ಜವಳಿ ಉದ್ದಿಮೆ ಪ್ರಾರಂಭಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಚಾಮರಾಜನಗರ: ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ 2023-24ನೇ ಸಾಲಿನಲ್ಲಿ ನೇಕಾರರ ಪ್ಯಾಕೇಜ್ ಯೋಜನೆಯಡಿ ಜವಳಿ ಉದ್ದಿಮೆ ಪ್ರಾರಂಭಿಸಲು ಸಹಾಯಧನಕ್ಕಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಜವಳಿ ಉದ್ದಿಮೆಯಲ್ಲಿ ವೈಯಕ್ತಿಕ ಫಲಾನುಭವಿ, ಪಾಲುದಾರಿಕೆ ಸಂಸ್ಥೆ, ಕಂಪನಿ, ಜವಳಿ ಸಹಕಾರಿ ಸಂಘ, ಸಂಸ್ಥೆಯ ವತಿಯಿಂದ ಅತಿ ಸಣ್ಣ (ಎಂ.ಇ) ಜವಳಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿ ಪ್ರಾರಂಭಿಸಲು ಉತ್ತೇಜಿಸುವ ಸಲುವಾಗಿ ರಾಜ್ಯ ಸರ್ಕಾರವು ಜವಳಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಾಮಾನ್ಯ ವರ್ಗದ ಫಲಾನುಭವಿಗಳು ಅತಿ ಸಣ್ಣ ಘಟಕಗಳ ಸ್ಥಾಪನೆಗೆ ಗರಿಷ್ಠ ಯೋಜನಾ ಮೊತ್ತವನ್ನು 1 ಕೋಟಿ ರೂ.ಗಳಿಗೆ ನಿಗದಿಪಡಿಸಲಾಗಿದೆ. ಯೋಜನಾ ಮೊತ್ತದ ಶೇ. 50ರಷ್ಟು ಗರಿಷ್ಟ 50 ಲಕ್ಷ ರೂ. ಬಂಡವಾಳ ಸಹಾಯಧನ ನೀಡುವ ಯೋಜನೆ ಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಯೋಜನೆಯಡಿ ಜಿಲ್ಲೆಯ ಸಾಮಾನ್ಯ ವರ್ಗದ ನೇಕಾರರು, ನೇಕಾರಿಕೆ ವೃತ್ತಿಯಲ್ಲಿ ನೇಯ್ಗೆ ಅನುಭವ ಪಡೆದಿರುವವರು ಜವಳಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿದ್ಯುತ್ ಮಗ್ಗ, ಕೈಮಗ್ಗ, ಸಿಲ್ಕ್ ಟ್ವಿಸ್ಟಿಂಗ್, ರೇಡಿಮೆಡ್ ಗಾರ್ಮೆಂರ್ಟ್, ಪ್ರಿಂಟಿಂಗ್, ಎಂಬ್ರಾಯಿಡರಿ, ಫಿನಿಷಿಂಗ್, ವಾರ್ಪಿಂಗ್, ಡೈಯಿಂಗ್, ಕಂಪ್ಯೂಟರ್ ಡಿಸೈನಿಂಗ್ ಮತ್ತು ಇತರೆ ಜವಳಿ ಚಟುವಟಿಕೆಗಳಿಗೆ ಸಂಬಂಧಿಸಿದ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಸಹಾಯಧನ ನೀಡಲಾಗುತ್ತದೆ. ಈ ಸಂಬಂಧ ಅವಶ್ಯವಿರುವ ಯೋಜನಾ ಮೊತ್ತದ ಶೇ 50ರಷ್ಟು ಕನಿಷ್ಟ ಅವಧಿ ಸಾಲವನ್ನು ಬ್ಯಾಂಕ್, ಹಣಕಾಸು ಸಂಸ್ಥೆಗಳಿಂದ ಪಡೆಯುವುದು ಕಡ್ಡಾಯವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಚಾಮರಾಜನಗರದ ಜಿಲ್ಲಾಡಳಿತ ಭವನದಲ್ಲಿರುವ ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕರ ಕಚೇರಿ ದೂ.ಸಂ. 08226-222883 ಸಂಪರ್ಕಿಸುವಂತೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *