ಚಾಮರಾಜನಗರ: ಅರಣ್ಯ ಇಲಾಖೆಯ ಚಾಮರಾಜನಗರ ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ವತಿಯಿಂದ ರಾಷ್ಟ್ರೀಯ ಅರಣ್ಯ ಹುತಾತ್ಮರ ಸ್ಮರಣ ದಿನವನ್ನು ನಗರದಲ್ಲಿಂದು ಅರ್ಥಪೂರ್ಣವಾಗಿ ಆಚರಿಸಲಾಯಿತು.

ನಗರದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಅರಣ್ಯ ಹುತಾತ್ಮರ ಸ್ಮಾರಕ ಸ್ಥಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಕರ್ಷಕ ಪಥಸಂಚಲನ, ಗಣ್ಯರಿಂದ ಸ್ಮಾರಕಕ್ಕೆ ಪುಷ್ಪನಮನ, ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಕೆ, ಮೌನಾಚರಣೆ, ಪೊಲೀಸ್ ಬ್ಯಾಂಡ್‍ನಿಂದ ಶತ ಶತಮಾನಗಳ ಚಿರನೂತನ ಗೀತೆ ‘ಅಬಾಯ್ಡ್ ವಿತ್ ಮಿ’ ನುಡಿಸುವ ಮೂಲಕ ಹುತಾತ್ಮರಿಗೆ ಗೌರವ ಸಲ್ಲಿಸಲಾಯಿತು.
ಜಿಲ್ಲಾ ಪ್ರಧಾನ ಸೆಷೆನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಜಿ. ಪ್ರಭಾವತಿ ಅವರು ಅರಣ್ಯ ಸಂಪತ್ತು ಹಾಗೂ ವನ್ಯಜೀವಿ ಸಂರಕ್ಷಣೆಯ ಕಾರ್ಯದಲ್ಲಿ ಕರ್ತವ್ಯದ ವೇಳೆಯಲ್ಲಿ ತ್ಯಾಗ, ಬಲಿದಾನಗೈದ ಅರಣ್ಯ ಇಲಾಖೆ ಅಧಿಕಾರಿ, ನೌಕರ ಹುತಾತ್ಮರ ಸ್ಮಾರಕಕ್ಕೆ ಪುಚ್ಪಗುಚ್ಛವಿರಿಸಿ ಗೌರವ ನಮನ ಸಲ್ಲಿಸಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾ ಪ್ರಧಾನ ಸೆಷೆನ್ಸ್ ನ್ಯಾಯಾಧೀಶರಾದ ಜಿ. ಪ್ರಭಾವತಿ ಅವರು ಬಹಳ ವರ್ಷಗಳ ಇತಿಹಾಸವಿರುವ ಅರಣ್ಯ ಹುತಾತ್ಮರ ಸ್ಮರಣಾ ದಿನದ ಮಹತ್ವವನ್ನು ಎಲ್ಲರು ಅರಿಯಬೇಕು. ಪ್ರತಿವರ್ಷ ಹುತಾತ್ಮರ ದಿನ ಆಚರಿಸಿ ಮುಂದಿನ ಪೀಳಿಗೆಗೆ ಸ್ಪೂರ್ತಿ ತುಂಬಬೇಕಾಗಿದೆ. ನೈಸರ್ಗಿಕ ಅರಣ್ಯ ಸಂಪತ್ತು ಹಾಗೂ ವನ್ಯಜೀವಿ ಸಂರಕ್ಷಣೆಯಲ್ಲಿ ತಮ್ಮ ಜೀವದ ಹಂಗುತೊರೆದು ಕರ್ತವ್ಯ ನಿರ್ವಹಿಸುವ ಅರಣ್ಯ ಅಧಿಕಾರಿ, ಸಿಬ್ಬಂದಿಯ ಪರಿಶ್ರಮ, ತ್ಯಾಗ ಅನನ್ಯವಾಗಿದೆ. ಅವರ ನಿಸ್ವಾರ್ಥ ಸೇವೆ, ತ್ಯಾಗ, ಬಲಿದಾನವನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಅರಣ್ಯ ಸಂರಕ್ಷಣೆಯಂತಹ ಅಪಾಯಕಾರಿ ಪರಿಸ್ಥಿತಿಯಲ್ಲಿ ಕಠಿಣ ಪರಿಶ್ರಮ ವಹಿಸಿ ಕಾಡುಗಳ್ಳರು, ಅಕ್ರಮ ಬೇಟೆಗಾರರಿಂದ ಪ್ರಕೃತಿ ಸಂಪತ್ತನ್ನು ಉಳಿಸುವ ಪರಿಸರ ಪ್ರೇಮಿಗಳ ಸೇವೆ ಸ್ಮರಣೀಯವಾಗಿದೆ. ಅರಣ್ಯ ರಕ್ಷಣೆಯಲ್ಲಿ ಹುತಾತ್ಮರ ಬದ್ಧತೆಯನ್ನು ಸಮಾಜ ಸದಾ ಸ್ಮರಿಸುವುದರ ಜೊತೆಗೆ ಸಾರ್ವಜನಿಕರಿಗೆ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸಬೇಕಿದೆ. ಕಾಡುಗಳ್ಳರ ವಿರುದ್ಧದ ಕಾರ್ಯಾಚರಣೆಯಲ್ಲಿ ಪ್ರಾಣತ್ಯಾಗ ಮಾಡಿದ ಅರಣ್ಯಾಧಿಕಾರಿ ಪಿ. ಶ್ರೀನಿವಾಸ್ ಅವರ ಸೇವೆಯನ್ನು ಸ್ಮರಿಸಬೇಕು. ಸೋಲಿಗ, ಜೇನುಕುರುಬ ಸೇರಿದಂತೆ ಸ್ಥಳೀಯ ಸಮುದಾಯಗಳು ಅರಣ್ಯ ಇಲಾಖೆಯೊಂದಿಗೆ ಕಾಡಿನ ಸಂರಕ್ಷಣೆಗೆ ನೀಡುತ್ತಿರುವ ಸಹಕಾರ ಶ್ಲಾಘನೀಯವಾಗಿದೆ. ಅರಣ್ಯ ಸಂರಕ್ಷಣೆಗೂ ಕಾನೂನುಗಳಿವೆ. ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮವನ್ನು ಸರ್ಕಾರ ಕೈಗೊಳ್ಳುತ್ತಿದೆ ಎಂದರು.
