ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಗೃಹಜ್ಯೋತಿ ಯೋಜನೆಯು ಸಹ ಪ್ರಮುಖವಾಗಿದ್ದು ಈಗಾಗಲೇ ಇದರ ಅನುಷ್ಠಾನ ಯಶಸ್ವಿಯಾಗಿ ಮುಂದುವರೆದಿದೆ.
ಗೃಹಜ್ಯೋತಿ ಯೋಜನೆಯಡಿ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಠ ೨೦೦ ಯೂನಿಟ್ಗಳವರೆಗೆ ಉಚಿತವಾಗಿ ವಿದ್ಯುತ್ ಒದಗಿಸಲಾಗುತ್ತಿದೆ. ರಾಜ್ಯದ ಎಲ್ಲಾ ಗೃಹ ಬಳಕೆ ವಿದ್ಯುತ್ ಗ್ರಾಹಕರು ಯೋಜನೆಗೆ ಅರ್ಹರಾಗಿದ್ದಾರೆ. ೨೦೨೨-೨೩ನೇ ಸಾಲಿನಲ್ಲಿ ಗೃಹ ವಿದ್ಯುತ್ ಬಳಕೆಯ ಸರಾಸರಿ ಹಾಗೂ ಹೆಚ್ಚುವರಿಯಾಗಿ ಶೇ. ೧೦ರಷ್ಟು ಯೂನಿಟ್ ಲೆಕ್ಕ ಹಾಕಿದಾಗ ಒಟ್ಟು ಬಳಕೆ ಸರಾಸರಿ ೨೦೦ ಯೂನಿಟ್ ವರೆಗೆ ಯೋಜನೆಯ ಪ್ರಯೋಜನ ಸಿಗಲಿದೆ.
ಗೃಹ ಬಳಕೆ ಗ್ರಾಹಕರಿಂದ ಅರ್ಜಿ ನೋಂದಣಿ ಪ್ರಕ್ರಿಯೆಯು ಜೂನ್ ೨೩ರಿಂದ ಅಧಿಕೃತವಾಗಿ ಪ್ರಾರಂಭವಾಗಿದ್ದು, ಫಲಾನುಭವಿಗಳಿಗೆ ಜುಲೈ ತಿಂಗಳಿಂದ ಗೃಹಜ್ಯೋತಿ ಯೋಜನೆಯ ಸಂಪೂರ್ಣ ಪ್ರಯೋಜನ ದೊರೆಯುತ್ತಿದೆ.
ಚಾಮರಾಜನಗರ ಜಿಲ್ಲೆಯಲ್ಲೂ ಉಚಿತ ಬೆಳಕು ಸುಸ್ಥಿರ ಬದುಕು ಧ್ಯೇಯ ವಾಕ್ಯದೊಂದಿಗೆ ಗೃಹಜ್ಯೋತಿ ಯೋಜನೆಗೆ ಆಗಸ್ಟ್ ೫ ರಂದು ಚಾಲನೆ ದೊರೆತಿದೆ. ಜುಲೈ ತಿಂಗಳ ವಿದ್ಯುತ್ ಬಳಕೆಯ ಶೂನ್ಯ ಬಿಲ್ಲುಗಳು ವಿತರಣೆ ಮಾಡುವ ಮೂಲಕ ಜನರಿಗೆ ಸರ್ಕಾರದ ಉಚಿತ ವಿದ್ಯುತ್ ಯೋಜನೆ ತಲುಪುತ್ತಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ಒಟ್ಟು ೨,೩೫,೩೪೧ ಅರ್ಜಿಗಳನ್ನು ನೋಂದಾಯಿಸಲಾಗಿದೆ. ಒಟ್ಟಾರೆ ಶೇ. ೮೫.೪೫ ರಷ್ಟು ಗ್ರಾಹಕರು ಗೃಹಜ್ಯೋತಿ ಯೋಜನೆಗೆ ಅರ್ಹರಾಗಿದ್ದಾರೆ.
