ಎಸ್.ಐ.ಆರ್. : ಇದುವರೆಗೆ 6303 ಮಂದಿಗೆ ನೋಟಿಸ್ ಜಾರಿ-ಜಿಲ್ಲಾಧಿಕಾರಿ ಶ್ರೀರೂಪ

ಚಾಮರಾಜನಗರ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧ ಇದುವರೆಗೆ 7,480 ಮಂದಿಗೆ ನೋಟಿಸ್ ಸಿದ್ದಪಡಿಸಲಾಗಿದ್ದು, ಇವರಲ್ಲಿ 6,303 ಮತದಾರರಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ. ಈ ಪೈಕಿ 2,736 ಮತದಾರರ ವಿಚಾರಣೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು. 

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಪ್ರಕಟಿಸಿರುವ ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸ್ವೀಕೃತವಾಗಿರುವ ಹಕ್ಕು ಮತ್ತು ಆಕ್ಷೇಪಣೆಗಳ ಬಗ್ಗೆ ರಾಜಕೀಯ ಪಕ್ಷಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹನೂರು ವಿಧಾನಸಭಾ ಕ್ಷೇತ್ರದಲ್ಲಿ 679, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ 65, ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ 2503, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 3056 ಮತದಾರರು ಸೇರಿದಂತೆ 6303 ಮಂದಿಗೆ ನೋಟಿಸ್ ತಲುಪಿಸಲಾಗಿದೆ. ಈಗಾಗಲೇ 2736 ಮತದಾರರ ವಿಚಾರಣೆ ನಡೆಸಲಾಗಿದೆ. ಇನ್ನು 4744 ಮಂದಿಯ ವಿಚಾರಣೆ ಬಾಕಿ ಇದೆ ಎಂದು ಜಿಲ್ಲಾಧಿಕಾರಿಯವರು ಮಾಹಿತಿ ನೀಡಿದರು.

ಸೆಪ್ಟೆಂಬರ್ 1 ರಿಂದ 7ರವರೆಗೆ ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಒಟ್ಟು 1644 ಹಕ್ಕು ಆಕ್ಷೇಪಣೆಗಳು ಸಲ್ಲಿಕೆಯಾಗಿವೆ. ಮತದಾರರ ಪಟ್ಟಿಗೆ ಸೇರ್ಪಡೆಗಾಗಿ ನಮೂನೆ 6ರಲ್ಲಿ (ನಮೂನೆ-9) 608 ಅರ್ಜಿಗಳು, ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲು ಕೋರಿ ನಮೂನೆ 7ರಲ್ಲಿ (ನಮೂನೆ-10) 27 ಅರ್ಜಿಗಳು, ಎಪಿಕ್ ಕಾರ್ಡ್ ಬದಲಾವಣೆ, ತಿದ್ದುಪಡಿ, ಅಂಗವಿಕಲರ ಗುರುತಿಸುವಿಕೆಗಾಗಿ ನಮೂನೆ 8ರಲ್ಲಿ (ನಮೂನೆ-11) 895 ಅರ್ಜಿಗಳು, ಸ್ಥಳಾಂತರ, ವಿಧಾನಸಭಾ ಕ್ಷೇತ್ರದೊಳಗೆ ವಿಳಾಸ ಬದಲಾವಣೆಗಾಗಿ ನಮೂನೆ 8ರಲ್ಲಿ (ನಮೂನೆ-11ಎ) 98 ಅರ್ಜಿಗಳು, ಸ್ಥಳಾಂತರ ವಿಧಾನಸಭಾ ಕ್ಷೇತ್ರದ ಹೊರಗೆ ವಿಳಾಸ ಬದಲಾವಣೆಗಾಗಿ ನಮೂನೆ 8ರಲ್ಲಿ (ನಮೂನೆ-11ಬಿ) 16 ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಜಿಲ್ಲಾಧಿಕಾರಿಯವರು ವಿವರ ನೀಡಿದರು.

ನಮೂನೆ 6ರಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆಗಾಗಿ ಅರ್ಜಿ ಸಲ್ಲಿಸಬಹುದು. ಯುವ ಮತದಾರರ ಸೇರ್ಪಡೆಗಾಗಿ ಕಾಲೇಜು ಹಂತದಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅರ್ಹ ಮತದಾರರನ್ನು ಕೈಬಿಡಬಾರದು ಎನ್ನುವುದು ಮುಖ್ಯ ಉದ್ದೇಶವಾಗಿದೆ. ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರÀಣೆ ಪ್ರಕ್ರಿಯೆಯಲ್ಲಿ ರಾಜಕೀಯ ಪಕ್ಷಗಳ ಸಹಕಾರ ನೀಡುತ್ತಿದ್ದು, ಮುಂದೆಯೂ ಇದೇ ರೀತಿಯ ಬೆಂಬಲ ನೀಡುವಂತೆ ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಚುನಾವಣಾ ಶಿರಸ್ತೇದಾರ್ ನಿತ್ಯ, ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಎನ್. ನಾಗಯ್ಯ, ಎಸ್. ಬಾಲಸುಬ್ರಹ್ಮಣ್ಯ, ಬಿ.ಎಂ. ಮಹೇಶ್, ಎಸ್. ರಾಮಚಂದ್ರ, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *