಸಿದರು.

ಜಿಲ್ಲೆಯ ಕೃಷಿ ಚಟುವಟಿಕೆಗಳು, ಬಿತ್ತನೆ, ಮಳೆಯ ಪ್ರಮಾಣದ ಬಗ್ಗೆ ಪರಿಶೀಲನೆ ನಡೆಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರು ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಯೋಜನೆ ಸಿದ್ದಪಡಿಸಬೇಕು. ಕೃಷಿ, ತೋಟಗಾರಿಕೆ ಬೆಳೆ ಕುರಿತು ಮಾರ್ಗದರ್ಶನ ಸಲಹೆ ನೀಡಬೇಕು. ಅಂಗನವಾಡಿ, ಆಸ್ಪತ್ರೆ, ಶಾಲಾ ಕೊಠಡಿಗಳ ನಿರ್ಮಾಣ, ಗಂಗಾ ಕಲ್ಯಾಣ ಯೋಜನೆ ಸೇರಿದಂತೆ ವಿವಿಧ ಇಲಾಖೆಗಳ ಕಾರ್ಯಕ್ರಮ ಅನುಷ್ಠಾನ ಸರಿಯಾಗಿ ಆಗಬೇಕು. ಜಿಲ್ಲೆಯ ಅಭಿವೃದ್ದಿ ಕಾರ್ಯಗಳ ಸಂಬಂಧ ಯಾವುದೇ ಪ್ರಸ್ತಾವನೆಗಳಿದ್ದರೂ ಕೂಡಲೇ ಸಲ್ಲಿಸಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರಾದ ಎನ್. ಮಂಜುನಾಥ ಪ್ರಸಾದ್ ಅವರು ನಿರ್ದೇಶನ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಪೂವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಬಿ.ಆರ್.ಟಿ. ನಿರ್ದೇಶಕರಾದ ದೀಪಾ ಜೆ. ಕಂಟ್ರಾಕ್ಟರ್, ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿಗಳಾದ ಸಂತೋಷ್ ಕುಮಾರ್, ಉಪವಿಭಾಗಾಧಿಕಾರಿ ಮಹೇಶ್, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದರು.

Leave a Reply

Your email address will not be published. Required fields are marked *