ಇಂಟರ್ನೆಟ್ ಸುರಕ್ಷತೆ, ಬಳಕೆ ಕುರಿತು ಜಾಗೃತಿ ಅಗತ್ಯ : ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ

ಚಾಮರಾಜನಗರ: ಪ್ರಸ್ತುತ ದಿನಗಳಲ್ಲಿ ಇಂಟರ್ನೆಟ್ ಸುರಕ್ಷತೆ, ಬಳಕೆ, ಇದರಿಂದಾಗುವ ಅನುಕೂಲಗಳು, ಲೋಪ ದೋಷಗಳ ಬಗ್ಗೆ ಅಧಿಕಾರಿಗಳು ಸಿಬ್ಬಂದಿ ಹೆಚ್ಚು ತಿಳಿಯಬೇಕಾದ ಅಗತ್ಯವಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ಸಲಹೆ ಮಾಡಿದರು.

ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೇ ಕೆಡಿಪಿ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಮಹಿತಿ ಸೂಚನಾ ವಿಭಾಗದ (ಎನ್.ಐ.ಸಿ) ವತಿಯಿಂದ ಸುರಕ್ಷಿತ ಅಂತರ್ಜಾಲ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಜಾಗೃತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ತಂತ್ರಜ್ಞಾನದ ಅವಲಂಬನೆ ದಿನೇ ದಿನೇ ಹೆಚ್ಚಾಗುತ್ತಿದೆ. ಇಂಟರ್ನೆಟ್, ಆಧುನಿಕ ತಂತ್ರಜ್ಞಾನ, ಸಾಮಾಜಿಕ ಮಾಧ್ಯಮಗಳು, ಕೃತಕ ಬುದ್ದಿಮತ್ತೆ ಬಳಸುತ್ತಿರುವ ಇಂದಿನ ದಿನಗಳಲ್ಲಿ ಇದರಿಂದ ಆಗಬಹುದಾದ ಉಪಯೋಗಗಳ ಬಗ್ಗೆ ಅರಿಯಬೇಕಿದೆ. ಜೊತೆಗೆ ಸೈಬರ್ ಅಪರಾಧ, ಮೋಸಜಾಲದ ಬಗ್ಗೆಯೂ ಎಚ್ಚರಿಕೆ ವಹಿಸಬೇಕಿದೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸುರಕ್ಷಿತ ಅಂತರ್ಜಾಲ ದಿನ ಅಚರಣೆಯೊಂದಿಗೆ ಕಾರ್ಯಾಗಾರ ಏರ್ಪಾಡು ಮಾಡಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಅವರು ತಿಳಿಸಿದರು. 

ಸೈಬರ್ ಅಪರಾಧ ಪೊಲೀಸ್ ವಿಭಾಗದ ಡಿವೈಎಸ್‍ಪಿ ಎಂ.ಎಸ್. ಪವನ್ ಕುಮಾರ್ ಅವರು ಇಂಟರ್ನೆಟ್ ಪ್ರಯೋಜನ, ಅಪರಾಧಗಳು, ಸೈಬರ್ ಸುರಕ್ಷತೆ ಬಗ್ಗೆ ವಿವರಿಸಿ ಶಿಕ್ಷಣ, ಮಾಹಿತಿ, ಸಂಪರ್ಕ ಮತ್ತು ಸಂವಹನ, ಆನ್ ಲೈನ್ ಸೇವೆಗಳಿಗೆ ಇಂಟರ್ನೆಟ್ ನಿಂದ ಪ್ರಯೋಜನವಾಗುತ್ತಿದೆ. ಅಲ್ಲದೇ ಇಂಟರ್ನೆಟ್ ಅಪರಾಧಗಳ ಬಗ್ಗೆಯೂ ಎಚ್ಚರಿಕೆ ವಹಿಸಬೇಕಿದೆ. ಎಷ್ಟು ಸಾಧ್ಯವೋ ಅಷ್ಟು ಸುರಕ್ಷಿತ ವಿಧಾನಗಳನ್ನು ಅನುಸರಿಸಬೇಕು. ಯಾವುದೇ ಸುರಕ್ಷಿತವಲ್ಲದ ಆಪ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಾರದು ಎಂದರು. 

18 ವರ್ಷದ ಒಳಗಿನ ಮಕ್ಕಳಿಗೆ ಮೊಬೈಲ್ ನೀಡಬಾರದು. ಭವಿಷ್ಯದ ದೃಷ್ಟಿಯಿಂದ ಮಕ್ಕಳಿಗೆ ಮೊಬೈಲ್ ಗೀಳು ಅಂಟಿಕೊಳ್ಳದಂತೆ ಪೋಷಕರು ಎಚ್ಚರಿಕೆ ವಹಿಸಬೇಕು. ಇಲ್ಲವಾದಲ್ಲಿ ಹೆಚ್ಚು ತೊಂದರೆಗೆ ಒಳಗಾಗಬೇಕಾಗುತ್ತದೆ. ವಯಸ್ಕರು ಸಹ ಇಂಟರ್ನೆಟ್, ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ತುಂಬಾ ಜಾಗೃತರಾಗಬೇಕು. ವೈಯಕ್ತಿಕ ಮಾಹಿತಿ ಸುರಕ್ಷತೆಗೆ ಅಗತ್ಯವಾದ ಕ್ರಮಗಳನ್ನು ಪಾಲಿಸಬೇಕು. ಜವಾಬ್ದಾರಿಯುತವಾಗಿ ಪೋಸ್ಟ್ ಗಳನ್ನು ಮಾಡಬೇಕು ಎಂದು ಎಂ.ಎಸ್. ಪವನ್ ಕುಮಾರ್ ಅವರು ತಿಳಿಸಿದರು. 

ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಸಂದೀಪ್ ಅವರು ಮಾತನಾಡಿ ಕೃತಕ ಬುದ್ದಿಮತ್ತೆ ಹೆಚ್ಚು ಪರಿಣಾಮಕಾರಿಯಾಗಿರುವ ಇಂದಿನ ಯುಗದಲ್ಲಿ ಇದರ ಸಂಬಂಧಿತ ಅಪಾಯಗಳ ಅರಿವು ಸಹ ಇರಬೇಕಿದೆ. ಆರೋಗ್ಯ, ಶಿಕ್ಷಣ, ಕೃಷಿ, ಆಡಳಿತದಂತಹ ಪ್ರಮುಖ ಕ್ಷೇತ್ರಗಳಿಗೆ ಕೃತಕ ಬುದ್ದಿಮತ್ತೆಯ ಉಪಯೋಗ ಮಾಡಿಕೊಳ್ಳಬೇಕಿದೆ ಎಂದರು. 

ಎನ್.ಐ.ಸಿ ಯ ಹಿರಿಯ ತಾಂತ್ರಿಕ ನಿರ್ದೇಶಕರಾದ ಕುಮಾರ್, ಜಿಲ್ಲಾ ಮಾಹಿತಿ ಸೂಚನಾ ಅಧಿಕಾರಿ ಅರವಿಂದ ಚಂದ್ರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *