ಚಾಮರಾಜನಗರ: ಗ್ರಾ.ಪಂ. ಕೇಂದ್ರ ಹೊಂಗನೂರು ಗ್ರಾಮದಲ್ಲಿ ಪದವಿ ಪೂರ್ವ ಕಾಲೇಜು ಆರಂಭಿಸಲು ಶಿಕ್ಷಣ ಸಚಿವರಿಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದು, ಆಡಳಿತಾತ್ಮಕ ಮಂಜೂರಾತಿ ವೇಳೆಯಲ್ಲಿ ಪ್ರಥಮ ಅಧ್ಯತೆಯಾಗಿ ಹೊಂಗನೂರು ಶಾಲೆಯನ್ನು ಸೇರಿಸಲಾಗುವುದು ಎಂದು ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್. ಕೃಷ್ಣಮೂರ್ತಿ ತಿಳಿಸಿದರು.

ತಾಲೂಕಿನ ಹೊಂಗನೂರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಅವರಣದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದ ಹೊಂಗನೂರು ಬಹಳ ದೊಡ್ಡ ಗ್ರಾಮದ ಜೊತೆಗೆ ಪರಿಶಿಷ್ಟಜಾತಿ, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ಜನಾಂಗದವರೇ ಹೆಚ್ಚು ವಾಸಿಸುತ್ತಿರುವ ಪ್ರದೇಶವಾಗಿದೆ. ಗ್ರಾಮದಲ್ಲಿ ಎಸ್‍ಎಸ್‍ಎಲ್‍ಸಿ ವರೆಗೆ ಮಾತ್ರ ವ್ಯಾಸಂಗ ಮಾಡಲು ಅವಕಾಶ ಇದೆ ಪಿಯುಸಿ ಹಾಗೂ ಪದವಿ ಎಂದರು.
ಪಡೆದುಕೊಳ್ಳಲು ಈಭಾಗದ ಮಕ್ಕಳು ಯಳಂದೂರು ಹಾಗೂ ಚಾ.ನಗರಕ್ಕೆ ಬರಬೇಕಾಗಿದೆ. ಹೀಗಾಗಿ ಇಲ್ಲಿಯೇ ಪದವಿ ಪೂರ್ವ ಶಿಕ್ಷಣ ದೊರೆತರೆ ಬಹಳಷ್ಟು ಹೆಣ್ನು ಮಕ್ಕಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಈಗ ಸರ್ಕಾರ ಹೊಸದಾಗಿ ಯಾವುದೇ ಪದವಿ ಪೂರ್ವ ಕಾಲೇಜುಗಳಿಗೆ ಮಂಜೂರಾತಿ ನೀಡಿಲ್ಲ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಅವಕಾಶ ನೀಡಿದರೆ, ಪ್ರಥಮ ಆದ್ಯತೆ ಹೊಂಗನೂರೇ ಆಗಿದೆ ಎಂದು ತಿಳಿಸಿದರು.
ಇನ್ನು ಬಳಷ್ಟು ಮಹಿಳೆಯರು ಗೃಹ ಲಕ್ಷ್ಮಿ ಯೋಜನೆಯಲ್ಲಿ 2 ಸಾವಿರ ಬರುತ್ತಿಲ್ಲ ಎಂದು ದೂರಿದ್ದೀರಿ. ಈಗಾಗಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಹಾಗೂ ಆಹಾರ ಮತ್ತು ನಾಗರೀಕ ಪೊರೈಕೆ ಇಲಾಖೆಯ ಸಹಯೋಗದಲ್ಲಿ ಪಡಿತರ ಚೀಟಿಗಳ ತಿದ್ದುಪಡಿ ಹಾಗು ಮನೆಯ ಯಜಮಾನಿ ಮಹಿಳೆಯೇ ಆಗಿರಬೇಕು ಎಂಬ ನಿಯಮದಡಿಯಲ್ಲಿ ಕಾರ್ಡುಗಳ ತಿದ್ದುಪಡಿಯಾಗುತ್ತಿದೆ. ಆಧಾರ್ ಕಾರ್ಡು, ಬ್ಯಾಂಕ್ ಖಾತೆ ಮತ್ತು ಪಡಿತರ ಚೀಟಿಗಳಲ್ಲಿ ಹೊಂದಾಣಿಕೆಯ ಸಮಸ್ಯೆಯಿಂದ ಹಲವರಿಗೆ ಹಣ ಬಂದಿಲ್ಲ. ಇದನ್ನು ಸರಿಪಡಿಸಲು ಎರಡು ಇಲಾಖೆಯ ಜೊತೆಗೆ ಕಂದಾಯ ಇಲಾಖೆಯವರನ್ನು ಸಹ ತೊಡಗಿಸಿಕೊಂಡು ಕೆಲಸ ಮಾಡಲಾಗುತ್ತಿದೆ. ಪ್ರತಿ ಮಾಹೆ 2 ಸಾವಿರ ರೂ. ಒಬ್ಬರಿಗೂ ಮಿಸ್ ಆಗದೆ ಅವರ ಖಾತೆಗೆ ಜಮಾ ಮಾಡಬೇಕೆಂದು ಚಾ.ನಗರಕ್ಕೆ ಆಗಮಿಸಿದ್ದ ನಮ್ಮ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರೇ ಖಡಕ್ ಆಗಿ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ. ನ. 20 ರಂದು ಎರಡನೇ ಹಂತದ ಹಣವನ್ನು ಖಾತೆಗೆ ಹಾಕಲಾಗುತ್ತಿದೆ. ಈ ಸಂದರ್ಭದಲ್ಲಿ ಎಲ್ಲರಿಗೂ ಬರುವ ನಿರೀಕ್ಷೆ ಇದೆ ಎಂದು ಕೃಷ್ಣಮೂರ್ತಿ ತಿಳಿಸಿದರು.
ಗ್ರಾಮದ ಪ್ರಾಥಮಿಕ ಆರೋಗ್ಯದಲ್ಲಿ ವೈದ್ಯರು ಸರಿಯಾಗಿ ರೋಗಿಗಳನ್ನು ನೋಡುತ್ತಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ವೈದ್ಯಾಧಿಕಾರಿ ಮಮತಾ ಕುಮಾರಿ ಅವರನ್ನು ಕರೆಸಿದ ಶಾಸಕರು, ಸೂಕ್ತ ಚಿಕಿತ್ಸೆಯನ್ನು ಎಲ್ಲರಿಗೂ ನೀಡಬೇಕು ಎಂದು ತಾಕೀತು ಮಾಡಿದರು. ಅಲ್ಲದೇ ವೃದ್ಯಾಪ್ಯ ಇತರೇ ಯೋಜನೆಗಳಿಗೆ ವೈದ್ಯಾಕೀಯ ದಾಖಲಾತಿ ನೀಡುವಾಗ ಲಂಚದ ಆರೋಪ ಕೇಳಿಬರುತ್ತಿದೆ. ಎಚ್ಚರಿಕೆಯಿಂದ ಕೆಲಸ ಮಾಡಿ, ಜನ ಸಾಮಾನ್ಯರು ಮೆಚ್ಚುವಂತೆ ಕರ್ತವ್ಯ ನಿರ್ವಹಿಸಬೇಕು. ಮುಂದೆ ಇಂಥ ದೂರುಗಳು ಬರದಂತೆ ನೋಡಿಕೊಂಡರೆ ಒಳ್ಳೆಯದು ಎಂದರು. ರಾತ್ರಿ ಪಾಳೆಯಲ್ಲಿ ವೈದ್ಯರನ್ನು ನೇಮಕ ಮಾಡುವುದು ಹಾಗು ಅಂಬುಲೈನ್ಸ್ ಅನ್ನು ಹೊಂಗನೂರು ಕೇಂದ್ರಕ್ಕೆ ಪ್ರತ್ಯೇಕವಾಗಿ ನೀಡುವ ಕುರಿತು ಮುಂದಿನ ದಿನಗಳಲ್ಲಿ ಪರಿಶೀಲನೆ ಮಾಡುವುದಾಗಿ ತಿಳಿಸಿದರು.
ಗ್ರಾಮದ ಹೊಸ ಬಡಾವಣೆಗಳಿಗೆ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ರಸ್ತೆ, ಚರಂಡಿ ಹಾಗೂ ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು. ಹೊಂಗನೂರು ಪಂಚಾಯಿತಿಯಲ್ಲಿ ಒಬ್ಬರು ಪೌರ ಕಾರ್ಮಿಕರು ಇಲ್ಲ. ಇನ್ನು ಗ್ರಾಮ ಸ್ವಚ್ಚವಾಗುವುದು ಹೇಗೆ ಎಂದು ಮುಖಂಡರು ಪ್ರಶ್ನೆ ಮಾಡಿದರು. ಜಲ ಜೀವನ ಮಿಷನ್ ನಲ್ಲಿ ಮನೆಗಳಿಗೆ ನೀರು ಬರುತ್ತಿಲ್ಲ. ಎಸ್‍ಇಪಿ, ಟಿಎಸ್‍ಪಿ ಅನುದಾನದಲ್ಲಿ ಕೆಲಸ ಮಾಡಿದ್ದರು. ಆ ವರ್ಗದವರ ಮನೆಗಳಿಗೆ ನೀರು ಬರುತ್ತಿಲ್ಲ. ಇತರೇ ವರ್ಗಗಳಿಗೆ ನೀಡಲಾಗಿದೆ. ಇದರೊಟ್ಟಿಗೆ ಗ್ರಾಮದ ಸರ್ವಾಂಗೀಣ ಅಭಿವೃದ್ದಿಗೆ ತಾವು ಕಂಕಣ ಬದ್ದರಾಗಬೇಕು. ಎಂದು ಗ್ರಾಮಸ್ಥರು ಮನವಿ ಮಾಡಿಕೊಳ್ಲುವ ಜೊತೆಗೆ ಎ.ಆರ್.ಕೃಷ್ಣಮುರ್ತಿ ಅವರಿಗೆ ಶಾಲು ಹೊದಿಸಿ, ಹಾರ ಹಾಕಿ, ಅಂಬೇಡ್ಕರ್ ಅವರ ಪುತ್ಥಳಿಯನ್ನು ನೆನಪಿನ ಕಾಣಿಕೆಯಾಗಿ ಹೊಂಗನೂರು ಗ್ರಾಮದ ಮುಖಂಡರು ನೀಡಿದರು.
ಸಭೆಯಲ್ಲಿ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ 100ಕ್ಕು ಹೆಚ್ಚು ಅರ್ಜಿಗಳು ಬಂದವು. ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ, ತಮ್ಮ ಇಲಾಖೆಯ ಸಮಸ್ಯೆಗಳನ್ನು ಅಲ್ಲಿಯೇ ಬಗೆಹಿಸುವ ಪ್ರಯತ್ನ ಮಾಡಿದರು. ಕೆಲವು ವಿಚಾರಗಳಿಗೆ ಕಾಲವಕಾಶ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ತಾ.ಪಂ. ಇಓ ಪೂರ್ಣಿಮಾ, ತಹಶೀಲ್ದಾರ್ ಬಸವರಾಜು, ಹೊಂಗನೂರು ಗ್ರಾ.ಪಂ. ಅಧ್ಯಕ್ಷೆ ವಿಶಾಲಾಕ್ಷಿ, ಉಪಾಧ್ಯಕ್ಷ ನವೀನ್‍ಕುಮಾರ್, ಸದಸ್ಯರಾದ ಮಣಿಕಂಠ, ಶಂಕರ್, ಶಿವನೇಗೌಡರು, ಮಹದೇವಶೆಟ್ಟಿ, ರೂಪ, ಪೂವಮ್ಮ, ಎಸ್‍ಡಿಎಂಸಿ ಅಧ್ಯಕ್ಷ ಹೊಂಗನೂರು ಜಯರಾಜ್, ಯಳಂದೂರು ಬ್ಲಾಕ್ ಅಧ್ಯಕ್ಷ ಹೊಂಗನೂರು ಚಂದ್ರು, ಜಿ.ಪಂ. ಮಾಜಿ ಸದಸ್ಯ ಯೋಗೇಶ್, ತಾ.ಪಂ. ಮಾಜಿ ಅಧ್ಯಕ್ಷ ಆರ್. ಮಹದೇವ್, ಮಾಜಿ ಸದಸ್ಯ ಸಿ. ಮಹದೇವ್, ಸರ್ಕಲ್ ಇನ್ಸ್‍ಪೆಕ್ಟರ್ ಶ್ರೀಕಾಂತ್, ಗ್ರಾ.ಪಂ. ಪಿಡಿಓ ಚಂದ್ರು, ಹೊಂಗನೂರು ಪುಟ್ಟಸ್ವಾಮಿ, ಕಂದಹಳ್ಳಿ ನಂಜುಂಡಸ್ವಾಮಿ ಹಾಗೂ ಹೊಂಗನೂರು ಗ್ರಾಮಸ್ಥರು ಇದ್ದರು.