ಹಾಪ್‍ಕಾಮ್ಸ್‍ಗೆ ಸ್ವಂತ ಜಾಗ ಹಾಗೂ ಮಾರುಕಟ್ಟೆಯನ್ನು ವಿಸ್ತರಣೆ ಮಾಡಲು ಬದ್ದ: ಕೆ.ಆರ್. ಲೋಕೇಶ್

ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿರುವ ಹಾಪ್‍ಕಾಮ್ಸ್‍ಗೆ ಸ್ವಂತ ಜಾಗ ಹಾಗೂ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯನ್ನು ಅಭಿವೃದ್ದಿ ಪಡಿಸಿ ರೈತರು ಬೆಳೆದ ತಾಜಾ ತರಕಾರಿ ಹಾಗೂ ಹಣ್ಣುಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಜಿಲ್ಲಾ ತೋಟದ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘದ ಅಧ್ಯಕ್ಷ ಕೆ.ಆರ್. ಲೋಕೇಶ್ ತಿಳಿಸಿದರು.

ನಗರದ ಹಳೇ ರೇಷ್ಮೆಗೂಡು ಮಾರುಕಟ್ಟೆ ಕಟ್ಟಡದಲ್ಲಿರುವ ಹಾಪ್‍ಕಾಮ್ಸ್ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ತೋಟದ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘದ ವಾರ್ಷಿಕ ಮಹಾಸಭೆಂiಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಸತಿ ನಿಲಯಗಳು, ಪಂಚಾಯಿತಿಗಳಿಂದ ಹಾಪ್‍ಕಾಮ್ಸ್‍ಗೆ ಬಾಕಿ ಹಣ ಇದ್ದು, ಇದನ್ನು ವಸೂಲಿ ಮಾಡುವ ಜೊತೆಗೆ ಸಂಘವನ್ನು ಲಾಭದತ್ತ ಕೊಂಡೊಯ್ಯಲು ಎಲ್ಲರು ಸಹಕಾರ ನೀಡಬೇಕು. ಈಗಾಗಲೇ ಸಹಕಾರಿ ಕಾಯ್ದೆಯಡಿಯಲ್ಲಿ ನೋಟಿಸ್ ನೀಡಲಾಗಿದೆ. ವಸೂಲಾತಿಯನ್ನು ಮಾಡುವ ಜೊತೆಗೆ ಇದಕ್ಕೆ ಪ್ರತ್ಯೇಕ ಸಮಿತಿ ರಚನೆ ಮಾಡಿಕೊಂಡು ಹಾಪ್‍ಕಾಮ್ಸ್ ಅಭಿವೃದ್ದಿ ಪಡಿಸಲು ಎಲ್ಲರು ಸಹಕಾರ ನೀಡಬೇಕು ಎಂದು ಲೋಕೇಶ್ ತಿಳಿಸಿದರು.

ಈಗಾಗಲೇ ಎಲ್ಲಾ ನಿರ್ದೇಶಕರು ಚರ್ಚೆ ಮಾಡಿ, ಜಿಲ್ಲಾ ಕೇಂದ್ರದಲ್ಲಿರುವ ಹಾಪ್‍ಕಾಮ್ಸ್ ಮಳಿಗೆಯನ್ನು ಪುನಚ್ಚೇತನ ಗೊಳಿಸುವುದು, ಹಾಗೂ ತಾಲೂಕು ಮತ್ತು ಹೋಬಳಿ ಕೇಂದ್ರಗಳಲ್ಲಿ ಮಳಿಗೆಯನ್ನು ಆರಂಭಿಸುವ ಬಗ್ಗೆ ನಿರ್ಣಯ ಮಾಡಲಾಗಿದೆ.

