ಚಾಮರಾಜನಗರ: ಮತದಾರರ ಪಟ್ಟಿಯಿಂದ ಯಾವುದೇ ಅರ್ಹ ಮತದಾರರು ಹೊರಗುಳಿಯಬಾರದು ಎನ್ನುವ ಮಹತ್ತರ ಉದ್ದೇಶದೊಂದಿಗೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಹಮ್ಮಿಕೊಂಡಿದ್ದು, ದೋಷರಹಿತ ಮತದಾರರ ಪಟ್ಟಿ ತಯಾರಿಕೆಗೆ ರಾಜಕೀಯ ಪಕ್ಷಗಳು ಸಂಪೂರ್ಣವಾಗಿ ಸಹಕಾರ ನೀಡಬೇಕೆಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ತಿಳಿಸಿದರು.
ನಗರದ ಹೆಚ್ಚುವರಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಭಾವಚಿತ್ರವಿರುವ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಮತಗಟ್ಟೆಗಳ ಪುನರ್ ವಿಂಗಡಣೆ ಕಾರ್ಯ ಸಂಬಂಧ ನಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭಾರತ ಚುನಾವಣಾ ಆಯೋಗವು ೧-೦೧-೨೦೨೪ಕ್ಕೆ ಅರ್ಹತಾ ದಿನಾಂಕ ನಿಗದಿಪಡಿಸಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಹಮ್ಮಿಕೊಂಡಿದೆ.
ಮತದಾರರ ಪಟ್ಟಿಯಿಂದ ಯಾವುದೇ ಅರ್ಹ ಮತದಾರರು ಹೊರಗೆ ಉಳಿಯಬಾರದು ಎಂಬುದು ಮುಖ್ಯ ಉದ್ದೇಶವಾಗಿದೆ. ಮತದಾರರ ಪಟ್ಟಿಯನ್ನು ಸರಳೀಕರಣಗೊಳಿಸುವ ಸಲುವಾಗಿ ೧೮ ವರ್ಷ ಮತ್ತು ಮೇಲ್ಪಟ್ಟ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗವು ಅರ್ಹತಾ ದಿನಾಂಕವನ್ನು ಪರಿಷ್ಕರಿಸಿ, ೧ನೇ ಜನವರಿ, ೧ನೇ ಏಪ್ರಿಲ್, ೧ನೇ ಜುಲೈ ಮತ್ತು ೧ನೇ ಅಕ್ಟೋಬರ್ ರಂತೆ ಅರ್ಹತಾ ದಿನಾಂಕ ನಿಗದಿಪಡಿಸಿ ಯುವ ಮತದಾರರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಅನುಕೂಲ ಕಲ್ಪಿಸಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿಯವರು ತಿಳಿಸಿದರು.
ಅರ್ಹರಿಂದ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ತಂತ್ರಾಂಶದ ಮೂಲಕ ಪಡೆಯಲು ಸಂಬಂಧಿಸಿದ ಮತದಾರರ ನೋಂದಣಾಧಿಕಾರಿಗಳು, ಸಹಾಯಕ ಮತದಾರರ ನೋಂದಣಾಧಿಕಾರಿಗಳು, ಬಿ.ಎಲ್.ಒ. ಸೂಪರ್ವೈಸರ್, ಮತಗಟ್ಟೆ ಮಟ್ಟದ ಅಧಿಕಾರಿಗಳು ಮತ್ತು ಇತರೆ ಪರಿಷ್ಕರಣಾ ಕಾರ್ಯದಲ್ಲಿ ತೊಡಗಿರುವ ಅಧಿಕಾರಿ, ಸಿಬ್ಬಂದಿಗೆ ವಿವಿಧ ತಂಡಗಳಲ್ಲಿ ಹಂತ ಹಂತವಾಗಿ ತರಬೇತಿ ನೀಡಲಾಗಿದೆ. ದಿನಾಂಕ ೨೦.೦೪.೨೦೨೩ ರಲ್ಲಿದ್ದಂತೆ ಜಿಲ್ಲೆಯ ೯೮೨ ಮತಗಟ್ಟೆಗಳ ವ್ಯಾಪ್ತಿಯಲ್ಲಿ ೪,೨೬,೫೪೭ ಪುರುಷ, ೪,೩೪,೮೭೩ ಮಹಿಳೆ, ೧೯ ಇತರೆ ಮತದಾರರು ಇದ್ದು, ಜಿಲ್ಲೆಯಲ್ಲಿ ಒಟ್ಟು ೮,೬೧,೪೮೭ ಮತದಾರರು ಇದ್ದಾರೆ ಎಂದರು.
ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿನ ಮತಗಟ್ಟೆಗಳಿಗೆ ನೇಮಕ ಮಾಡಿರುವ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ-ಮನೆ ಸಮೀಕ್ಷೆ ನಡೆಸಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಬಿಡತಕ್ಕವು, ತಿದ್ದುಪಡಿ, ಸ್ಥಳಾಂತರಗಳಿಗೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು ೧೮,೩೯೦ ಅರ್ಜಿ ನಮೂನೆಗಳನ್ನು ಪಡೆದಿದ್ದು, ಈ ಪೈಕಿ ೧೩,೨೯೦ ಅರ್ಜಿಗಳನ್ನು ಪರಿಶೀಲಿಸಿ, ಇತ್ಯರ್ಥಪಡಿಸಿ, ಅರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಕ್ರಮ ವಹಿಸಲಾಗಿದೆ. ಚುನಾವಣಾ ಆಯೋಗವು ನಿಗದಿಪಡಿಸಿರುವ ವೇಳಾಪಟ್ಟಿಯಂತೆ ೨೦೨೩ರ ಅಕ್ಟೋಬರ್ ೧೭ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿಯವರು ತಿಳಿಸಿದರು.
