ರೇಷ್ಮೆ ಬೆಳೆಗಾರರ ತರಬೇತಿ ಕಾರ್ಯಾಗಾರ ಉದ್ಗಾಟನೆ
ಚಾಮರಾಜನಗರ: ರೈತರು ಕಡಿಮೆ ನೀರು ಬಳಕೆ ಮಾಡಿ, ರೇಷ್ಮೆ ಕೃಷಿಯನ್ನು ಮಾಡುವುದರಿಂದ ಇತರೇ ಬೆಳೆಗಳಿಗಿಂದ ಅಧಿಕ ಆದಾಯವನ್ನು ಪಡೆದು ಸಮೃದ್ದಿ ಜೀವನ ನಡೆಸಲು ಸಾಧ್ಯವಿದೆ ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ತಿಳಿಸಿದರು.
ನಗರದ ರೇಷ್ಮೆ ಇಲಾಖೆಯ ಅವರಣದಲ್ಲಿ ರೇಷ್ಮೆ ಇಲಾಖೆ, ಜಿಲ್ಲಾ ಪಂಚಾಯತ್ ವತಿಯಿಂದ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ ಹಿಪ್ಪು ನೆರಳೆ ತೋಟಕ್ಕೆ ಹನಿ ನೀರಾವರಿ ಘಟಕ ಅಳವಡಿಸಿರುವ ರೇಷ್ಮೆ ಬೆಳೆಗಾರರಿಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಾಣಿಜ್ಯ ಬೆಳೆ ಹಾಗೂ ತೋಟಗಾರಿಕೆ ಬೆಳೆಗಳಿಂದ ರೈತರಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತಿಲ್ಲ. ನಷ್ಟವೇ ಹೆಚ್ಚಾಗುತ್ತಿದೆ. ತೋಟಗಾರಿಕೆ ಬೆಳೆಗಳಿಗೆ ಖರ್ಚು ಅಧಿಕ ಜೊತೆಗೆ ಸೂಕ್ತ ಮಾರುಕಟ್ಟೆ ದೊರೆಯುವುದಿಲ್ಲ. ವಾಣಿಜ್ಯ ಬೆಳೆಗಳಾದ ಕಬ್ಬು, ಅರಿಶಿನ ಬೆಳೆಗಳನ್ನು ವರ್ಷ ಪೂರ್ತಿ ಕಾಪಾಡಿಕೊಂಡು ಬಂದರು ಸೂಕ್ತ ಬೆಲೆ ಸಿಗುವುದಿಲ್ಲ. ಹೀಗಾಗಿ ರೈತರು ರೇಷ್ಮೆ ಕೃಷಿಯತ್ತ ಸಾಗಬೇಕು. ಜೊತೆಗೆ ವೈಜ್ಞಾನಿಕ ಪದ್ದತಿಗಳನ್ನು ಅಳವಡಿಸಿಕೊಂಡು ಕೃಷಿ ವಿಜ್ಞಾನಿಗಳು ಹಾಗೂ ಅಧಿಕಾರಿಗಳ ಸಂಪರ್ಕವನ್ನು ಹೊಂದಿ ಸರ್ಕಾರದ ಸವಲತ್ತುಗಳನ್ನು ಪಡೆದುಕೊಂಡು ಅಭಿವೃದ್ದಿ ಯತ್ತ ಸಾಗಬೇಕು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೇ ಕೃಷಿ ಭಾಗ್ಯ ಯೋಜನೆಯನ್ನು ಜಾರಿ ಮಾಡುತ್ತಿದ್ದು, ಇದರಿಂದ ಸಣ್ಣಮತ್ತು ಸಣ್ಣ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ.ರೇಷ್ಮೆ ಬೆಳೆಗಾರರು ಇದರ ಪ್ರಯೋಜವನ್ನು ಪಡೆದುಕೊಂಡು ಹನಿ ನೀರಾವರಿ ಅಳವಡಿಸಿಕೊಳ್ಳಿ, ಕೇಂದ್ರದ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ರೇಷ್ಮೆ ಕೃಷಿಕರು ಇಲಾಖೆಯಿಂದ ರೇಷ್ಮೆ ಕೃಷಿಯ ಪರಿಕರಗಳು ಸಕಾಲದಲ್ಲಿ ದೊರೆಯುವಂತೆ ಮಾಡಬೇಕು. ರೇಷ್ಮೆ ಮನೆಗಳ ನಿರ್ಮಾಣ ಸಹಾಯ ಧನ 70 ಲಕ್ಷ ರೂ. ಸರ್ಕಾರದಿಂದ ಬಿಡುಗಡೆಯಾಗಿಲ್ಲ. ತಕ್ಷಣ ಸಚಿವರೊಂದಿಗೆ ಚರ್ಚಿಸಿ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದರು.
ಬಳಿಕ ಕೃಷಿ ವಿಜ್ಞಾನಿಗಳಿಂದ ರೈತರಿಗೆ ಮಾಹಿತಿ ಹಾಗೂ ರೇಷ್ಮೆ ಬೆಳೆಯುವ ವಿಧಾನಗಳು ಮತ್ತು ರೋಗನಿರೋಧ ಶಕ್ತಿ ವೃದ್ದಿ ಸುವ ಕುರಿತು ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ರೇಷ್ಮೆ ಉಪ ನಿರ್ದೇಶಕ ಎನ್. ಗಿರೀಶ್ ರೇಷ್ಮೆ ಕೃಷಿಕರಿಗೆ ಪ್ರಶಂಸೆ ಪತ್ರ ವಿತರಿಸಿ ಅಧ್ಯಕ್ಷತೆ ವಹಿಸಿ, ರೈತರ ಸಮಸ್ಯೆಗಳನ್ನು ಆಲಿಸಿ, ಸಚಿವರ ಗಮನ ಸೆಳೆದು ಪರಿಹರಿಸುವ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಎಪಿಎಂಸಿ ನಿರ್ದೇಶಕ ಆಲುರು ಪ್ರದೀಪ್, ಮೈಸೂರಿನ ಸಿಎಸ್ಆರ್ಟಿಐನ ವಿಜ್ಞಾನಿ ಡಾ. ಶ್ರೀಕಂಠಸ್ವಾಮಿ, ಕೆವಿಕೆ ವಿಜ್ಞಾನಿ ಡಾ. ನಾಗರಾಜು, ಕೆಎಸ್ಎಸ್ಆರ್ಡಿಐನ ವಿಜ್ಞಾನಿ ಡಾ. ಸಿದ್ದಲಿಂಗಸ್ವಾಮಿ, ರೇಷ್ಮೆ ಸಹಾಯಕ ನಿರ್ದೇಶಕರಾದ ಎಂ. ರೇಣುಕೇಶ್, ಶ್ವೇತಾ,ರೇಷ್ಮೆ ವಿಸ್ತಾರಣಾಧಿಕಾರಿ ಸಿ. ಶಿವಬಸವಮೂರ್ತಿ, ರೇಷ್ಮೆ ನಿರೀಕ್ಷಕರಾದ ಕೆ. ಬಸವರಾಜು, ಜಿ. ಶಿವಕುಮಾರ್ ಮೊದಾಲದವರು ಇದ್ದರು.