ಹಾಪ್‍ಕಾಮ್ಸ್‍ಗೆ ಸ್ವಂತ ಕಟ್ಟಡ ನಿರ್ಮಾಣ ಹಾಗು ಜಿಲ್ಲೆಯ ವ್ಯಾಪ್ತಿಯಲ್ಲಿರುವ ಸರ್ಕಾರಿ ಹಾಸ್ಟೆಲ್‍ಗಳಿಗೆ ತರಕಾರಿ ಹಾಗೂ ಹಣ್ಣುಗಳನ್ನು ಸರಬರಾಜು ಮಾಡುವುದು. ವಿದ್ಯಾರ್ಥಿಗಳಿಗೆ ತಾಜಾ ಹಣ್ಣು ಹಾಗೂ ತರಕಾರಿಯನ್ನು ಪೊರೈಕೆ ಮಾಡಲು ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗುತ್ತದೆ ಎಂದು ಸಭೆಗೆ ತಿಳಿಸಿದರು. ಹಾಲಿ ಕಟ್ಟಡ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಕ್ಕೆ ಹೋಗಿದ್ದು, ಹಾಪ್‍ಕಾಮ್ಸ್‍ಗೆ ಬೇರೆ ಕಟ್ಟಡವನ್ನು ನೀಡುವಂತೆ ಜಿಲ್ಲಾಧಿಕಾರಿಗಳು ಹಾಗೂ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಸಂಘದ ಅದಾಯವನ್ನು ಹೆಚ್ಚಿಸುವ ಜೊತೆಗೆ ಲಾಭದಾಯಕ ಸಂಸ್ಥೆಯನ್ನಾಗಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಲೋಕೇಶ್ ತಿಳಿಸಿದರು.

ಸಂಘದ ಸದಸ್ಯರು ಆಡಳಿತ ಮಂಡಲಿಯ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೇ ಹಾಪ್‍ಕಾಮ್ಸ್ ನಷ್ಟದಲ್ಲಿದ್ದು, ಮುಂದಿನ ವರ್ಷ ಲಾಭ ಗಳಿಸುವ ನಿಟ್ಟಿನಲ್ಲಿ ಅಧ್ಯಕ್ಷರು ಹಾಗೂ ನಿರ್ದೇಶಕರು ಶ್ರಮಿಸಬೇಕು. ಬಾಕಿಯನ್ನು ವಸೂಲಿ ಮಾಡಲು ಕ್ರಮ ಕೈಗೊಳ್ಳಬೇಕು. ಹಾಪ್‍ಕಾಮ್ಸ್ ಮಳಿಗೆಗಳನ್ನು ಹೆಚ್ಚಳ ಮಾಡಿ, ತಾಜಾ ತರಕಾರಿ ಹಾಗು ಹಣ್ಣುಗಳನ್ನು ಪೊರೈಕೆ ಮಾಡಲು ಇಲಾಖೆಯ ನೀಡಿರುವ ವಾಹನವನ್ನು ಬಳಸಿಕೊಳ್ಳಬೇಕು ಎಂಬ ಸಲಹೆ ಸೂಚನೆಗಳನ್ನು ನೀಡಿದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ಬಿ. ಶೃತಿ ಕುಮಾರಸ್ವಾಮಿ, ನಿರ್ದೇಶಕರಾದ ಎಂ.ಪಿ. ನಿರಂಜನ್‍ಮೂರ್ತಿ, ಪುಟ್ಟರಸು, ಪುಟ್ಟುಸುಬ್ಬಪ್ಪ, ಎಸ್. ಬಸವಶೆಟ್ಟಿ, ಆರ್. ಜಯಲಕ್ಷ್ಮಿ ವೆಂಕಟೇಶ್, ವೈ.ಪಿ.ರಾಜೇಂದ್ರಪ್ರಸಾದ್, ಕೆಎಚ್‍ಎಫ್ ಪ್ರತಿನಿಧಿ ಸೂರ್ಯಕುಮಾರ್, ಸಂಘದ ವ್ಯವಸ್ಥಾಪಕ ಎಸ್. ಕುಮಾರ್, ಸಿಇಓ ನವೀನ್, ಯತಿರಾಜ್ ಹಾಗೂ ಸದಸ್ಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *