ಜನಮನ ಸೂರೆಗೊಂಡ ರೈತ ದಸರಾ : ಆಕರ್ಷಕ ಮೆರವಣಿಗೆ

ಚಾಮರಾಜನಗರ: ಚಾಮರಾಜನಗರ ದಸರಾ ಮಹೋತ್ಸವದ ಅಂಗವಾಗಿ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ರೈತ ದಸರಾ ಕಾರ್ಯಕ್ರಮ ಜನಮನ ಸೂರೆಗೊಂಡಿತು.

ನಗರದ ಚಾಮರಾಜೇಶ್ವರ ದೇವಾಲಯದ ಮುಂಭಾಗದಲ್ಲಿಂದು ರೈತ ದಸರಾದಲ್ಲಿ ಪಾಲ್ಗೊಳ್ಳಲು ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ವಿಶೇಷವಾಗಿ ಸಿಂಗರಿಸಿದ್ದ ಎತ್ತಿನ ಗಾಡಿಗಳು ಹಾಗೂ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಪಶುಪಾಲನೆ ಹಾಗೂ ರೇಷ್ಮೆ ಇಲಾಖೆಯ ಸ್ತಬ್ಧಚಿತ್ರಗಳು ಮೆರವಣಿಗೆಗೆ ಮೆರುಗು ತಂದವು.

ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಭವ್ಯವಾಗಿ ಸಿಂಗಾರಗೊಂಡಿದ್ದ ಎತ್ತಿನಗಾಡಿ ಮೆರವಣಿಗೆಗೆ ಚಾಲನೆ ನೀಡುವ ಮೂಲಕ ರೈತ ದಸರಾ ಕಾರ್ಯಕ್ರಮ ಆರಂಭವಾಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ಜಿಲ್ಲಾಧಿಕಾರಿಯವರಿಗೆ ಸಾಥ್ ನೀಡಿದರು.

ಚಾಮರಾಜೇಶ್ವರ ದೇವಸ್ಥಾನದಿಂದ ಆರಂಭಗೊಂಡ ಎತ್ತಿನಗಾಡಿ ಸ್ತಬ್ದ ಚಿತ್ರಗಳ ಮೆರವಣಿಗೆ ನಗರದ ಬಿ. ರಾಚಯ್ಯ ಜೋಡಿರಸ್ತೆ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ರಸ್ತೆಯಲ್ಲಿ ಸಾಗಿ ಕರಿನಂಜನಪುರ ರಸ್ತೆಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನದ ಆವರಣದಲ್ಲಿ ಕೊನೆಗೊಂಡಿತು.

ರೈತ ದಸರಾ ಪ್ರಯುಕ್ತ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆಯ ಸಹಯೋಗದಲ್ಲಿ ನಡೆದ 2023-24ನೇ ಸಾಲಿನ ಕೇಂದ್ರ ಪುರಸ್ಕøತ ಆಹಾರ ಭದ್ರತೆ ಯೋಜನೆ-ನ್ಯೂಟ್ರಿ ಸಿರಿಧಾನ್ಯ ಕಾರ್ಯಕ್ರಮದಡಿ ಜಿಲ್ಲಾಮಟ್ಟದ ಸಿರಿಧಾನ್ಯಗಳ ಹಬ್ಬ ಹಾಗೂ ಕಾರ್ಯಾಗಾರವನ್ನು ವೇದಿಕೆ ಮುಂಭಾಗದಲ್ಲಿ ಆಕರ್ಷಕವಾಗಿ ಚಿತ್ರಿಸಲಾಗಿದ್ದ ರಾಗಿ ಕಣದಲ್ಲಿ ರಾಶಿ ಪೂಜೆ ನೆರವೇರಿಸಲಾಯಿತು. ಬಳಿಕ ಕಾರ್ಯಕ್ರಮದ ದೀಪ ಬೆಳಗಿಸಿ, ಬಿಡಿಸಿದ ತೆಂಗಿನ ಹೊಂಬಾಳೆಯನ್ನು ಪ್ರದರ್ಶಿಸಿ ವಿದ್ಯುಕ್ತವಾಗಿ ಉದ್ಘಾಟಿಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ಜಿಲ್ಲಾ ಕೇಂದ್ರದಲ್ಲಿ ನಾಲ್ಕು ದಿನಗಳ ಕಾಲ ನಡೆಯುವ ಚಾಮರಾಜನಗರ ದಸರಾ ಮಹೋತ್ಸವದಲ್ಲಿ ಆಚರಿಸುವ ವಿಶಿಷ್ಟ ಹಾಗೂ ವಿಭಿನ್ನ ಕಾರ್ಯಕ್ರಮಗಳಲ್ಲಿ ರೈತ ದಸರಾ ಕೂಡ ಒಂದಾಗಿದೆ. ರೈತ ದಸರಾ ಕಾರ್ಯಕ್ರಮದಲ್ಲಿ ವಿಶೇಷವಾಗಿ ಗ್ರಾಮೀಣ ಭಾಗದಿಂದ ಜನರು ಆಗಮಿಸಿ ಮೆರವಣಿಗೆ ಹೆಚ್ಚಿನ ಕಳೆ ತಂದಿದ್ದಾರೆ. ಇದು ಜನರ ದಸರಾವಾಗಿದೆ ಎಂದರು.

