ಚಾಮರಾಜನಗರ: ದೇಶದಲ್ಲಿ ಬಹಳ ವರ್ಷಗಳ ಕಾಲ ಆಡಳಿತ ನಡೆಸಿ ಕಾಂಗ್ರೆಸ್ ಸಂವಿಧಾನ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಸಚಿವ ಎನ್.ಮಹೇಶ್ ಆರೋಪಿಸಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸಂವಿಧಾನ ಸಮರ್ಪಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಪ್ಷಾರ್ಚನೆ ಮಾಡಿ ಅವರು ಮಾತನಾಡಿದರು.
ಒಂದು ಸಾವಿರಕ್ಕೂ ಹೆಚ್ಚು ವರ್ಷಗಳ ಕಾಲ ಪರಕೀಯರ ಆಡಳಿತದಲ್ಲಿದ್ದ ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನವನ್ನು ರಚನೆ ಮಾಡಿಕೊಟ್ಟರು. ನ.26 ರಂದು ಸಂವಿಧಾನವನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡಿದರು. ಈ ಪವಿತ್ರವಾದ ದಿನವನ್ನು ಕಾನೂನು ದಿನವನ್ನಾಗಿ ಅಚರಣೆ ಮಾಡುವ ಮೂಲಕ ಅವರ ಮಹತ್ವವನ್ನೇ ಮರೆತಿದ್ದರು. ಅಲ್ಲದೇ ಜ. 26 ದೇಶಕ್ಕೆ ಸಂವಿಧಾವನ್ನು ಸಮರ್ಪಣೆ ಮಾಡಿದ ದಿನವಾಗಿದೆ. ಈ ದಿನವನ್ನು ಗಣರಾಜ್ಯೋತ್ಸವ ದಿನವನ್ನಾಗಿ ಮಾಡುವ ಮೂಲಕ ಸಂವಿಧಾನ ಹಾಗೂ ಅಂಬೇಡ್ಕರ್ ಅವರಿಗೆ ಅಗೌರವವನ್ನು ತಂದಿದ್ದರು. ಇಂಥವರು ಸಂವಿಧಾನ ಉದ್ದಾರಕರು ಎಂದು ಹೇಳಿಕೊಳ್ಳುತ್ತಿರುವುದು ನಾಚಿಗೇಡಿನ ಸಂಗತಿಯಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ರಚನೆಯಾಗುತ್ತಿದ್ದಂತೆ 2016ರಲ್ಲಿ ಪ್ರಧಾನಿ ನರೇಂದ್ರಮೋದಿಯವರು ಇದನ್ನು ಬದಲಾವಣೆ ಮಾಡಿ, ನ. 26 ರನ್ನು ಸಂವಿಧಾನ ದಿನವನ್ನಾಗಿ, ಜ. 26ರನ್ನು ಸಂವಿಧಾನ ಸಮರ್ಪಣಾ ದಿನವನ್ನಾಗಿ ಆಚರಣೆ ಮಾಡುವ ಮೂಲಕ ಮಾದರಿಯಾದರು. ಜನರಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಹಾಗು ಸಂವಿಧಾನ ಮಹತ್ವವನ್ನು ಜಗತ್ತಿಗೆ ಸಾರಿದರು. ಆದರೆ, ಬಹಳಷ್ಟು ಕಾಲ ಆಡಳಿತ ನಡೆಸಿದ ಕಾಂಗ್ರೆಸ್ಸಿಗರಿಗೆ ಏಕೆ ಈ ಆಲೋಚನೆಗಳು ಬರಲಿಲ್ಲ. ಇದಕ್ಕೂ ಮುನ್ನಾ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು, ನ. 26ರ ಸಂವಿಧಾನ ದಿನವನ್ನಾಗಿ ಘೋಷಣೆ ಮಾಡಿ, ಒಂದು ವರ್ಷ ಕಾಲ ಸಂವಿಧಾನ ಮಹತ್ವವನ್ನು ಜಾಗೃತಿ ಮೂಡಿಸಿದ ಕಾರ್ಯಕ್ರಮವನ್ನು ಗುಜರಾತಿನಲ್ಲಿ ಜಾರಿ ಮಾಡಿದ್ದರು ಎಂದರು.
ದೇಶದಲ್ಲಿ ಎರಡು ಸಂವಿಧಾನ ಜಾರಿಯಲ್ಲಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ಅಂಬೇಡ್ಕರ್ ಅವರ ಸಂವಿಧಾನ ಜಾರಿಯಾಗಿರಲಿಲ್ಲ. ಅರ್ಟಿಕಲ್ 370 ರದ್ದುಪಡಿಸುವ ಮೂಲಕ ಒಂದು ದೇಶದ ಒಂದೇ ಸಂವಿಧಾನವನ್ನು ಜಾರಿ ಮಾಡುವ ಮೂಲಕ ಅಂಬೇಡ್ಕರ್ ಅವರ ಅಶಯದಂತೆ ನಡೆದುಕೊಂಡಿದ್ದು ಬಿಜೆಪಿ ಹಾಗು ನರೇಂದ್ರ ಮೋದಿ ಅವರು, ಈ ಎಲ್ಲಾ ವಿಚಾರಗಳನ್ನು ಜನರಿಗೆ ತಿಳಿಸುವ ಮೂಲಕ ದೇಶದ ಅಭಿವೃದ್ದಿ ಮತ್ತು ಸಂವಿದಾನ ಸಂರಕ್ಷಣೆಗೆ ಬಿಜೆಪಿಯನ್ನು ಬೆಂಬಲಿಸಬೇಕು ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಜಿ. ನಾರಾಯಣ ಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂವಿಧಾನ ದಿನಾಚರನೆಯ ಮೂಲಕ ಅಂಬೇಡ್ಕರ್ ಅವರ ಆಶಯ ಮತ್ತು ಸಂವಿಧಾನದ ಮಹತ್ವವನ್ನು ಸಾರುವ ಮೂಲಕ ಅಭಿವೃದ್ದಿಯತ್ತ ಭಾರತ ಏಕತೆಯ ಭಾರತವನ್ನು ನಿರ್ಮಾಣ ಮಾಡುವ ಪಣ ತೊಡೋಣ ಎಂದರು.
ಜಿಲ್ಲ ಎಸ್ಸಿ ಮೋರ್ಚಾ ಅಧ್ಯಕ್ಷ ಮೂಡ್ನಾಕೂಡು ಪ್ರಕಾಶ್ ಮಾತನಾಡಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಭೇಡ್ಕರ್ ಅವರಿಗೆ ಗೌರವವನ್ನು ತಂದುಕೊಟ್ಟಿದ್ದು ಬಿಜೆಪಿ ಎಂಬುವುದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕಾಗಿದೆ. ಕಾಂಗ್ರೆಸ್ ಪಕ್ಷದ ದಲಿತರ ಮತಗಳನ್ನು ಪಡೆದುಕೊಳ್ಳಲು ಇಲ್ಲಸಲ್ಲದ ಸುಳ್ಳು ಹೇಳುತ್ತಿದ್ದೆ. ನಿಜವಾದ ಸಂವಿಧಾನ ವಿರೋಧಿಗಳು ಕಾಂಗ್ರೆಸ್ಸಿಗರು. ಅವರು ಆಡಳಿತ ಅವಧಿಯಲ್ಲಿ ನಡೆದ ಆನೇಕ ಘಟನೆಗಳು ಇದಕ್ಕೆ ಪುಷ್ಟಿ ನೀಡುತ್ತಿವೆ. ಆದರೆ, ಅಂಬೇಡ್ಕರ್ ಅವರಿಗೆ ಗೌರವ ನೀಡುವ ಜೊತೆಗೆ ಅವರು ಜನಿಸಿದ, ಮತ್ತು ವಾಸವಿದ್ದ, ವ್ಯಾಸಂಗ ಮಾಡಿದ ಹಾಗು ಐಕ್ಯವಾದ ಸ್ಥಳಗಳನ್ನು ಅಭಿವೃದ್ದಿಪಡಿಸುವ ಮೂಲ ಪಂಚತೀರ್ಥ ಕ್ಷೇತ್ರಗಳನ್ನಾಗಿ ಅಭಿವೃದ್ದಿಸಿದೆ. ಇವೆಲ್ಲವನ್ನು ದಲಿತ ಸಮುದಾಯಕ್ಕೆ ಮನವರಿಕೆ ಮಾಡಿಕೊಡುವ ಕೆಲಸವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಸಿ.ಎಸ್. ನಿರಂಜನ್‍ಕುಮಾರ್, ಎಸ್. ಬಾಲರಾಜು ಮಾತನಾಡಿದರು, ವೇದಿಕೆಯಲ್ಲಿ ಕೇಂದ್ರ ಬರ ಪರಿಹಾರ ಸಮಿತಿಯ ಮಾಜಿ ಅಧ್ಯಕ್ಷ ಎಂ. ರಾಮಚಂದ್ರ, ರಾಷ್ಟ್ರೀಯ ಓಬಿಸಿ ಕಾರ್ಯಕಾರಣಿ ಸದಸ್ಯ ನೂರೊಂದು ಶೆಟ್ಟಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಎ.ಆರ್.ಬಾಬು, ಮಾಜಿ ಅಧ್ಯಕ್ಷ ಆರ್.ಸುಂದರ್, ಡಾ. ದತ್ತೇಶ್‍ಕುಮಾರ್, ಮಂಡಲದ ಅಧ್ಯಕ್ಷರಾದ ಹನೂರು ವೀರಭದ್ರಸ್ವಾಮಿ,ಅರಕಲವಾಡಿ ನಾಗೇಂದ್ರ, ನಗರ ಮಂಡಲದ ಅಧ್ಯಕ್ಷ ನಾಗರಾಜು, ರಾಮಸಮುದ್ರ ಶಿವಣ್ಣ, ಜಿಲ್ಲಾ ವಕ್ತಾರ ಶಿವಕುಮಾರ್, ಜಿಲ್ಲಾಮಾಧ್ಯಮ ಪ್ರಮುಖ ಮಂಜುನಾಥ್, ಎಸ್ಟಿ ಮೋರ್ಚಾ ಅಧ್ಯಕ್ಷ ಜಯಸುಂದರ್, ಮಹಿಳಾ ಮೋರ್ಚಾ ಅಧ್ಯಕ್ಷೆ ಮಲೆಯೂರು ಕಮಲಮ್ಮ, ಸರಸ್ವತಿ, ಯುವ ಮೋರ್ಚಾ ಅಧ್ಯಕ್ಷ ಪ್ರಣಯ್ ಮೊದಲಾಧವರು ಇದ್ದರು.