ಗ್ರಾ. ಪಂ. ಉಪ ಚುನಾವಣೆ : ಮತದಾನ ಕೇಂದ್ರದ ಸುತ್ತ ನಿಷೇಧಾಜ್ಞೆ

ಚಾಮರಾಜನಗರ: ಜಿಲ್ಲೆಯ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಜುಲೈ ೨೩ರಂದು ಉಪ ಚುನಾವಣೆ ಸಂಬಂಧ ಕಾನೂನು ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಒಟ್ಟು ೪ ಮತದಾನ ಕೇಂದ್ರಗಳ ಸುತ್ತಲ ೧೦೦ ಮೀ ಅಂತರದೊಳಗೆ ಜುಲೈ ೨೨ರ ಮಧ್ಯರಾತ್ರಿ ೧೨ ರಿಂದ ೨೩ರ ಮಧ್ಯರಾತ್ರಿ ೧೨ ಗಂಟೆಯವರೆಗೆ ಕೆಲ ಷರತ್ತುಗಳನ್ನು ವಿಧಿಸಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ನಿಷೇಧಾಜ್ಞೆ ಹೊರಡಿಸಿದ್ದಾರೆ.

ಮೆರವಣಿಗೆ ಅಥವಾ ೫ ಜನರಿಗಿಂತ ಹೆಚ್ಚು ಜನ ಸೇರುವಂತಿಲ್ಲ. ಯಾವುದೇ ರೀತಿಯ ಮಾರಕಾಸ್ತ್ರ, ಶಸ್ತ್ರಾಸ್ತ್ರ, ಸ್ಪೋಟಕ ವಸ್ತುಗಳನ್ನು ಒಯ್ಯವಂತಿಲ್ಲ. ಪ್ರತಿಕೃತಿ ಪ್ರದರ್ಶನ, ದಹನ ಮಾಡುವುದು ಮತ್ತು ಬಹಿರಂಗ ಘೋಷಣೆ ಇತ್ಯಾದಿಗಳನ್ನು ನಿಷೇಧಿಸಲಾಗಿದೆ. ಸಾರ್ವಜನಿಕವಾಗಿ ಯಾವುದೇ ವ್ಯಕ್ತಿ ಪ್ರಚೋದನಾತ್ಮಕ ಹಾಗೂ ಉದ್ರೇಕಕಾರಿ ಹಾಡುಗಳು, ಕೂಗಾಟ ಮಾಡುವುದು, ವ್ಯಕ್ತಿಗಳ ತೇಜೋವಧೆ ಮಾಡುವಂತಹ ಚಿತ್ರಗಳು, ಚಿಹ್ನೆಗಳು, ಪ್ರತಿಕೃತಿಗಳು ಮುಂತಾದವುಗಳನ್ನು ಪ್ರದರ್ಶಿಸುವುದಾಗಲಿ, ಸಾರ್ವಜನಿಕರ ಗಾಂಭೀರ್ಯ, ನೈತಿಕತೆಗೆ ಭಂಗ ತರುವಂತಹ ಕೃತ್ಯಗಳಲ್ಲಿ ತೊಡಗುವುದನ್ನು ನಿಷೇಧಿಸಲಾಗಿದೆ.

ಈ ಆದೇಶವು ಚುನಾವಣಾ ಕರ್ತವ್ಯ ನಿರತ ಮತಗಟ್ಟೆ ಅಧಿಕಾರಿ, ಸಿಬ್ಬಂದಿ, ಪೊಲೀಸ್ ಅಧಿಕಾರಿ, ನೇಮಕಗೊಂಡಿರುವ ಚುನಾವಣಾ ಏಜೆಂಟರು ಮತ್ತು ಒಬ್ಬೊಬ್ಬರಾಗಿ ಮತಗಟ್ಟೆಗೆ ತೆರಳಿ ಮತದಾನ ಮಾಡುವ ಮತದಾರರಿಗೆ ಅನ್ವಯಿಸುವುದಿಲ್ಲ. ಅಂತ್ಯಕ್ರಿಯೆ ಮೆರವಣಿಗೆ ಹಾಗೂ ಇನ್ನಿತರ ಪ್ರಾಧಿಕಾರದಿಂದ ಅನುಮತಿ ಪಡೆದ ಪ್ರಕರಣಗಳಿಗೆ ಆದೇಶವು ಅನ್ವಯವಾಗುವುದಿಲ್ಲವೆಂದು ಆದೇಶದಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *