ಹೊಯ್ಸಳ, ಕೆಳದಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ

ಚಾಮರಾಜನಗರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಸಾಧಾರಣ ಧೈರ್ಯ, ಸಾಹಸ ಪ್ರದರ್ಶಿಸಿದ 6 ರಿಂದ 18 ವರ್ಷ ವಯಸ್ಸಿನೊಳಗಿನ ಬಾಲಕ ಬಾಲಕಿಯರಿಗೆ ನೀಡಲಾಗುವ 2023-24ನೇ ಸಾಲಿನ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಗೆ ಆಯ್ಕೆಯಾದ ಮಕ್ಕಳಿಗೆ 10 ಸಾವಿರ ರೂ. ನಗದು, ಪ್ರಶಸ್ತಿ ಪತ್ರವನ್ನು ನೀಡಲಾಗುವುದು. ಮಕ್ಕಳು ತಮ್ಮ ಪ್ರಾಣದ ಹಂಗನ್ನು ತೊರೆದು ಹಾಗೂ ಸಮಯ ಪ್ರಜ್ಞೆಯಿಂದ ಇತರರ ಪ್ರಾಣ ರಕ್ಷಣೆಗಾಗಿ ಧೈರ್ಯ, ಶೌರ್ಯವನ್ನು ಪ್ರದರ್ಶಿಸಿರಬೇಕು. ಅಸಾಧಾರಣ ಧೈರ್ಯ, ಶೌರ್ಯ ಪ್ರಕರಣವು 01-08-2022 ರಿಂದ 31-07-2023 ರೊಳಗೆ ನಡೆದಿರಬೇಕು. 01-08-2005ರಂದು ಹಾಗೂ ನಂತರ ಜನಿಸಿದ ಮಕ್ಕಳು ಪ್ರಶಸ್ತಿಗೆ ಅರ್ಹರಿರುತ್ತಾರೆ.

ಸಾಧನೆಯು ಜಿಲ್ಲಾ ಮಟ್ಟದಲ್ಲಿ ಗುರುತಿಸಿರಬೇಕು. ಧೈರ್ಯ, ಶೌರ್ಯವನ್ನು ಪ್ರದರ್ಶಿಸಿದ ಬಗ್ಗೆ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿರಬೇಕು. ಶೌರ್ಯ ಸಾಧನೆ ತೋರಿದ ಬಗ್ಗೆ ಆರಕ್ಷಕ ಇಲಾಖೆಯ ಪ್ರಾಥಮಿಕ ತನಿಖಾ ವರದಿ (ಎಫ್.ಐ.ಆರ್), ಜನ್ಮ ದಿನಾಂಕದ ಬಗ್ಗೆ ನಗರಸಭೆ, ಗ್ರಾಮ ಲೆಕ್ಕಾಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ, ಶಾಲೆಯಿಂದ ಪಡೆದ ವರ್ಗಾವಣೆ ಪತ್ರ, ಧೈರ್ಯ, ಶೌರ್ಯ ತೋರಿಸಿದ ಬಗ್ಗೆ ಪತ್ರಿಕಾ ಪ್ರಕಟಣೆಗಳೊಂದಿಗೆ ಮಗುವಿನ ಭಾವಚಿತ್ರ ಇತ್ಯಾದಿ ದಾಖಲೆಗಳನ್ನು ಅರ್ಜಿಯೊಡನೆ ಲಗತ್ತಿಸಬೇಕು. ರಾಜ್ಯ ಸರ್ಕಾರದಿಂದ ರಚಿಸಲ್ಪಟ್ಟಿರುವ ಜಿಲ್ಲಾ ಮಟ್ಟದ ಸಮಿತಿಯು ಶೌರ್ಯ, ಸಾಹಸ ಸಾಧಿಸಿರುವ ಮಕ್ಕಳನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಲಿದೆ.

ಆಸಕ್ತರು ಅರ್ಜಿ ನಮೂನೆಯನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರ ಕಚೇರಿಯಲ್ಲಿ ಪಡೆದು ಕನ್ನಡ ಭಾಷೆಯಲ್ಲಿ ದ್ವಿಪ್ರತಿಗಳಲ್ಲಿ ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸೆಪ್ಟೆಂಬರ್ 30ರೊಳಗಾಗಿ ಸಲ್ಲಿಸಬೇಕು ಎಂದು ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *