ಜಿಲ್ಲೆಗೊಂದು ಮೆಡಿಕಲ್ ಕಾಲೇಜು – ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್

ಮೈಸೂರು: ಪ್ರತಿ ಜಿಲ್ಲೆಗೊಂದರಂತೆ ಸರ್ಕಾರಿ ಮೆಡಿಕಲ್ ಕಾಲೇಜು ಆರಂಭಿಸಲಾಗುವುದೆಂದು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣ ಪ್ರಕಾಶ್ ಪಾಟೀಲ್ ಹೇಳಿದರು.

ಶುಕ್ರವಾರ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಕಾಲೇಜಿನ ಶತಮಾನೋತ್ಸವದ ಅಂಗವಾಗಿ ಏರ್ಪಡಿಸಿದ್ದ ವಸ್ತುಪ್ರದರ್ಷನ ಉದ್ಘಾಟನಾ ಕಾರ್ಯಕ್ರಮದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ರಾಜ್ಯದಲ್ಲಿ 23 ಮೆಡಿಕಲ್ ಕಾಲೇಜುಗಳಿದ್ದು ,ಉಳಿದ ಜಿಲ್ಲೆಗಳಲ್ಲಿಯೂ ಹಣಕಾಸಿನ ಲಭ್ಯತೆ ನೋಡಿಕೊಂಡು ಹೊಸ ಮೆಡಿಕಲ್ ಕಾಲೇಜು ತೆರೆಯಲಾಗುವುದೆಂದರು.

ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಟ್ರಾಮಾ ಕೇರ್ ಸೆಂಟರ್ ಆರಂಭವಾಗಿದೆ ಹಾಗೂ ಸೂಪರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕಾಮಗಾರಿಗಳು ಆರಂಭವಾಗಿವೆ.ಕೆ.ಆರ್ ಆಸ್ಪತ್ರೆಯ ಸಂಪೂರ್ಣ ನವೀಕರಣ ಕಾರ್ಯ ಮುಗಿಸಲು  ಜನವರಿಯವರಗೆ ಗಡುವು ನೀಡಲಾಗಿದೆ ನಂತರ ಮೂರು ತಿಂಗಳೊಳಗಾಗಿ ಸಂಪೂರ್ಣ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಹಾಗು ಅಗತ್ಯ ಉಪಕರಣಗಳನ್ನು ಒದಗಿಸಲಾಗುವುದೆಂದರು.

ಮೆಡಿಕಲ್ ಸೀಟುಗಳ ಹೆಚ್ಚಳದ ಬಗೆಗೆ ಪ್ರತಿಕ್ರಿಯಿಸಿದ ಸಚಿವರು ಪ್ರಸ್ತುತ ,150 ಸೀಟುಗಳು ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಆ ಸಂಖ್ಯೆಯನ್ನು 200 ಕ್ಕೆ ಹೆಚ್ಚಳ ಮಾಡಲಾಗುವುದೆಂದರು.

ಕೇಂದ್ರದ ನೀತಿಯಂತೆ 10 ಲಕ್ಷ ಜನಸಂಖ್ಯೆಗೆ ನೂರು ಮೆಡಿಕಲ್ ಸೀಟುಗಳಿರಬೇಕಾಗುತ್ತದೆ.ನಮ್ಮಲ್ಲಿ ಅದಕ್ಕಿಂತ ಹೆಚ್ಚಿದೆ,ಈ ಹಿಂದೆ ಇಂತಹ ನಿರ್ಬಂಧ ಇರಲಿಲ್ಲ ಇದೊಂದು ರೀತಿ ದಕ್ಷಿಣದ ರಾಜ್ಯಗಳ ವಿರುದ್ದದ ಮಲತಾಯಿ ಧೋರಣೆ ಎಂದರು.

ಮೆಡಿಕಲ್ ಸೀಟುಗಳ ಸಂಖ್ಯೆಯಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿದೆ.ಪ್ರತಿವರ್ಷ 12 ಸಾವಿರ ಸೀಟುಗಳನ್ನು ನೀಡುತಿದ್ದೇವೆ , ಹಾಗೂ ಸಾಕಷ್ಟು ಖಾಸಗಿ ಮೆಡಿಕಲ್ ಕಾಲೇಜುಗಳಿದ್ದು ಸಾಕಷ್ಟು ಸೀಟುಗಳು ಲಭ್ಯವಿವೆ ಎಂದರು.

ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಮೈಸೂರು ಮೆಡಿಕಲ್ ಕಾಲೇಜು ಜ್ನಾಪಕಾರ್ಥಕವಾಗಿ ಮೈಸೂರಿನ ಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸಲು 5 ಎಕರೆ ಜಾಗ ಗುರುತಿಸಲಾಗಿದ್ದು ಪ್ರಕ್ರಿಯೆ ಆರಂಭವಾಗಿದೆ ಎಂದರು.

Leave a Reply

Your email address will not be published. Required fields are marked *