ಸಹಕಾರ ಸಂಘಗಳು ರೈತರು, ಬಡವರು ಹಾಗೂ ಶ್ರಮಿಕರ ಜೀವಾಳ : ನಂಜುಂಡಪ್ರಸಾದ್ ಬಣ್ಣನೆ

ಸಂತೇಮರಹಳ್ಳಿಯಲ್ಲಿ 77ನೇ ಸಹಕಾರ ಸಪ್ತಾಹ ಆಚರಣೆ
ಚಾಮರಾಜನಗರ, ನ. 17- ರೈತರು, ಬಡವರು ಹಾಗೂ ಶ್ರಮಿಕರ ಅಭಿವೃದ್ದಿಗಾಗಿ ಸಹಕಾರ ಸಂಘಗಳು ಹೆಚ್ಚಿನ ರೀತಿಯಲ್ಲಿ ಶ್ರಮಿಸುತ್ತಿದ್ದು, ಉತ್ತರ ಕರ್ನಾಟಕ ಹಾಗೂ ಕರಾವಳಿ ಪ್ರದೇಶಗಳ ಮಾದರಿಯಲ್ಲಿ ನಮ್ಮ ಜಿಲ್ಲೆಯಲ್ಲಿ ಸಹಕಾರ ಚಳವಳಿ ಬಲವರ್ಧನೆಯಾಗಬೇಕಾಗಿದೆ ಎಂದು ಚಾಮುಲ್ ಮಾಜಿ ಅಧ್ಯಕ್ಷ ಹಾಗೂ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಚ್.ಎಸ್. ನಂಜುಂಡಪ್ರಸಾದ್ ತಿಳಿಸಿದರು.

ತಾಲೂಕಿನ ಸಂತೇಮರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಚಾಮರಾಜನಗರ ಜಿಲ್ಲಾ ಸಹಕಾರ ಒಕ್ಕೂಟ ಹಾಗೂ ಸಂತೇಮರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನಡೆದ 77 ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

1922 ರಲ್ಲಿ ಸಹಕಾರ ಚಳುವಳಿ ಪ್ರಾರಂಭವಾಗಿದ್ದು, ಈ ಚಳವಳಿಯು ರೈತರು ಎಲ್ಲಾ ವರ್ಗದ ಶ್ರಮಿಕರ ಆಶಾಕಿರಣವಾಗಿದೆ. ಪ್ರತಿಯೊಂದು ಗ್ರಾಮಗಳಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಹಾಲು ಉತ್ಪಾದಕರ ಸಹಕಾರ ಸಂಘ ಸೇರಿದಂತೆ ವಿವಿಧ ಸ್ತರದ ಸಹಕಾರ ಸಂಘಗಳು ರಚನೆಗೊಂಡು ಅಭಿವೃದ್ದಿಯ ಪೂರಕವಾಗಿದೆ. ರೈತನ ಜೀವನದ ಆಧಾರವಾಗಿ ಪ್ರಮುಖ ಪಾತ್ರ ವಹಿಸುವ ಮೊದಲ ಸಂಘವಾಗಿ ನಿರ್ಮಾಣವಾಗಿದೆ. ದೇಶದ್ಯಂತ ಸಹಕಾರ ಸಪ್ತಾಹವನ್ನು ಆಚರಣೆ ಮಾಡಿದ್ದು, ಏಳು ದಿನಗಳು ಕಾಲ ಸಹಕಾರ ಧ್ವಜವನ್ನು ಹಾರಿಸಿ, ಸಹಕಾರಿ ಕಾಯ್ದೆ ಮತ್ತು ಯೋಜನೆಗಳ ಕುರಿತು ಜಾಗೃತಿ ಮುಡಿಸಲಾಗುತ್ತಿದೆ ಎಂದರು.

ಸಹಕಾರ ಚಳವಳಿಗೆ 119 ವರ್ಷಗಳ ಇತಿಹಾಸವಿದೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡಬೇಕೆ ವಿನಹ , ಸಂಘದ ವಿಚಾರ ಬಂದಾಗ ರಾಜಕೀಯ ಮರೆತು ಸಹಕಾರ ಸಂಘದ ಅಭಿವೃದ್ಧಿಯಲ್ಲಿ ಎಲ್ಲರು ಪಾಲ್ಗೊಳ್ಳಬೇಕು. 1997 ರಲ್ಲಿ ಮಾಜಿ ಸಚಿವ ರಾದ ದಿ. ಎಚ್.ಎಸ್. ಮಹಾದೇವ ಪ್ರಸಾದ್ ಅವರು ಕುದೇರಿನಲ್ಲಿ 40 ಎಕರೆ ಪ್ರದೇಶದಲ್ಲಿ ಹಾಲಿನ ಡೈರಿ ಸ್ಥಾಪನೆ ಮಾಡಿ ಸಾವಿರಾರು ಬಡ ಕುಟುಂಬಗಳಿಗೆ ಆಸರೆಯಾಗಿದ್ದಾರೆ. ದೇಶದ ಮೊದಲ ಪ್ರಧಾನಿ ಜವಾಹರ ಲಾಲ್ ನೆಹರು ಸಹಕಾರ ಸಂಘಗಳಿಗೆ 930 ಕೋಟಿ ಬಿಡುಗಡೆ ಮಾಡಿ ಸಂಘಗಳ ಅಭಿವೃದ್ಧಿಗೆ ಹೆಚ್ಚಿನ ಉತ್ತೇಜನ ನೀಡಿದ್ದರು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕರಾಧ ಎಚ್ ಎಂ ಮಹಾದೇವಪ್ರಭು, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಎಚ್ ಬಸವಣ್ಣ, ಎಂ. ಎಂ. ನಾಗರಾಜ್, ಎಚ್. ಎನ್. ಸುಂದರರಾಜ್, ನಾಗಸುಂದರ್, ದ್ರಾಕ್ಷಿಯಣಿ, ಸಂತೇಮರಹಳ್ಳಿ ಡೇರಿ ಅಧ್ಯಕ್ಷೆ ಕುಮಾರಿ, ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರಾದ ಜ್ಯೋತಿ ಅರಸು, ಸಹಾಯಕ ನಿಬಂಧಕ ಎಂ. ಎಸ್. ದಯಾನಂದ, ಸಂತೇಮರಹಳ್ಳಿ ಎಂಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಕುಮಾರಸ್ವಾಮಿ, ಮೇಲ್ವಿಚಾರಕ ಲಿಂಗರಾಜು ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯೋಗೇಂದ್ರ ನಾಯಕ್ ಪಿಎಸಿಸಿ ಬ್ಯಾಂಕ್ ನೌಕರರಾದ ಪ್ರದೀಪ್ ಎಚ್ ಜಿ, ಮಹದೇವ್ ಪ್ರಸಾದ್, ರಾಚಪ್ಪ, ಸಹಕಾರ ಯೂನಿಯನ್ ಮಲ್ಲಿಕಾರ್ಜುನ್, ಮಲ್ಲೇಶ್, ಕೆಂಗಡಗಣ್ಣ ಇತರರು ಇದ್ದಾರೆ.

Leave a Reply

Your email address will not be published. Required fields are marked *