ಚಾಮರಾಜನಗರ ವಿಭಾಗದಲ್ಲಿ ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲೂಕು ಬರಲಿದ್ದು ಈ ಎರಡು ತಾಲೂಕುಗಳಲ್ಲಿ ಒಟ್ಟಾರೆ ೧,೩೮,೪೮೩ ಅರ್ಜಿಗಳು ನೋಂದಣಿಯಾಗಿದ್ದು ಶೇ.೮೭.೩೯ರಷ್ಟು ಪ್ರಗತಿಯಾಗಿದೆ. ಚಾಮರಾಜನಗರ ತಾಲೂಕಿನಲ್ಲಿ ೮೭,೦೭೦ ಅರ್ಜಿಗಳು ನೋಂದಣಿಯಾಗಿದ್ದು ಶೇ. ೮೭.೪೮ರಷ್ಟು ಹಾಗೂ ಗುಂಡ್ಲುಪೇಟೆ ತಾಲೂಕಿನಲ್ಲಿ ೫೧,೪೧೩ ಅರ್ಜಿಗಳು ನೋಂದಣಿಯಾಗಿದ್ದು ಶೇ. ೮೭.೨೪ರಷ್ಟು ಪ್ರಗತಿಯಾಗಿದೆ.
ಕೊಳ್ಳೇಗಾಲ ವಿಭಾಗಕ್ಕೆ ಕೊಳ್ಳೇಗಾಲ, ಹನೂರು ಹಾಗೂ ಯಳಂದೂರು ತಾಲೂಕು ಒಳಪಡಲಿದ್ದು ಒಟ್ಟಾರೆ ಈ ವಿಭಾಗದಲ್ಲಿ ೯೬,೮೫೮ ಅರ್ಜಿಗಳನ್ನು ನೋಂದಾಯಿಸಲಾಗಿದ್ದು, ಶೇ. ೮೨.೮೨ರಷ್ಟು ಪ್ರಗತಿಯಾಗಿದೆ. ಕೊಳ್ಳೇಗಾಲ ತಾಲೂಕಿನಲ್ಲಿ ೪೦,೭೪೪ ಅರ್ಜಿಗಳು ನೋಂದಣಿಯಾಗಿದ್ದು ಶೇ. ೮೩.೫೩, ಹನೂರು ತಾಲೂಕಿನಲ್ಲಿ ೩೯,೬೨೧ ಅರ್ಜಿಗಳು ನೋಂದಣಿಯಾಗಿದ್ದು ಶೇ. ೮೨.೨೯ರಷ್ಟು ಪ್ರಗತಿಯಾಗಿದೆ. ಯಳಂದೂರು ತಾಲೂಕಿನಲ್ಲಿ ೧೬,೪೯೩ ಅರ್ಜಿಗಳನ್ನು ನೋಂದಾಯಿಸಿದ್ದು ಶೇ. ೮೨.೩೯ರಷ್ಟು ಪ್ರಗತಿಯಾಗಿದೆ.
ಗೃಹಜ್ಯೋತಿ ಯೋಜನೆಯಡಿ ಅರ್ಜಿ ನೋಂದಣಿಗೆ ಯಾವುದೇ ಕಾಲಮಿತಿ ನಿಗದಿಮಾಡಲಾಗಿಲ್ಲ. ಆಯಾ ತಿಂಗಳ ೨೭ರವರೆಗೆ ಅರ್ಜಿ ನೋಂದಾಯಿಸಿದ ಗೃಹ ಬಳಕೆಯ ಗ್ರಾಹಕರಿಗೆ ನಂತರದ ತಿಂಗಳಲ್ಲಿ ಯೋಜನೆಯ ಪ್ರಯೋಜನ ಪಡೆಯಲು ಅವಕಾಶ ಮಾಡಿಕೊಡಲಾಗುತ್ತಿದೆ.
ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿದ ನಮಗೆ ಜುಲೈ ತಿಂಗಳ ಬಳಕೆಯ ಶೂನ್ಯ ಬಿಲ್ ಬಂದಿದೆ. ಪ್ರತಿ ತಿಂಗಳು ೪೦೦ ರಿಂದ ೪೫೦ ರೂ. ಬಿಲ್ ಕಟ್ಟಬೇಕಿದ್ದ ನಮಗೆ ಸರ್ಕಾರದ ಯೋಜನೆಯಿಂದ ಅನುಕೂಲವಾಗಿದೆ. ಇದಕ್ಕಾಗಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ನಗರದ ಗೃಹಿಣಿ ಪದ್ಮಾ ಅವರು ತಿಳಿಸಿದ್ದಾರೆ.