ದೇಶದಲ್ಲಿ ಅನೇಕ ಅಭಯಾರಣ್ಯಗಳಿವೆ. ಅದರಲ್ಲೂ ವಿಶ್ವಪ್ರಸಿದ್ಧವಾಗಿರುವ ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನವು ಹುಲಿ, ಚಿರತೆ, ಆನೆ, ಜಿಂಕೆ, ನವಿಲುಗಳಂತಹ ಜೀವವೈವಿಧ್ಯ ಹೊಂದಿದೆ. ದೇಶದಲ್ಲಿಯೇ ಅತಿಹೆಚ್ಚು ಹುಲಿಗಳನ್ನು ಹೊಂದಿರುವ ಏಕೈಕ ಅಭಯಾರಣ್ಯವಾಗಿದೆ. ಹಲವು ವನ್ಯಜೀವಿಗಳಿಗೆ ಆಶ್ರಯತಾಣವಾಗಿರುವ ಬಂಡೀಪುರದದಲ್ಲಿ ವಿವಿಧ ಬಗೆಯ ಅಪರೂಪದ ಗಿಡಮೂಲಿಕೆಗಳ ಸಸ್ಯಪ್ರಬೇಧಗಳಿವೆ. ಶ್ರೀಗಂಧ, ತೇಗ, ಬೀಟೆ, ಹೊನ್ನೆ ಮರಗಳಿವೆ. ಶುದ್ಧ ಪರಿಸರದಿಂದ ಉತ್ತಮ ಆಮ್ಲಜನಕ ದೊರೆಯಲಿದೆ. ಅರಣ್ಯ ರಕ್ಷಣೆಯಲ್ಲಿ ಇಲಾಖೆಯೊಂದಿಗೆ ಸ್ಥಳೀಯ ಗಿರಿಜನ ಸಮುದಾಯಗಳ ಪಾತ್ರ ಮಹತ್ವದ್ದಾಗಿದೆ ಎಂದು ಜಿಲ್ಲಾ ನ್ಯಾಯಾಧೀಶರಾದ ಪ್ರಭಾವತಿ ಅವರು ತಿಳಿಸಿದರು.
ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಸ್. ಶ್ರೀಪತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಅರಣ್ಯಾಧಿಕಾರಿ ದಿವಂಗತ ಪಿ. ಶ್ರೀನಿವಾಸ್ ಅವರು ವೀರಪ್ಪನ್‍ನಿಂದ ಹತರಾದ ನವೆಂಬರ್ 10ರ ದಿನವನ್ನು ಕರ್ನಾಟಕ ಅರಣ್ಯ ಇಲಾಖೆ ಹುತಾತ್ಮರ ದಿನವಾಗಿ ಆಚರಿಸುತ್ತಿತ್ತು. 1730ರಲ್ಲಿ ರಾಜಸ್ಥಾನದ ಜೋಧ್‍ಪುರ ಮಹಾರಾಜ ಅಭಯ್‍ಸಿಂಗ್‍ನ ಸೈನಿಕರು ಕೇಜರ್ಲಿ ಪ್ರಾಂತ್ಯದಲ್ಲಿ ಅರಮನೆಗೆ ಅಗತ್ಯವಿದ್ದ ಮರಗಳನ್ನು ಕಡಿಯಲು ವಿರೋಧಿಸಿದ ಅಮೃತಾದೇವಿ ಬಿμÉ್ಣೂೀಯ್ ಸೇರಿದಂತೆ 360ಕ್ಕೂ ಹೆಚ್ಚು ಬಿμÉ್ಣೂೀಯ್ ಸಮುದಾಯದವರು ಮರಗಳನ್ನು ಅಪ್ಪಿಕೊಂಡು ಪ್ರಾಣತ್ಯಾಗ ಮಾಡಿದ್ದರು. ಅವರ ಪರಿಸರ ಪ್ರೇಮ, ತ್ಯಾಗದ ಸ್ಮರಣಾರ್ಥ ಭಾರತ ಸರ್ಕಾರದ ಅರಣ್ಯ ಮತ್ತು ಪರಿಸರ ಇಲಾಖೆಯ ನಿರ್ದೇಶನದ ಮೇರೆಗೆ ಪ್ರತಿವರ್ಷ ಸೆಪ್ಟೆಂಬರ್ 11 ಅನ್ನು ರಾಷ್ಟ್ರೀಯ ಹುತಾತ್ಮರ ದಿನವನ್ನಾಗಿ ಆಚರಿಸುತ್ತಿದೆ ಎಂದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಡಿ.ಸಿ. ಶೃತಿ, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ. ಸಭ್ಯಶ್ರೀ, ವನ್ಯಜೀವಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪವನ್‍ಕುಮಾರ್, ಯಳಂದೂರು ವನ್ಯಜೀವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ. ಮಹಾಲಕ್ಷ್ಮಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್, ಇತರೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.