ಗಮನಸೆಳೆದ ಅಪರೂಪದ ನಾಣ್ಯಗಳ ಪ್ರದರ್ಶನ

ಚಾಮರಾಜನಗರ: ಚಾಮರಾಜನಗರ ತಾಲೂಕಿನ ಕುದೇರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿಂದು ಆಯೋಜನೆ ಮಾಡಲಾಗಿದ್ದ ಭಾರತದ ಅಪರೂಪದ ಹಾಗೂ ಪ್ರಾಚೀನ ಕಾಲದಿಂದ ಪ್ರಸ್ತುತ ಅವಧಿವರೆಗಿನ ನಾಣ್ಯಗಳ ಪ್ರದರ್ಶನ ಗಮನಸೆಳೆಯಿತು.

ಕಾಲೇಜು ಶಿಕ್ಷಣ ಇಲಾಖೆ, ಕುದೇರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಐ.ಕ್ಯೂ.ಎ.ಸಿ ಸಹಯೋಗದೊಂದಿಗೆ ಅರ್ಥಶಾಸ್ತ್ರ ಮತ್ತು ಇತಿಹಾಸ ವಿಭಾಗಗಳ ವತಿಯಿಂದ ಏರ್ಪಾಡು ಮಾಡಲಾಗಿದ್ದ ಭಾರತದ ಪ್ರಾಚೀನ ಅಪೂರ್ವ, ಅಮೂಲ್ಯ, ಐತಿಹಾಸಿಕ ನಾಣ್ಯಗಳ 155ನೇ ಅಪರೂಪದ ಪ್ರದರ್ಶನವನ್ನು ವಿದ್ಯಾರ್ಥಿಗಳು, ಬೋಧಕ ವೃಂದ ಕುತೂಹಲ ಹಾಗೂ ಆಸಕ್ತಿಯಿಂದ ವೀಕ್ಷಣೆ ಮಾಡಿದರು.

ಬೆಂಗಳೂರಿನ ಪ್ರಾಚೀನ ನಾಣ್ಯ ಸಂಗ್ರಹಗಾರರು ಮತ್ತು ನಿವೃತ್ತ ಎಂಜಿನಿಯರ್‍ರಾದ ಹೆಚ್.ಕೆ. ರಾವiರಾವ್ ಅವರು ತಾವು ಸಂಗ್ರಹ ಮಾಡಿರುವ ನಾಣ್ಯಗಳ ಪ್ರದರ್ಶನಕ್ಕೆ ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಾಣ್ಯ ಸಂಗ್ರಹಗಾರರಾದ ಹೆಚ್.ಕೆ. ರಾಮ್‍ರಾವ್ ಅವರು ವಾಸ್ತುಶಿಲ್ಪ, ಶಾಸನ ಶಾಸ್ತ್ರದಂತೆ ನಾಣ್ಯಶಾಸ್ತ್ರ ಸಹ ತುಂಬಾ ಪ್ರಾಮುಖ್ಯ ಪಡೆದಿದೆ. ಇತಿಹಾಸಕಾರರಿಗೆ ಪ್ರಮುಖವಾದ ಆಕರಗಳಲ್ಲಿ ನಾಣ್ಯವು ಸಹ ಮುಖ್ಯವಾಗಿದೆ ಎಂದರು.

ಪ್ರಾಚೀನ ಐತಿಹಾಸಿಕ ಕಾಲದ ನಾಣ್ಯಗಳ ವೀಕ್ಷಣೆ ಭಾಗ್ಯವೆಂದೇ ಭಾವಿಸಬೇಕು. ನಾಣ್ಯಗಳನ್ನು ಬರಿ ನೋಡುವುದಷ್ಟೇ ಅಲ್ಲ. ಇದರಿಂದ ನಮಗೆ ಸ್ಪೂರ್ತಿ ಬರಬೇಕು. ಇತಿಹಾಸ, ಪರಂಪರೆ ದೇಶದ ಬಗ್ಗೆ ಗೌರವ ಮೂಡುತ್ತದೆ. ನಾಣ್ಯಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು ಎಂದು ರಾಮ್‍ರಾವ್ ಅವರು ಸಲಹೆ ಮಾಡಿದರು.

ಪ್ರತಿಯೊಂದು ನಾಣ್ಯವು ಆಯಾ ಕಾಲದ ಇತಿಹಾಸದ ಬಗ್ಗೆ ಮಾಹಿತಿ ನೀಡಲಿದೆ. ಭಾರತದ ಚರಿತ್ರೆ ತಿಳಿಯಲು ನಾಣ್ಯಗಳು ಸಹಕಾರಿಯಾಗಿವೆ. ಇಂತಹ ಅಪರೂಪದ ನಾಣ್ಯಗಳ ಪ್ರದರ್ಶನವನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ರಾಮ್‍ರಾವ್ ಅವರು ತಿಳಿಸಿದರು.

ಕುದೇರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಥಿಯೋಡರ್ ಲೂಥರ್ ಅವರು ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಪ್ರಾಧ್ಯಪಕರಾದ ಶಶಿಕಲಾ ವಾಣಿ, ಮಹೇಂದ್ರ, ಮಮತ, ಕವಿತಾ, ಮಧುಸೂಧನ್, ಶ್ರೀನಿವಾಸ್ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *