ಚಾಮರಾಜನಗರ: ಭೀಮಾ ಕೋರೆಗಾಂವ್ ಯುದ್ದ ಬ್ರಿಟಿಷ್ ಚರಿತ್ರೆಯಲ್ಲಿ ಮಹಾಸಂಗ್ರಾಮವಾಗಿದ್ದು, ದಲಿತರ ಸ್ವಾಭಿಮಾನ, ಅಸ್ಮಿತೆಯ ಸಂಕೇತ ಎಂದು ಅಂಬೇಡ್ಕರ್ ವಿಚಾರವಾದಿ ಡಾ.ವಿಠ್ಠಲ್ವಗ್ಗನ್ ಹೇಳಿದರು.
ನಗರದ ಜೆ.ಪಟೇಲ್ಸಭಾಂಗಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಭಿಮಾನಿ ಬಳಗ ಮತ್ತು ದಾದಾ ಸಾಹೇಬ್ ಕಾನ್ಸಿರಾಂ ವಿದ್ಯಾರ್ಥಿ ಸಂಘ ಜಿಲ್ಲಾ ಘಟಕ ಇವರ ವತಿಯಿಂದ ನಡೆದ ೨೦೬ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ಸಮಾರಂಭದಲ್ಲಿ ಮುಖ್ಯಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು.
೧೮೧೮ ಜನವರಿ ೧ ರಂದು ೧೨ ಗಂಟೆ ಕಾಲ ಯಾವುದೇ ವಿಶ್ರಾಂತಿ ಇಲ್ಲದೆ ನಡೆದ ಯುದ್ದ ೨೮ ಸಾವಿರ ಪೇಶ್ವೆ ಸೈನಿಕರನ್ನು ಕೇವಲ ೫೦೦ ಮಹರ್ ಸೈನಿಕರು ಸೋಲಿಸಿದರು. ಇದು ಅಸ್ಪೃಶ್ಯತೆ ವಿರುದ್ದ ಸಮಾನತೆಗಾಗಿ ನಡೆದ ಯುದ್ದವಾಗಿದೆ. ಈ ಭೀಮಾ ಕೋರೆಗಾಂವ್ ವಿಜಯಸ್ತಂಭ ಪರಾಕ್ರಮ ಸಾರುವ ವೀರರ ವಿಜಯಸ್ತಂಭವಾಗಿದೆ, ಇತಿಹಾಸದಲ್ಲಿ ಮುಚ್ಚಿಹೋಗಿದ್ದ ಈ ಯದ್ದವನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಜಗತ್ತಿಗೆ ಪರಿಚಯ ಮಾಡಿಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ತೋರಿಸಿಕೊಟ್ಟಿರುವ ಮಾರ್ಗದಲ್ಲಿ ಸಾಗಿದ ಮಾತ್ರ ಅಭಿವೃದ್ದಿ ಸಾಧ್ಯವಾಗುತ್ತದೆ. ಹೊರತು ಯಾವುದೇ ಶಾಸಕ, ಸಂಸದನಿAದ ಸಾಧ್ಯವಿಲ್ಲ. ಮಹರ್ ಸೈನಿಕರ ಪರಾಕ್ರಮ, ದೃಢಸಂಕಲ್ಪ, ಸ್ವಾಭಿಮಾನವನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಸಾನಿಧ್ಯ ವಹಿಸಿದ್ದ ತಿ.ನರಸೀಪುರ ನಳಂದ ಬುದ್ದ ವಿಹಾರದ ಬೋಧಿರತ್ನಬಂತೇಜಿ ಮಾತನಾಡಿ, ಮೊಟ್ಟಮೊದಲಿಗೆ ಸಾಮಾಜಿಕಕ್ರಾಂತಿ ನೆಲೆಗಟ್ಟಿನಲ್ಲಿ ನಡೆದ ಮೊದಲ ಯುದ್ದ ಭೀಮಾಕೋರೆಗಾಂವ್. ಆ ಕಾಲದಲ್ಲಿ ೫೦೦ ಮಹರ್ ಸೈನಿಕರು ೨೮ ಸಾವಿರ ಪೇಶ್ವಿ ಸೈನಿಕರನ್ನು ಸೋಲಿಸಿ ಜಯವನ್ನು ಸಾಧಿಸಿದರು. ಆದರೆ ಇಂದು ದೇಶದಲ್ಲಿ ನಾವು ಬಹುಸಂಖ್ಯಾತರಾಗಿದ್ದರೂ ಕೂಡ ಜಯ ನಮ್ಮದ್ದು ಆಗಿಲ್ಲ ಎಂಬ ಪ್ರಶ್ನೆ ಹಾಕಿಕೊಳ್ಳಬೇಕಿದೆ. ದೇಶದಲ್ಲಿ ಶೇ. ೨ ರಷ್ಠು ಇರುವ ಜನ ಇತಿಹಾಸವನ್ನು ಮರುಕಲಿಸದ ರೀತಿಯಲ್ಲಿ ತಮ್ಮ ಒಳಿತಿಗೋಸ್ಕರ, ತಮ್ಮ ಒಗ್ಗಟ್ಟಿಗೋಸ್ಕರ, ತಮ್ಮ ಆಶಯಗಳನ್ನು ಈಡೇರಿಸಿಕೊಳ್ಳುವುದಕ್ಕೋಸ್ಕರ ಬಹಳ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿರುವ ಬಹುಸಂಖ್ಯಾತರು ಎಲ್ಲೂ ಒಂದು ಕಡೆ ಮೈಮರೆತಿರುವುದನ್ನು ನಾವು ಕಾಣುತ್ತೇವೆ. ಮುಂದಿನ ದಿನಗಳಲ್ಲಿ ನಾವು ಜಾಗೃತರಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ದಲಿತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ ಪಾಪು, ಕೆಪಿಸಿಸಿ ಕಾರ್ಮಿಕ ರಾಜ್ಯ ಕಾರ್ಯದರ್ಶಿ ಜಿ.ಸಿ.ಕಿರಣ್, ವಕೀಲರಾದ ರಾಮಸಮುದ್ರಪುಟ್ಟಸ್ವಾಮಿ, ಬಿ.ಪ್ರಸನ್ನಕುಮಾರ್ ಮಾತನಾಡಿದರು.
ಕಾರ್ಯಕ್ರಮದ ಅಯೋಜಕ ವಾಸುಹೊಂಡರಬಾಳು ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಸದಸ್ಯ ಆರ್.ಪಿ.ನಂಜುಂಡಸ್ವಾಮಿ, ರಾಮಸಮುದ್ರ ಬಾಬು, ಶಿವಣ್ಣ , ಕಾಂತರಾಜು , ಮನು, ಮೋಹನ್ ನಗು, ಅಕ್ಷಯ, ರಾಜು, ಶಿವು, ಶ್ರೀಧರ್, ಭರತ್,ಸುಭಾಷ್ ಇತರರು ಹಾಜರಿದ್ದರು.