ಚಾಮರಾಜನಗರ: ಜನತಾ ದರ್ಶನ ಹಾಗೂ ಸಾರ್ವಜನಿಕ ಕುಂದು ಕೊರತೆ ನಿವಾರಣಾ ವ್ಯವಸ್ಥೆ (ಐ.ಪಿ.ಜಿ.ಆರ್.ಎಸ್.)ತಂತ್ರಾಂಶದಲ್ಲಿ ಸ್ವೀಕೃತವಾದ ದೂರುಗಳ ಇತ್ಯರ್ಥ ಸಂಬಂಧ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಇಂದು ಹೆಚ್ಚುವರಿ ಜಿಲ್ಲಾಧಿಕಾರಿಯವರಾದ ಗೀತಾ ಹುಡೇದ ಅವರು ಸಭೆ ನಡೆಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿದ ಹೆಚ್ಚುವರಿ ಜಿಲ್ಲಾಧಿಕಾರಿಯವರು ಬಾಕಿ ಉಳಿಸಿಕೊಂಡಿರುವ ದೂರುಗಳನ್ನು ನಿಗದಿತ ಅವಧಿಯೊಳೆಗೆ ವಿಲೇ ಮಾಡುವಂತೆ ಸೂಚಿಸಿದರು.
ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಕ್ರಮ ಕೈಗೊಳ್ಳಬಹುದಾದ ವಿಷಯಗಳನ್ನು ಸ್ಥಳೀಯವಾಗಿ ಇತ್ಯರ್ಥ ಮಾಡುವಂತೆ ತಿಳಿಸಿದರು.
ರಾಜ್ಯಮಟ್ಟದಲ್ಲಿ ಕ್ರಮ ವಹಿಸಬೇಕಾದ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕ್ರಮವಹಿಸಲು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿ ದೂರುದಾರರಿಗೆ ಸೂಕ್ತ ಮಾಹಿತಿ ನೀಡುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು.
ನಿಗದಿತ ಅವಧಿಯಲ್ಲಿ ಸಮಸ್ಯೆಗಳನ್ನು ಬಗೆಹರಿಸಬೇಕು.ಇಲ್ಲವಾದಲ್ಲಿ ಮುಂದಿನ ಕ್ರಮ ಜರುಗಿಸಲಾಗುವುದೆಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ತಿಳಿಸಿದರು. ವಿವಿಧ ಇಲಾಖೆಗಳ ಜಿಲ್ಲಾ ಮಟ್ಡದ ಅಧಿಕಾರಿಗಳು ಸಭೆಯಲ್ಲಿ ಇದ್ದರು.