ಗ್ರಾಹಕರಿಗೆ ನೇರವಾಗಿ ಪರಿಶುದ್ದ ಹಾಗೂ ಗುಣಮಟ್ಟದ ಮೀನು ಮಾರಾಟ ಮಾಡುವುದು ನಮ್ಮ ಗುರಿ : ಕೆ. ಲಿಂಗರಾಜು

ಶ್ರೀ ಚಾಮರಾಜೇಶ್ವರ ರೈತ ಮೀನು ಉತ್ಪಾದಕರ ಕಂಪನಿಯಿಂದ ನೂತನ ಮೀನು ಮಾರಾಟ ಮಳಿಗೆಗೆ ಶಂಕುಸ್ಥಾಪನೆ
ಚಾಮರಾಜನಗರ: ಜಿಲ್ಲೆಯ ವ್ಯಾಪ್ತಿಯಲ್ಲಿರುವ ಕೆರೆಗಳಿಂದ ನೇರವಾಗಿ ಗುಣಮಟ್ಟದ ಹಾಗು ಪರಿಶುದ್ದವಾದ ಮೀನುಗಳನ್ನು ಮಾರಾಟ ಮಾಡುವ ಉದ್ದೇಶವನ್ನು ನಮ್ಮ ಸಂಘ ಹೊಂದಿದೆ ಎಂದು ಶ್ರೀ ಚಾಮರಾಜೇಶ್ವರ ರೈತ ಮೀನು ಉತ್ಪಾದಕರ ಕಂಪನಿಯ ಅಧ್ಯಕ್ಷ ಕೆ. ಲಿಂಗರಾಜು ತಿಳಿಸಿದರು.

ನಗರದ ಸಂತೇಮಹರಳ್ಳಿ ರಸ್ತೆಯಲ್ಲಿರುವ ನೂತನ ಪಟ್ಟಣ ಪೊಲೀಸ್ ಠಾಣೆ ಎದುರು ಶ್ರೀ ಚಾಮರಾಜೇಶ್ವರ ರೈತ ಮೀನು ಉತ್ಪಾದಕರ ಕಂಪನಿಯ ಮೀನು ಮಾರಾಟ ಮಳಿಗೆ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಮೀನು ಮಾರಾಟಗಾರರು ಹಾಗೂ ಗ್ರಾಹಕರಿಗೆ ಉತ್ತಮವಾದ ವಾತಾವರಣ ಕಲ್ಪಿಸುವ ಜೊತೆಗೆ ಸಕಾಲದಲ್ಲಿ ಗ್ರಾಹಕರಿಗೆ ಗುಣಮಟ್ಟದ ಮತ್ತು ಪರಿಶುದ್ದವಾದ ಕೆರೆಯ ಮೀನುಗಳನ್ನು ತಲುಪಿಸಲು ನಮ್ಮ ರೈತ ಮೀನು ಉತ್ಪಾದಕರ ಕಂಪನಿಯು ಶ್ರಮಿಸುತ್ತಿದೆ. ಈಗಾಗಲೇ ಮೀನುಗಾರಿಕೆಯಲ್ಲಿರುವವರನ್ನು ಸದಸ್ಯರನ್ನಾಗಿಸಿಕೊಂಡು ಆ ಮೂಲಕ ಅವರಿಗೆ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಲು ಶ್ರೀ ಚಾಮರಾಜೇಶ್ವರ ರೈತ ಮೀನು ಉತ್ಪಾದಕರ ಕಂಪನಿ ಮುಂದಾಗಿದೆ. ಜಿಲ್ಲಾ ಕೇಂದ್ರದಲ್ಲಿ ಮೀನು ಮಾರಾಟ ಮಳಿಗೆಯನ್ನು ಆರಂಭಿಸುವ ಉದ್ದೇಶದಿಂದ ನಗರಸಭೆಯಿಂದ ನಿವೇಶನವನ್ನು ಪಡೆದುಕೊಂಡು ಸಂತೇಮರಹಳ್ಳಿ ಮುಖ್ಯ ರಸ್ತೆಯಲ್ಲಿರುವ ಹಳೇ ರೇಷ್ಮೆ ಮಾರುಕಟ್ಟೆ ಮುಂಭಾಗದಲ್ಲಿ ಮಳಿಗೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಗ್ರಾಹಕರು ಗುಣಮಟ್ಟದ ಮೀನು ಖರೀದಿ ಮಾಡುವ ಮೂಲಕ ರೈತ ಮೀನು ಉತ್ಪಾದಕರ ಕಂಪನಿಗೆ ಹೆಚ್ಚಿನ ಬೆಂಬಲ ನೀಡಬೇಕು ಎಂದು ಲಿಂಗರಾಜು ಮನವಿ ಮಾಡಿದರು.

ಕಂಪನಿಯ ನಿರ್ದೇಶಕ ಹಾಗು ಹಾಪ್‍ಕಾಮ್ಸ್ ನಿರ್ದೇಶಕ ಎಸ್ . ಬಸವಶೆಟ್ಟಿ ಮಾತನಾಡಿ, ಆರಂಭದಲ್ಲಿ ಜಿಲ್ಲಾ ಕೇಂದ್ರದಲ್ಲಿ ಮೀನು ಮಾರಾಟ ಮಳಿಗೆಯನ್ನು ತೆರೆಯಲಾಗುತ್ತದೆ. ಆಯಾ ತಾಲೂಕು ವ್ಯಾಪ್ತಿಯಲ್ಲಿರುವ ಮೀನು ಉತ್ಪಾದಕ ಸದಸ್ಯರ ಕೋರಿಕೆ ಮತ್ತು ಗ್ರಾಹಕರ ಬೇಡಿಕೆಗೆ ತಕ್ಕಂತೆ ಕಂಪನಿಯಿಂದ ತಾಲೂಕು ಕೇಂದ್ರಗಳಲ್ಲಿಯೂ ಮೀನು ಮಾರಾಟ ಮಳಿಗೆಗಳನ್ನು ತೆರೆಯಲಾಗುತ್ತದೆ. ರೈತ ಮೀನು ಉತ್ಪಾದಕರ ಕಂಪನಿಯು ಮೀನುಗಾರರ ಹಿತರಕ್ಷಣೆಗಾಗಿ ಕಾರ್ಯ ಯೋಜನೆಗಳನ್ನು ರೂಪಿಸುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯ ಬಸವಣ್ಣ, ಸಂಘದ ನಿರ್ದೇಶಕರಾದ ಎಸ್. ಬಸವಶೆಟ್ಟಿ, ಆರ್. ಕೆಂಪರಾಜು, ಗುರುಸಿದ್ದಶೆಟ್ಟಿ, ಪುಟ್ಟರಾಜನಾಯಕ, ಸಿದ್ದರಾಜು, ಚಿಕ್ಕಣ್ಣ, ಕೆ.ಕೆ.ರಂಗರಾಜು, ಸಿ.ಕೆ. ಉಷಾ, ಸಣ್ಣಮ್ಮ, ಕಂಪನಿ ಮುಖ್ಯ ಕಾರ್ಯನಿರ್ವಾಹಕ ಪಿ. ನಂಜುಂಡಸ್ವಾಮಿ, ಸದಸ್ಯರಾದ ಕೃಷ್ಣರಾಜು, ಅಂಕಶೆಟ್ಟಿ, ಮಾದಶೆಟ್ಟಿ, ಚನಿÀ್ನಂಗಶೆಟ್ಟಿ ಮೊದಲಾದವರು ಇದ್ದರು.

Leave a Reply

Your email address will not be published. Required fields are marked *