ಪ್ರತಿಭಾವಂತ ವಿದ್ಯಾರ್ಥಿಗಳೇ ಇತರರಿಗೆ ಸ್ಪೂರ್ತಿ : ಶಾಸಕ ಸಿ.ಪುಟ್ಟರಂಗಶೆಟ್ಟಿ

ಚಾಮರಾಜನಗರ: ನಗರದ ಪದವಿ ಪೂರ್ವ ಬಾಲಕರ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸುವ ಮೂಲಕ ವೈದ್ಯಕೀಯ ಪದವಿ ಪ್ರವೇಶ ಪಡೆದಿರುವುದು ಗಮನಾರ್ಹ ಸಾಧನೆಯಾಗಿದೆ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ, ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡಿ ವೈದ್ಯಕಿಯ ಕೋರ್ಸ್‍ಗಳಿಗೆ ಪ್ರವೇಶ ಪಡೆದ ಹಾಗೂ ಕಲಾ ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

2008ರಲ್ಲಿ ಮೊದಲ ಬಾರಿಗೆ ಶಾಸಕನಾಗಿ ಕಾಲೇಜಿಗೆ ಭೇಟಿ ನೀಡಿದಾಗ ಹೇಳಿಕೊಳ್ಳುವಂತಹ ಸೌಲಭ್ಯಗಳಿರಲಿಲ್ಲ. ವಿದ್ಯಾರ್ಥಿಗಳ ದಾಖಲಾತಿಯೂ ಕಡಿಮೆಯಿತ್ತು. ಈಗ ಇದೇ ಕಾಲೇಜಿನಲ್ಲಿ ಓದಿದ ಮೂವರು ವೈದ್ಯಕೀಯ ಪದವಿಗೆ ದಾಖಲಾಗಿದ್ದಾರೆ. ಇನ್ನು ಹಲವರು ಅತಿ ಹೆಚ್ಚು ಅಂಕಗಳಿಸಿ ಸಾಧನೆ ಮಾಡಿರುವುದು ಖುಷಿಕೊಟ್ಟಿದೆ ಎಂದರು.

ಈ ಕಾಲೇಜಿಗೆ ಬಡವರು ಮತ್ತು ಹಿಂದುಳಿದ ವರ್ಗಗಳ ಮಕ್ಕಳೇ ಹೆಚ್ಚಾಗಿ ಬರುತ್ತಿದ್ದಾರೆ. ಇದನ್ನು ಗಮನಿಸಿ ಕಾಲೇಜಿಗೆ ಕಾಂಪೌಂಡ್, ಕುಡಿಯುವ ನೀರು ಹಾಗೂ ಪೀಠೋಪಕರಣಗಳನ್ನು ಕಲ್ಪಿಸಿದ್ದೇನೆ. ಕಾಲೇಜಿನ ಆಡಳಿತ ವರ್ಗ ಉತ್ತಮವಾಗಿ ಕೆಲಸ ಮಾಡುತ್ತಿದೆ. ಪ್ರತಿಭಾ ಪುರಸ್ಕಾರ ಸ್ವೀಕರಿಸುತ್ತಿರುವವರೇ ಇತರರಿಗೆ ಸ್ಪೂರ್ತಿ ಎಂದು ತಿಳಿಸಿದರು.

ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಮಂಜುನಾಥ ಪ್ರಸನ್ನ ಅವರು ಮಾತನಾಡಿ, ಹಿಂದೆ ಈ ಕಾಲೇಜಿಗೆ ಹೆಚ್ಚು ವಿದ್ಯಾರ್ಥಿಗಳು ಬರುತ್ತಿರಲಿಲ್ಲ. ಈಗ ಬಾಲಕರ ಕಾಲೇಜಿನಲ್ಲಿ 750, ಬಾಲಕಿಯರ ಕಾಲೇಜಿನಲ್ಲಿ 600 ವಿದ್ಯಾರ್ಥಿಗಳು ಇದ್ದಾರೆ. ಕಾಲೇಜಿನ ಸ್ವಚ್ಚತೆಗೆ ಮತ್ತು ಉತ್ತಮ ಫಲಿತಾಂಶ ಬರಲು ಇಲ್ಲಿನ ಉಪನ್ಯಾಸಕರ ನಡುವಿನ ಸಮನ್ವಯತೆಯೇ ಕಾರಣ ಎಂದು ಮೆಚ್ಚುಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ವೈದ್ಯ ಪದವಿಗೆ ದಾಖಲಾದ ಉಮಾ ಕಾರ್ತಿಕ್, ಎನ್.ಮಣಿಲ್, ಗುರುಪ್ರಸಾದ್ ಸೇರಿದಂತೆ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ 21 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.

ಇದೇ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ವರ್ಗಗೊಂಡ ಉಪನ್ಯಾಸಕರಾದ ಕೃಷ್ಣಮೂರ್ತಿ, ಜಯಶ್ರೀ ಅವರನ್ನು ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು.

ಕಾಲೇಜಿನ ಹಿರಿಯ ಉಪನ್ಯಾಸಕರಾದ ರಾಮಕೃಷ್ಣ ಅವರು ನಿರೋಪಿಸಿದರು, ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯ ಮಹೇಶ್, ಪದವಿ ಪೂರ್ವ ಬಾಲಕರ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಾದ ಸೋಮಣ್ಣ, ಕಾಲೇಜು ಅಭಿವೃದ್ದಿ ಮಂಡಳಿ ಉಪಾಧ್ಯಕ್ಷ ಸಲೀಂ ಉಲ್ಲಾ ಖಾನ್, ಉಪನ್ಯಾಸಕರಾದ ರಾಮಕೃಷ್ಣ, ಮಹದೇವಸ್ವಾಮಿ, ಮಾದಪ್ಪ, ಮಧು, ರಂಗಸ್ವಾಮಿ, ಸುನೀಲ್, ಸವಿತಾ, ಶೀಲಾ, ವಿದ್ಯಾರ್ಥಿಗಳು, ಸೇರಿದಂತೆ ಆತಿಥಿ ಉಪನ್ಯಾಸಕರು ಹಾಜರಿದ್ದರು.

Leave a Reply

Your email address will not be published. Required fields are marked *