ಚಾಮರಾಜನಗರ: ಅಮಾವಾಸ್ಯೆ ಹಿನ್ನೆಲೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಬೆಟ್ಟದಲ್ಲಿರುವ ಸಮಸ್ಯೆಗಳ ಬಗ್ಗೆ ಮಲೈ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಅವರು ಸರದಿ ಸಾಲಿನಲ್ಲಿ ನಿಂತಿರುವ ಭಕ್ತರ ಬಳಿ ಮಾಹಿತಿ ಪಡೆದುಕೊಂಡರು.
ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದಲ್ಲಿ ಇರುವ ಮುಖ್ಯ ಸಮಸ್ಯೆಗಳ ಬಗ್ಗೆ ಭಕ್ತರೊಂದಿಗೆ ಸರತಿ ಸಾಲಿನಲ್ಲಿ ತೆರಳುವ ಮೂಲಕ ಮಾಹಿತಿ ಪಡೆದರು. ನಂತರ ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದ್ದು, ಇದನ್ನು ಪರಿಶೀಲಿಸಿದರು.
ನಂತರ ಲಾಡು ಕೇಂದ್ರಕ್ಕೆ ಭೇಟಿ ನೀಡಿ ಲಾಡು ವಿತರಣೆ ಮಾಡುತ್ತಿರುವ ಬಗ್ಗೆ ಪರಿಶೀಲಿಸಿ ಲಾಡು ಕೌಂಟರ್‍ನಲ್ಲಿ ಮತ್ತೆರಡು ಕಂಪ್ಯೂಟರ್‍ಗಳನ್ನು ಅಳವಡಿಸಿಕೂಂಡು ಭಕ್ತಾದಿಗಳಿಗೆ ತೊಂದರೆಯಾಗದಂತೆ ಟಿಕೆಟ್ ವಿತರಿಸುವಂತೆ ಸೂಚಿಸಿ, ಲಾಡು ತಯಾರಿಕ ಸಂಬಂಧ ಟೆಂಡರ್‍ದಾರರು ಸರಬರಾಜು ಮಾಡಿರುವ ಕಡಲೆ ಹಿಟ್ಟು ಚೀಲವನ್ನು ತೂಕ ಮಾಡಿಸಿ ನಂತರ ಗುಣಮಟ್ಟವನ್ನು ಪರಿಶೀಲಿಸಿದರು.

ಚಿನ್ನ ಮತ್ತು ಬೆಳ್ಳಿ ರಥಗಳ ಸೇವಾ ಟಿಕೆಟ್ ಕೌಂಟರ್ ಗಳಿಗೆ ಭೇಟಿ ನೀಡಿದ ಅವರು, ಭಕ್ತಾದಿಗಳಿಗೆ ಟಿಕೆಟ್ ವಿತರಣೆ ಮಾಡುತ್ತಿರುವುದನ್ನು ಪರಿಶೀಲಿಸಿ ನಂತರ ಚಿನ್ನದ ರಥದ ಸೇವೆಯನ್ನು ಮಾಡುವವರಿಗೆ ಪ್ರಾಧಿಕಾರದ ವತಿಯಿಂದ ನೀಡಲಾಗುವ ತಾಮ್ರದ ತಟ್ಟೆ ಮತ್ತು ಚಂಬುಗಳ ಗುಣಮಟ್ಟವನ್ನು ಪರಿಶೀಲಿಸಿದರು. ನಂತರ ದಾಸೋಹ ಭವನಕ್ಕೆ ಭೇಟಿ ನೀಡಿ 60 ವರ್ಷ ಮೇಲ್ಪಟ್ಟ ವರಿಗೆ ಪ್ರತ್ಯೇಕವಾಗಿ ಸರದಿ ಸಾಲಿನ ವ್ಯವಸ್ಥೆ ಕಲ್ಪಿಸಿದರು.

ನಂತರ ದಾಸೋಹ ಭವನದ ದಾಸ್ತಾನು ಕೊಠಡಿಗೆ ಭೇಟಿ ನೀಡಿ ಆಹಾರ ಸಾಮಾಗ್ರಿಗಳನ್ನು ಪರಿಶೀಲಿಸಿ ಕೊಠಡಿಯಲ್ಲಿ ಇದ್ದ ತಟ್ಟೆಗಳನ್ನು ಉಪಯೋಗಿಸುವಂತೆ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಮಾತನಾಡಿದ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಅವರು, ಮುಂದಿನ ದಿನಗಳಲ್ಲಿ ಸಾಕಷ್ಟು ಸಮಸ್ಯೆಗಳು ಬಗೆಹರಿದಿವೆ. ಇನ್ನು ಬಾಕಿ ಇರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಂಬಂಧಪಟ್ಟವರ ಜತೆ ಚರ್ಚಿಸಿ ಕ್ರಮ ವಹಿಸುತ್ತೇನೆ. ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಅನುಕೂಲ ಕಲ್ಪಿಸುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ ಎಂದರು.