ರಾಜಕೀಯ ಪಕ್ಷಗಳು ಮತದಾರರ ಪಟ್ಟಿ ತಯಾರಿಕೆಯಲ್ಲಿ ಮತಗಟ್ಟೆಗಳಿಗೆ ನೇಮಕ ಮಾಡಿರುವ ಮತಗಟ್ಟೆ ಮಟ್ಟದ ಅಧಿಕಾರಿಗಳು ಹಾಗೂ ಸೂಪರ್ವೈಸರ್ಗಳಿಗೆ ಮತದಾರರ ಪಟ್ಟಿ ಕೆಲಸಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಲು ಅನುಕೂಲವಾಗುವಂತೆ ತಮ್ಮ ತಮ್ಮ ಪಕ್ಷದಿಂದ ಮತಗಟ್ಟೆ ಮಟ್ಟದ ಏಜೆಂಟರುಗಳನ್ನು ನೇಮಕ ಮಾಡಿಕೊಡುವಂತೆ ಹೆಚ್ಚುವರಿ ಜಿಲ್ಲಾಧಿಕಾರಿಯವರು ಮನವಿ ಮಾಡಿದರು.
ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೨ ಕಿ.ಮೀ ಗಿಂತ ಹೆಚ್ಚು ದೂರ ಕ್ರಮಿಸುತ್ತಿರುವ ಮತ್ತು ಕಾಡಿನ ಮಧ್ಯೆ ಇರುವ ಒಂದು ಗ್ರಾಮದಲ್ಲಿ ಹೊಸ ಮತಗಟ್ಟೆಯನ್ನು ತೆರೆಯಲು ಮತ್ತು ಇತರೆ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಶಿಥಿಲವಾಗಿರುವ ೧೪ ಮತಗಟ್ಟೆಗಳನ್ನು ಇತರೆ ಕಟ್ಟಡಗಳಿಗೆ ಸ್ಥಳಾಂತರಿಸಲು ಪ್ರಸ್ತಾವನೆ ಸಲ್ಲಿಸಲು ಕ್ರಮವಹಿಸಲಾಗಿದೆ ಎಂದರು.
ಕರಡು ಮತದಾರರ ಪಟ್ಟಿ ಪ್ರಕಟಣೆಯ ದಿನಾಂಕ: ೧೭.೧೦.೨೦೨೩ ರಿಂದ ೩೦.೧೧.೨೦೨೩ ರವರೆಗೆ ಸ್ವೀಕರಿಸಲಾಗುವ ಹಕ್ಕು, ಆಕ್ಷೇಪಣೆಗಳನ್ನು ಪರಿಶೀಲಿಸಿ ದಿನಾಂಕ: ೨೬.೧೨.೨೦೨೩ ರೊಳಗೆ ಇತ್ಯರ್ಥಪಡಿಸಲಾಗುತ್ತದೆ. ಚುನಾವಣಾ ಆಯೋಗವು ನಿಗದಿಪಡಿಸುವ ೨ ಶನಿವಾರಗಳಂದು ಮತ್ತು ಭಾನುವಾರಗಳಂದು ವಿಶೇಷ ಆಂದೋಲನ ನಡೆಸುತ್ತಿದ್ದು, ಅಂದು ಬಿ.ಎಲ್.ಒ. ಗಳು ಬೆಳಿಗ್ಗೆ ೯ರಿಂದ ಸಂಜೆ ೫ಗಂಟೆಯವರೆಗೆ ಆಯಾ ಮತಗಟ್ಟೆಗಳಲ್ಲಿ ಹಾಜರಿದ್ದು, ಮತದಾರರ ಪಟ್ಟಿಗೆ ಸಂಬಂಧಿಸಿದಂತಹ ಸಾರ್ವಜನಿಕರಿಂದ ಬರುವ ಅರ್ಜಿಗಳನ್ನು ಸ್ವೀಕರಿಸಲಿದ್ದಾರೆ. ಕರಡು ಮತದಾರರ ಪಟ್ಟಿಯ ಪರಿಶೀಲಿಸಿಕೊಂಡು ಸೇರ್ಪಡೆ, ಬಿಡತಕ್ಕವುಗಳನ್ನು ಒಟ್ಟುಗೂಡಿಸಿ ಚುನಾವಣಾ ಆಯೋಗದ ಅನುಮೋದನೆಯೊಡನೆ ೨೦೨೪ರ ಜನವರಿ ೫ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ತಿಳಿಸಿದರು.
ಉಪವಿಭಾಗಾಧಿಕಾರಿ ಮಹೇಶ್, ಚುನಾವಣಾ ತಹಶೀಲ್ದಾರ್ ರವಿಕುಮಾರ್ ಚ ವಸ್ತ್ರದ್, ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಎಂ. ಚಿಕ್ಕಮಹದೇವು, ಎಸ್. ಬಾಲಸುಬ್ರಹ್ಮಣ್ಯಂ, ಡಾ. ಗುರುಪ್ರಸಾದ್, ಬ್ಯಾಡಮೂಡ್ಲು ಬಸವಣ್ಣ, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.