ದಸರಾ ಸಂದರ್ಭದಲ್ಲಿ ಇಡೀ ವಿಶ್ವವೇ ಮೈಸೂರಿನ ಕಡೆ ತಿರುಗಿ ನೋಡಲಿದೆ. ಮೈಸೂರಿನ ಸಾಂಸ್ಕøತಿಕ ವೈಭವವೇ ಇದಕ್ಕೆ ಸಾಕ್ಷಿಯಾಗಿದೆ. ಮೈಸೂರಿನ ಅವಿಭಾಜ್ಯ ಅಂಗವಾಗಿರುವ ಚಾಮರಾಜನಗರದಲ್ಲಿಯೂ ಸಹ ದಸರಾ ಆಯೋಜನೆ ಜಿಲ್ಲೆಯ ಕಲೆ, ಸಂಸ್ಕøತಿ, ಪರಂಪರೆಗಳನ್ನು ಅಭಿವ್ಯಕ್ತಗೊಳಿಸುವುದೇ ಆಗಿದೆ. ಗ್ರಾಮೀಣ ಭಾಗದಲ್ಲಿ ನಶಿಸುತ್ತಿರುವ ಜನಪದ ಕಲೆಗಳಿಗೆ ಮರುಜೀವ ನೀಡಬೇಕಾಗಿದೆ ಎಂದು ತಿಳಿಸಿದರು.
ಕೃಷಿ ಪ್ರಧಾನವಾಗಿರುವ ಭಾರತದಲ್ಲಿ ರೈತರೇ ದೇಶದ ಬೆನ್ನೆಲುಬು. ಈ ಬಾರಿ ಮಳೆ ಅಭಾವದಿಂದ ನಾಡಿನೆಲ್ಲೆಡೆ ರೈತರಿಗೆ ಅನೇಕ ಸಮಸ್ಯೆ, ಸಂಕಷ್ಟಗಳು ಎದುರಾಗಿವೆ. ಆದರೂ ರೈತರು ಎದೆಗುಂದಬಾರದು. ವೈಜ್ಞಾನಿಕ ಕೃಷಿ ಹಾಗೂ ಮಣ್ಣಿನ ಸಂರಕ್ಷಣೆಗೆ ಮುಂದಾಗಬೇಕು. ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಂಡು ರೈತರು ಅರ್ಥಿಕವಾಗಿ ಸದೃಢರಾಗುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ಸಲಹೆ ಮಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರಗತಿಪರ ರೈತ ಮುಖಂಡರಾದ ಹೊನ್ನೂರು ಪ್ರಕಾಶ್ ಅವರು ಮಾತನಾಡಿ ಪ್ರಸ್ತುತ ನಾಡಿನಲ್ಲಿ ಬರ ಪರಿಸ್ಥಿತಿ ತಲೆದೋರಿದೆ. ಆದರೂ ಹತಾಶೆಗೊಳಗಾಗದ ಕಾಯಕಯೋಗಿ ರೈತರು ಕೃಷಿಯಲ್ಲಿ ತೊಡಗಿದ್ದಾರೆ. ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸಬೇಕು. ಕನಿಷ್ಠ ಬೆಂಬಲ ಬೆಲೆ ದರ ನಿಗದಿಪಡಿಸಬೇಕು. ಆ ಮೂಲಕ ರೈತರಿಗೆ ಆಸರೆಯಾಗಿ ಸರ್ಕಾರ ನಿಲ್ಲಬೇಕು ಎಂದರು.
ಹವಾಮಾನ ವೈಪರೀತ್ಯದಿಂದ ಇಂದು ಕಲುಷಿತಗೊಂಡು ಭೂಮಿ ಹಾಳಾಗುತ್ತಿದೆ. ಭೂಮಿಯಲ್ಲಿ ಎಲ್ಲವೂ ಇದೆ. ಆದರೆ ಜೀವಾಣುಗಳ ನಾಶವಾಗಿದೆ. ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಿ ಭೂಮಿಯನ್ನು ಉಳಿಸಿಕೊಳ್ಳಬೇಕಾಗಿದೆ. ಸಿರಿಧಾನ್ಯಗಳನ್ನು ಹೆಚ್ಚಾಗಿ ಬೆಳೆಯಬೇಕು. ನೀರಿನ ಸದ್ಭಳಕೆ ಹಾಗೂ ಮಳೆ ನೀರು ಸಂಗ್ರಹದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಮುಸುಕಿನ ಜೋಳ ಕಟಾವು ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು. ರಾಮಸಮುದ್ರದ ವೆಂಕಟಾಚಲ ನಾಯಕ, ಯಲಚಗೆರೆ ಗ್ರಾಮದ ಸಿದ್ದಪ್ಪ, ಗುಂಡ್ಲುಪೇಟೆ ತಾಲೂಕಿನ ಚಿಕ್ಕತುಪ್ಪೂರಿನ ಕುಮಾರಸ್ವಾಮಿ, ಚಾಮರಾಜನಗರ ತಾಲೂಕಿನ ಹೊಂಡರಬಾಳು ಗ್ರಾಮದ ಕುಮಾರಸ್ವಾಮಿ ಹಾಗೂ ಗುಂಡ್ಲುಪೇಟೆ ತಾಲೂಕಿನ ಕೊಡಸೋಗೆಯ ಗೌರಮ್ಮ ಅವರನ್ನು ಗೌರವಿಸಲಾಯಿತು.

ಕೃಷಿ ಜಂಟಿ ನಿರ್ದೆಶಕರಾದ ಅಬೀಬ್, ಉಪನಿರ್ದೇಶಕರಾದ ಮಧುಸೂಧನ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಶಿವಪ್ರಸಾದ್, ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಮಂಜೇಶ್, ರೇಷ್ಮೆ ಇಲಾಖೆಯ ಉಪನಿರ್ದೇಶಕರಾದ ಗಿರೀಶ್, ಪಶುಪಾಲನಾ ಇಲಾಖೆಯ ಉಪನಿರ್ದೇಶಕರಾದ ಹನುಮೇಗೌಡ, ಕೃಷಿ ಪರಿಕರಗಳ ಮಾರಾಟ ಸಹಕಾರ ಸಂಘÀದ ಅಧ್ಯಕ್ಷರಾದ ಯೋಗರಾಜ್, ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ವಿ.ವಿಯ ವಿಜ್ಞಾನಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಬಳಿಕ ಹೈನುಗಾರಿಕೆ, ವೈಜ್ಞಾನಿಕ ಕೃಷಿ ಪದ್ದತಿ ಹಾಗೂ ಮಣ್ಣಿನ ಸಂರಕ್ಷಣೆ ಕುರಿತು ರೈತರಿಗೆ ಕಾರ್ಯಾಗಾರ ನಡೆಯಿತು.

Leave a Reply

Your email address will not be published. Required fields are marked *