- ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ವಿ. ರಶ್ಮಿ ಮಹೇಶ್ ಸೂಚನೆ
ಚಾಮರಾಜನಗರ: ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ವ್ಯಾಪಕವಾಗಿ ಭೇಟಿ ನೀಡಿ ವಿದ್ಯಾರ್ಥಿಗಳ ಕಲಿಕಾ ಪ್ರಗತಿ, ಹಾಜರಾತಿ, ಸರ್ಕಾರ ನೀಡುತ್ತಿರುವ ಸೌಲಭ್ಯಗಳನ್ನು ಪರಿಶೀಲಿಸಬೇಕೆಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ವಿ. ರಶ್ಮಿ ಮಹೇಶ್ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ ಜಿಲ್ಲೆಯ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿಕ್ಷಣ ಇಲಾಖೆಯ ಅಧಿಕಾರಿಗಳು ನಿರಂತರವಾಗಿ ಶಾಲಾ ಕಾಲೇಜುಗಳಿಗೆ ಭೇಟಿ ನೀಡಬೇಕು. ಶಿಕ್ಷಕರು ಸರಿಯಾದ ಸಮಯಕ್ಕೆ ಶಾಲೆಗೆ ಹಾಜರಾಗುತ್ತ್ದಿದ್ದಾರೆಯೇ ?, ವಿದ್ಯಾರ್ಥಿಗಳ ಕಲಿಕೆ ಪ್ರಗತಿ, ಬೋಧನೆ ಹೇಗೆ ನಡೆಯುತ್ತಿದೆ ಎಂಬ ಬಗ್ಗೆ ವೀಕ್ಷಿಸಬೇಕು. ನಿರಂತರ ಆಪ್ ಮೂಲಕ ನೊಂದಣಿಯಾಗಿರುವ ಹಾಗೂ ಪ್ರತಿದಿನ ಬೆಳಿಗ್ಗೆ ಹಾಗೂ ಮಧ್ಯಾಹ್ನ ಹಾಜರಾತಿ ದಾಖಲಾಗಿದೆಯೇ ಎಂದು ಪರಿಶೀಲಿಸುವಂತೆ ತಿಳಿಸಿದರು.
2025-26ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ 1ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳನ್ನು ಎಸ್.ಎ.ಟಿ.ಎಸ್ ತಂತ್ರಾಂಶದಲ್ಲಿ ನಿಖರವಾಗಿ ಅಪ್‍ಡೇಟ್ ಮಾಡಬೇಕು. ಈ ಮೂಲಕ ವಿದ್ಯಾರ್ಥಿಗಳ ವಿವರವನ್ನು ನಿರ್ದಿಷ್ಟಪಡಿಸಿಕೊಂಡು ಇದಕ್ಕನುಗುಣವಾಗಿ ಪ್ರೋತ್ಸಾಹದಾಯಕ ಯೋಜನೆಗಳನ್ನು ಅನುಷ್ಟಾನಗೊಳಿಸಬೇಕು ಎಂದರು.
ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ ಯೋಜನೆಯನ್ನು ಈಗಾಗಲೇ ಇಲಾಖೆ ನೀಡಿರುವ ಎಸ್.ಒ.ಪಿ ಅನುಸಾರ ಜಾರಿ ಮಾಡಬೇಕು. ತಾಜಾ ತರಕಾರಿ, ಗುಣಮಟ್ಟದ ಆಹಾರಧಾನ್ಯಗಳಿಂದ ಬಿಸಿಯೂಟ ತಯಾರಿಸಬೇಕು. ಶಾಲೆಗಳಲ್ಲಿ ಪೌಷ್ಠಿಕಾಂಶ ಗಿಡಗಳನ್ನೊಳಗೊಂಡ ತೋಟ ಅಭಿವೃದ್ಧಿಪಡಿಸಬೇಕು. ಪಠ್ಯಪುಸ್ತಕ, ಸಮವಸ್ತ್ರ ಎಲ್ಲಿಯೂ ಕೊರತೆಯಾಗಬಾರದು. ಕೆಲವೆಡೆ ಹೆಚ್ಚುವರಿಯಾಗಿ ಉಳಿದುಕೊಂಡಿದ್ದರೆ ಅಗತ್ಯವಿರುವ ಪಕ್ಕದ ಶಾಲೆಗಳ ವಿದ್ಯಾರ್ಥಿಗಳಿಗೆ ವಿತರಣೆ ಮಾಡಿ ಎಂದು ಸೂಚಿಸಿದರು.
ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಫಲಿತಾಂಶ ಶೇ. 100ರಷ್ಟು ಬರಲು ಈಗಿನಿಂದಲೇ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿ ಇಲಾಖೆ ನೀಡಲಿರುವ ಮಾದರಿ ಪ್ರಶ್ನೆಪತ್ರಿಕೆಗಳಿಗೆ ಉತ್ತರಿಸಲು ಅಣಿಗೊಳಿಸಬೇಕು. ಮಕ್ಕಳಿಗೆ ಮನದಟ್ಟಾಗುವಂತೆ ಕಲಿಕಾ ಕ್ರಮಗಳನ್ನು ಅನುಷ್ಟಾನ ಮಾಡಿ, ಪರೀಕ್ಷೆಗೆ ನೊಂದಾಯಿಸುವವರ ಹಾಗೂ ಬರೆಯುವವರ ಸಂಖ್ಯೆಯಲ್ಲಿ ಯಾವುದೇ ವ್ಯತ್ಯಾಸಗಳಾಗದಂತೆ ನೋಡಿಕೊಳ್ಳಿ ಎಂದು ತಿಳಿಸಿದರು.
ಜಿಲ್ಲೆಯಲ್ಲಿರುವ ಪಿ.ಎಂ.ಶ್ರೀ ಶಾಲೆ, ಕರ್ನಾಟಕ ಪಬ್ಲಿಕ್ ಶಾಲೆ, ದ್ವಿಭಾಷಾ ಮಾಧ್ಯಮ ಶಾಲೆಗಳು ಹಾಗೂ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ದಾಖಲಾತಿ ಉತ್ತಮಪಡಿಸಿ. ಆದರ್ಶ ಕಾಲೇಜುಗಳಿಗೆ ಭೇಟಿಕೊಟ್ಟು ಅಲ್ಲಿ ಒದಗಿಸಬೇಕಿರುವ ಸೌಲಭ್ಯಗಳಿಗೆ ಹೆಚ್ಚು ಗಮನಹರಿಸಿ. ಪಿ.ಯು ಕಾಲೇಜುಗಳ ದಾಖಲಾತಿಯನ್ನು ಹೆಚ್ಚುಗೊಳಿಸಿ. ಶೈಕ್ಷಣಿಕ ಅಗತ್ಯಗಳಿಗೆ ಯಾವುದೇ ಕೊರತೆಯಾಗದಂತೆ ಅಧಿಕಾರಿಗಳು ನಿಗಾ ವಹಿಸುವಂತೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ವಿ. ರಶ್ಮಿ ಮಹೇಶ್ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಶ್ರೀರೂಪ ಅವರು ಮಾತನಾಡಿ ಸಿ.ಎಸ್.ಆರ್ ನೆರವಿನಡಿ ಜಿಲ್ಲೆಯಲ್ಲಿ ಮುಖ್ಯ ಮೂಲಸೌಕರ್ಯಗಳು ಅಗತ್ಯವಿರುವ 10 ಸರ್ಕಾರಿ ಶಾಲೆಗಳು ಆಯ್ಕೆಯಾಗಿವೆ. ಈಗಾಗಲೇ ಆಟೋಮೋಟಿವ್ ಆಕ್ಸ್ಸಲ್ಸ್ ಲಿ. ಕಂಪನಿಯಿಂದ 86 ಡಿಜಿಟಲ್ ಬೋರ್ಡ್‍ಗಳನ್ನು 1.06 ಕೋಟಿ ರೂ. ವೆಚ್ಚದಲ್ಲಿ ಶಾಲೆಗಳಿಗೆ ಅಳವಡಿಸಲಾಗಿದೆ. 2 ಶಾಲೆಗಳಿಗೆ 20 ಲಕ್ಷ ರೂ. ವೆಚ್ಚದಲ್ಲಿ ಪಿಂಕ್ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಓವಾರಿ ಪ್ರಿಸಿಸನ್ ಪ್ರಾಡಕ್ಟ್ ಕಂಪನಿ ವತಿಯಿಂದ 8 ಲಕ್ಷ ರೂ. ವೆಚ್ಚದಲ್ಲಿ ತಾಲೂಕಿನ ಮಲೆಯೂರು ಶಾಲಾ ನವೀಕರಣ ಕೈಗೊಳ್ಳಲಾಗಿದೆ. ಎಂ.ಎಸ್.ಐ.ಎಲ್ ವತಿಯಿಂದ ಹರದನಹಳ್ಳಿಯಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಸರ್ಕಾರಿ ಶಾಲೆ ನವೀಕರಣವಾಗಿದೆ. ಕೆನರಾ ರೋಬ್ಯಾಕೋ ಮ್ಯೂಚುವೆಲ್ ಫಂಡ್ ವತಿಯಿಂದ 100 ಸೈಕಲ್ ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತಿದೆ ಎಂದು ಪವರ್ ಪಾಯಿಂಟ್ ಪ್ರದರ್ಶನದ ಮೂಲಕ ವಿವರಿಸಿದರು.
