- ವಾಯುವಿನಿಂದ ನೀರು ಉತ್ಪಾದಿಸುವ ಘಟಕ ಪರಿಶೀಲನೆ
ಚಾಮರಾಜನಗರ: ನಗರ ಸಮೀಪದ ಸೋಮವಾರಪೇಟೆ ಸರ್ಕಾರಿ ಪ್ರಾಥಮಿಕ ಶಾಲೆಗೆ ಜಿಲ್ಲಾಧಿಕಾರಿ ಶ್ರೀರೂಪ ಅವರು ಸೋಮವಾರ (ಫೆ.9) ಭೇಟಿ ನೀಡಿ, ಏರೋ ವಾಟರ್ ಕಂಪನಿಯವರು ಶಾಲೆಯಲ್ಲಿ ಅಳವಡಿಸಿರುವ ದಿನಕ್ಕೆ 100 ಲೀಟರ್ (ಎಲ್.ಪಿ.ಡಿ) ಸಾಮಥ್ರ್ಯದ ವಾಯುವಿನಿಂದ ನೀರು ಉತ್ಪಾದಿಸುವ (ಏರ್-ಟು-ವಾಟರ್) ಘಟಕದ ಕಾರ್ಯವೈಖರಿ ಪರಿಶೀಲಿಸಿದರು.
ವಾತಾವರಣದ ಗಾಳಿಯಿಂದ ಶುದ್ಧ ಕುಡಿಯುವ ನೀರನ್ನು ಉತ್ಪಾದಿಸುವ ಈ ಘಟಕವು ಸ್ಥಳೀಯ ತೇವಾಂಶ ಮತ್ತು ತಾಪಮಾನ ಸೇರಿದಂತೆ ಪರಿಸರ ಪರಿಸ್ಥಿತಿಗಳಿಗೆ ಹೇಗೆ ಹೊಂದಿಕೊಳ್ಳುತ್ತದೆ ಎಂಬುದನ್ನು ಪರಿಶೀಲಿಸಿದರು. ಘಟಕದ ಕಾರ್ಯಾಚರಣೆ ವಿಧಾನಗಳು ಮತ್ತು ಉತ್ಪಾದಿತ ನೀರಿನ ಶುದ್ಧತೆಯನ್ನು ವೀಕ್ಷಿಸಿದರು.
ಅಂತರ್ಜಲ ಕುಸಿತವಾಗುತ್ತಿರುವುದು ಹಾಗೂ ಮುಂದಿನ ದಿನಗಳಲ್ಲಿ ತೀವ್ರ ಬೇಸಿಗೆ ಎದುರಾಗುವ ಹಿನ್ನೆಲೆಯಲ್ಲಿ ಶುದ್ಧ ಕುಡಿಯುವ ನೀರಿನ ಅವಶ್ಯಕತೆ ಹೆಚ್ಚಿರುವ ಆದಿವಾಸಿ ವಸತಿಗಳು ಹಾಗೂ ಶಾಲೆಗಳಲ್ಲಿ ಇಂತಹ ವಾಯುವಿನಿಂದ ನೀರು ಉತ್ಪಾದಿಸುವ ಘಟಕಗಳನ್ನು ಸ್ಥಾಪಿಸುವ ಸಾಧ್ಯತೆ ಕುರಿತು ಚರ್ಚೆಗಳು ನಡೆಯುತ್ತಿವೆ.
ನೀರಿನ ಕೊರತೆ ಮತ್ತು ಅಂತರ್ಜಲ ಕುಸಿತದಂತಹ ದೀರ್ಘಕಾಲಿಕ ಸಮಸ್ಯೆಗಳಿಗೆ ವಾಯುವಿನಿಂದ ನೀರು ಉತ್ಪಾದಿಸುವ ತಂತ್ರಜ್ಞಾನಗಳು ಪರಿಣಾಮಕಾರಿ ಪರಿಹಾರವಾಗಿವೆ. ಜಿಲ್ಲೆಯಲ್ಲಿ ದೂರದ ಹಾಗೂ ಆದಿವಾಸಿ ಪ್ರದೇಶಗಳಲ್ಲಿ ಇಂತಹ ನವೀನ ತಂತ್ರಜ್ಞಾನಗಳನ್ನು ಅಳವಡಿಸುವುದು ಸುಸ್ಥಿರ ಮತ್ತು ಭವಿಷ್ಯ ನಿರ್ದೇಶಿತ ಅಭಿವೃದ್ಧಿಯತ್ತ ಜಿಲ್ಲಾಡಳಿತದ ಬದ್ಧತೆಯನ್ನು ತೋರಿಸುತ್ತದೆ.
ಶಾಲಾ ಭೇಟಿಯ ವೇಳೆ ಜಿಲ್ಲಾಧಿಕಾರಿಗಳು ಶಾಲೆಯ ಎಲ್ಲಾ ತರಗತಿಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಅವರ ಕಲಿಕೆ ಕುರಿತು ಸಂವಾದ ನಡೆಸಿದರು. ಶಾಲೆಯ ಶೈಕ್ಷಣಿಕ ವಾತಾವರಣವನ್ನು ಪರಿಶೀಲಿಸಿದರು. ಶಾಲೆಯ ಅಗತ್ಯಗಳು ಮತ್ತು ಮೂಲಭೂತ ಸೌಲಭ್ಯಗಳ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದರು.
Related