ಕಾಲಕಾಲಕ್ಕೆ ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಿಸಿ: ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯ ಶಂಕರ ಸಿ.ಅಂಕನಶೆಟ್ಟಿಪುರ ಸೂಚನೆ

ಚಾಮರಾಜನಗರ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವಿವಿಧ ವಿಭಾಗೀಯ ಕಚೇರಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಚ್ಛತಾಗಾರರಿಗೆ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿ ಎಂದು ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯರಾದ ಶಂಕರ ಸಿ. ಅಂಕನಶೆಟ್ಟಿಪುರ ಅವರು ಸೂಚನೆ ನೀಡಿದರು.

ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಚೇರಿಯಲ್ಲಿ ಆಯೋಜಿಸಿದ್ದ ಪೌರಕಾರ್ಮಿಕರು ಹಾಗೂ ಸ್ವಚ್ಛತಾಗಾರರ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಚಾಮರಾಜನಗರ ಸೆಸ್ಕ್ ವಿವಿಧ ಶಾಖಾ ಕಚೇರಿಗಳಲ್ಲಿ ಖಾಲಿ ಇರುವ ಪೌರಕಾರ್ಮಿಕರ ಹುದ್ದೆಗಳನ್ನು ಸರ್ಕಾರದ ಅನುಮತಿ ಪಡೆದುಕೊಂಡು ಭರ್ತಿ ಮಾಡಬೇಕು. ಅರೆಕಾಲಿಕ ಹುದ್ದೆಗಳನ್ನು ಖಾಯಂಗೊಳಿಸಬೇಕು. ಮೂರು ತಿಂಗಳಿಗೊಮ್ಮ ನುರಿತ ವೈದ್ಯರಿಂದ ಅವರಿಗೆ ಆರೋಗ್ಯ ತಪಾಸಣೆ ಮಾಡಿಸಬೇಕು ಎಂದು ಸೂಚನೆ ನೀಡಿದರು.

ಪೌರಕಾರ್ಮಿಕರ ಆರೋಗ್ಯ ದೃಷ್ಟಿಯಿಂದ ಹ್ಯಾಂಡ್ ಗ್ಲೌಸ್, ಗಮ್ ಬೂಟ್ ಮತ್ತು ಸಮವಸ್ತ್ರಗಳನ್ನು ನೀಡಬೇಕು. ಇಎಸ್‍ಐ ಮತ್ತು ಪಿಎಫ್ ಸಕಾಲಕ್ಕೆ ಭರಿಸಬೇಕು. ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವವರಿಗೆ ಕನಿಷ್ಠ ವೇತನ ನೀಡಬೇಕು. ಪೌರಕಾರ್ಮಿಕರ ಕೆಲಸದ ಅವಧಿಯಲ್ಲಿ ವಿಶ್ರಾಂತಿ ಪಡೆಯಲು ಪ್ರತ್ಯೇಕ ಕೊಠಡಿ ಸೌಲಭ್ಯ ಕಲ್ಪಿಸಬೇಕು ಎಂದರು.

ನಾನು 150 ಕ್ಕಿಂತಲೂ ಹೆಚ್ಚು ಸಭೆಗಳನ್ನು ನಡೆಸಿದ್ದು, ಪೌರಕಾರ್ಮಿಕರ ಸಾಕಷ್ಟು ಕುಂದುಕೊರತೆಗಳನ್ನು ಆಲಿಸಿದ್ದೇನೆ. ಹಲವಾರು ಸಮಸ್ಯೆಗಳಿಗೆ ಪರಿಹಾರವನ್ನು ದೊರಕಿಸಿಕೊಟ್ಟಿದ್ದೇನೆ. ಸೆಸ್ಕ್ ವ್ಯಾಪ್ತಿಯಲ್ಲಿರುವ ಪೌರಕಾರ್ಮಿಕರನ್ನು ಗೌರವವಾಗಿ ನಡೆಸಿಕೊಳ್ಳುತ್ತಿರುವುದು ಖುಷಿ ನೀಡಿದೆ ಎಂದರು. ಈ ವೇಳೆ ಹಲವಾರು ಶಾಖಾ ವಿಭಾಗದ ಪೌರಕಾರ್ಮಿಕ ಮಹಿಳೆಯರು ಮಾತನಾಡಿ, ಅಧಿಕಾರಿಗಳ ವ್ಯಾಪ್ತಿಯಲ್ಲಿ ನಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರು. ಕೆಲವರು ವೇತನ ಹೆಚ್ಚಳ ಮತ್ತು ಖಾಯಂಗೊಳಿಸುವಂತೆ ಮನವಿ ಮಾಡಿದರು.

ಕಾರ್ಯಪಾಲಕ ಅಭಿಯಂತರರಾದ ಟಿ. ಪ್ರದೀಪ್ ಮಾತನಾಡಿ ಈಗಾಗಲೇ ಪೌರಕಾರ್ಮಿಕರ ಖಾಲಿ ಹುದ್ದೆಗಳ ಭರ್ತಿಗೆ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದೇಶ ಬಂದ ನಂತರ ಹುದ್ದೆ ಭರ್ತಿ ಮಾಡಲಾಗುವುದು ಎಂದು ಹೇಳಿದರು.

ಕೊಳ್ಳೇಗಾಲ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ತಬ್ಬುಸಮ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಹೇಶ್, ಧೃಪದ್, ಮುದ್ದುರಾಜು, ಸಹಾಯಕ ಎಂಜಿನಿಯರ್ ಪ್ರವೀಣ್, ಸಹಾಯಕ ಆಡಳಿತ ಅಧಿಕಾರಿ ವಿನೋದ್, ಲೆಕ್ಕಾಧಿಕಾರಿ ಸ್ವಾಮಿ ಪ್ರಸಾದ್, ಕಾರ್ಮಿಕ ಇಲಾಖೆಯ ರಾಜೇಶ್, ಸಮಾಜ ಕಲ್ಯಾಣ ಇಲಾಖೆಯ ಸಿ. ಮಹದೇವಸ್ವಾಮಿ, ಇಎಸ್‍ಐ ಬ್ರ್ಯಾಂಚ್ ಮ್ಯಾನೇಜರ್ ಸುನೀಲ್, ಜಿಲ್ಲಾ ಜಾಗೃತಿ ಸಮಿತಿ ಸದಸ್ಯರಾದ ರಾಜೇಂದ್ರ ಹಾಗೂ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *