ಚಾಮರಾಜನಗರ: ಜಿಲ್ಲೆಯನ್ನು ಬರ ಪೀಡಿತ ಎಂದು ಘೋಷಿಸಲಾಗಿದ್ದು, ಜಾನುವಾರುಗಳ ಮೇವು, ನೀರಿಗೆ ಸಮಸ್ಯೆಯಾಗದಂತೆ ಗೋಶಾಲೆ ತೆರೆಯಲು ಕೂಡಲೇ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಶ್ರೀರೂಪ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಬರ ನಿರ್ವಹಣೆ ಕುರಿತು ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಎಲ್ಲ ತಾಲೂಕುಗಳು ಬರಪೀಡಿತವಾಗಿದ್ದು, ಜಾನುವಾರುಗಳ ಮೇವು, ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಎಲ್ಲೆಲ್ಲಿ ಗೋಶಾಲೆ ತೆರೆಯಬೇಕಾದ ಅಗತ್ಯವಿದೆ ಎಂಬ ವಿವರ ಮಾಹಿತಿಯನ್ನೊಳಗೊಂಡ ಪ್ರಸ್ತಾವನೆಯನ್ನು ಕೂಡಲೇ ಸಲ್ಲಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಯವರು ಆದೇಶಿಸಿದರು.
ಬರ, ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ವಿಪತ್ತು ಪ್ರತಿಕ್ರಿಯೆ ನಿಧಿ ಮಾರ್ಗಸೂಚಿಗಳಲ್ಲಿನ ಮಾನದಂಡದ ಅಧಾರದ ಮೇಲೆ ಪರಿಹಾರ ಹಾಗೂ ನೆರವು ಕಾರ್ಯಗಳನ್ನು ಕೈಗೊಳ್ಳಬೇಕಿದೆ. ಬರದಂತಹ ಪರಿಸ್ಥಿತಿಯಲ್ಲಿ ಜಾನುವಾರುಗಳಿಗೆ ಮೇವು, ನೀರು, ಆರೋಗ್ಯಪಾಲನಾ ಸೇವೆಗಳನ್ನು ಒದಗಿಸುವ ಮೂಲಕ ರೈತರಿಗೆ ನೆರವಾಗಬೇಕಿದೆ. ಹೀಗಾಗಿ ಜಿಲ್ಲೆಯ ಯಾವ ಭಾಗದಲ್ಲಿ ಜಾನುವಾರುಗಳ ಸಂಖ್ಯೆ ಹೆಚ್ಚು ಇದೆ, ಮೇವು ಕುಡಿಯುವ ನೀರಿಗೆ ಎಲ್ಲಿ ಹೆಚ್ಚು ಅಭಾವ ಕಂಡುಬಂದಿದೆ ಎಂಬ ವಿವರವನ್ನು ಒಳಗೊಂಡಂತೆ ಗೋಶಾಲೆ ತೆರೆಯಬೇಕಾದ ಸ್ಥಳಗಳ ಕುರಿತು ತಕ್ಷಣವೇ ವರದಿ ಹಾಗೂ ಪ್ರಸ್ತಾವನೆ ಕಳುಹಿಸಬೇಕು ಎಂದರು.
ಜನರಿಗೆ ಕುಡಿಯುವ ನೀರಿನ ಅಭಾವವಿರುವ ಪ್ರದೇಶಗಳಲ್ಲಿ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ವಿವರ ಪಡೆದ ಜಿಲ್ಲಾಧಿಕಾರಿಯವರು ಎಲ್ಲಿ ನೀರಿನ ಲಭ್ಯತೆ ಇದೆಯೋ ಅಂತಹ ಕಡೆ ಕೊಳವೆಬಾವಿ ದುರಸ್ಥಿ ಇನ್ನಿತರ ಕೆಲಸಗಳನ್ನು ಶೀಘ್ರವಾಗಿ ಕೈಗೊಂಡು ನೀರು ಒದಗಿಸಬೇಕು. ಟ್ಯಾಂಕರ್‍ಗಳಲ್ಲಿ ನೀರು ಪೂರೈಸುತ್ತಿದ್ದಲ್ಲಿ ಜನರ ಅಗತ್ಯಕ್ಕೆ ತಕ್ಕಂತೆ ನೀರು ಸರಬರಾಜು ಮಾಡಬೇಕು. ಹಬ್ಬವು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳ ಎಲ್ಲಿಯೂ ನೀರಿಗೆ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದರು.
ಕುಡಿಯುವ ನೀರಿನ ಸಮಸ್ಯೆ ಆಲಿಕೆ ಹಾಗೂ ಪರಿಹಾರಕ್ಕಾಗಿ ನಿಯೋಜಿತರಾಗಿರುವ ನೋಡಲ್ ಅಧಿಕಾರಿಗಳು ವ್ಯಾಪಕವಾಗಿ ಕನಿಷ್ಠ ಮೂರು ದಿನಕೊಮ್ಮೆ ತಮಗೆ ನಿಯೋಜಿಸಲಾದ ಗ್ರಾಮಗಳಿಗೆ ಭೇಟಿ ನೀಡಬೇಕು. ವಾಸ್ತವ ಪರಿಸ್ಥಿತಿ ಅರಿತು ಸಂಬಂಧಪಟ್ಟ ಎಂಜಿನಿಯರ್, ಪಿಡಿಒಗಳನ್ನು ಸಂಪರ್ಕಿಸಿ ತಕ್ಷಣವೇ ಸಮಸ್ಯೆ ಪರಿಹಾರ ಮಾಡಬೇಕು. ಪ್ರಸ್ತುತ ಬರ ಸಂದರ್ಭದಲ್ಲಿ ಕುಡಿಯುವ ನೀರು ಪೂರೈಕೆಗೆ ನಿರಂತರ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿಯವರು ತಾಕೀತು ಮಾಡಿದರು.
ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸನ್ನದ್ದವಾಗಿರಿಸಿಕೊಳ್ಳಬೇಕು. ದುರಸ್ತಿ ಅಗತ್ಯವಿದ್ದರೆ ಕೂಡಲೇ ಸರಿಪಡಿಸಿ ಜನರ ಬಳಕೆಗೆ ಅನುವು ಮಾಡಿಕೊಡಬೇಕು. ಬರ ಸಂದರ್ಭದಲ್ಲಿ ಎದುರಾಗಬಹುದದ ಆರೋಗ್ಯ ಸಮಸ್ಯೆಗಳಿಗೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ವಹಿಸಬೇಕು. ಒಟ್ಟಾರೆ ಜಿಲ್ಲೆಯ ಬರ ಪರಿಹಾರ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಜನರ ನೆರವಿಗೆ ನಿಲ್ಲಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶ್ರೀರೂಪ ಅವರು ಸೂಚಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಡಿ.ಸಿ. ಶೃತಿ, ಪಶು ಸಂಗೋಪನೆ ಇಲಾಖೆಯ ಉಪನಿರ್ದೇಶಕರಾದ ಡಾ. ಮಂಜುನಾಥ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಇಮ್ಯಾನುವಲ್ ಸಂತೋಷ್, ಕೃಷಿ ಇಲಾಖೆ ಉಪನಿರ್ದೇಶಕರಾದ ಭಾಸ್ಕರ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರಾದ ಗಿರೀಶ್, ಜಿಲ್ಲಾ ನಗರಾಭಿವೃಧ್ದಿ ಕೋಶದ ಯೋಜನಾ ನಿರ್ದೇಶಕರಾದ ವೆಂಕಟೇಶ್, ಜಿಲ್ಲೆಯ ತಹಶೀಲ್ದಾರರು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ನೋಡಲ್ ಅಧಿಕಾರಿಗಳಾಗಿ ನೇಮಕಗೊಂಡಿರುವ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
Related