ಪೋಷಣ್ ವನ ಕಾರ್ಯಕ್ರಮದಡಿ 8 ಶಾಲೆಗಳಲ್ಲಿ ನ್ಯೂಟ್ರಿಷಿಯನ್ ಗಾರ್ಡ್‍ನ್ ಅಭಿವೃದ್ಧಿ ಮಾಡಲಾಗುತ್ತಿದೆ. 200 ಶಾಲೆಗಳಲ್ಲಿ ಸ್ಥಳೀಯ ಜಾತೀಯ ಗಿಡಗಳನ್ನು ನೆಡುವ ಉದ್ದೇಶ ಹೊಂದಲಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಪೂರಕವಾಗಿರುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಮಾತನಾಡಿ ಕೆಲವು ಭಾಗಗಳಲ್ಲಿ ಇಂಟರ್‍ನೆಟ್ ಸಮಸ್ಯೆ ಸುಧಾರಣೆಯಾಗಬೇಕಿದೆ. ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಫಲಿತಾಂಶ ಸುಧಾರಣೆಗೆ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸಿ ಮಾರ್ಗದರ್ಶನ ಮಾಡಲಾಗುತ್ತಿದೆ ಎಂದರು.
ಶಾಲಾ ಶಿಕ್ಷಣ ಇಲಾಖೆಯ ಮೈಸೂರು ವಿಭಾಗೀಯ ಜಂಟಿ ನಿರ್ದೇಶಕರಾದ ಪ್ರಕಾಶ್, ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕರಾದ ಚಂದ್ರಪಾಟೀಲ್, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಪುಟ್ಟಗೌರಮ್ಮ, ಡಯಟ್ ಪ್ರಾಂಶುಪಾಲರಾದ ನಿಂಗರಾಜು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿಗಳು, ಶಿಕ್ಷಣ ಇಲಾಖೆಯ ಇತರೆ ಉಸ್ತುವಾರಿ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಸಭೆ ಆರಂಭಕ್ಕೂ ಮೊದಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ವಿ. ರಶ್ಮಿ ಮಹೇಶ್ ಅವರು ಚಾಮರಾಜನಗರ ತಾಲೂಕಿನ ಕುದೇರು ಸರ್ಕಾರಿ ಶಾಲೆಗೆ ಭೇಟಿ ನೀಡಿದರು. ಬಿಸಿಯೂಟ ತಯಾರಿಗಾಗಿ ಮಾಡಲಾಗಿದ್ದ ಸಿದ್ದತೆ, ಮಕ್ಕಳ ಮತ್ತು ಶಿಕ್ಷಕರ ಹಾಜರಾತಿಯನ್ನು ಪರಿಶೀಲಿಸಿದರು.
ಸಭೆಯ ಬಳಿಕ ಅಪರ ಮುಖ್ಯ ಕಾರ್ಯದರ್ಶಿಗಳು ಚಾಮರಾಜನಗರ ತಾಲೂಕಿನ ಮಂಗಲ ಸರ್ಕಾರಿ ಪೌಢಶಾಲೆಗೆ ಭೇಟಿ ನೀಡಿ ಮಧ್ಯಾಹ್ನದ ಬಿಸಿಯೂಟವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಸೇವಿಸಿದರು. ವಿದ್ಯಾರ್ಥಿಗಳು, ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಿ ಮಾರ್ಗದರ್ಶನ ಮಾಡಿದರು.
ಬಳಿಕ ಹನೂರಿನ ಮಂಗಲ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ಪೌಷ್ಠಿಕ ವನ ವೀಕ್ಷಣೆ ಮಾಡಿದರು. ನಂತರ ಸರ್ಕಾರಿ ಜಿ.ವಿ. ಗೌಡ ಪದವಿಪೂರ್ವ ಕಾಲೇಜಿಗೆ ಭೇಟಿಕೊಟ್ಟು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಮುಂದಿನ ಶೈಕ್ಷಣಿಕ ಅವಕಾಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅಪರ ಮುಖ್ಯ ಕಾರ್ಯದರ್ಶಿಗಳಾದ ವಿ. ರಶ್ಮಿ ಮಹೇಶ್ ಅವರು ತಿಳಿಸಿಕೊಟ್ಟರು.
Like this:
Like Loading...
Related