ಡಿಜಿಟಲ್ ಲೈವ್ ಪ್ರಮಾಣ ಪತ್ರ ಸಲ್ಲಿಕೆ : ಅಂಚೆ ಇಲಾಖೆಯಿಂದ ಸೇವಾ ಸೌಲಭ್ಯ

ಚಾಮರಾಜನಗರ: ಪಿಂಚಣಿದಾರರು ವೈಯಕ್ತಿಕವಾಗಿ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸುವ ಸಮಯದಲ್ಲಿ ಎದುರಿಸುತ್ತಿರುವ ತೊಂದರೆಗಳನ್ನು ತಪ್ಪಿಸಲು, ಭಾರತೀಯ ಅಂಚೆ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಪಿಂಚಣಿದಾರರ ಮನೆ ಬಾಗಿಲಿಗೆ ಡಿಜಿಟಲ್ ಲೈಫ್ ಪ್ರಮಾಣಪತ್ರವನ್ನು ಸಲ್ಲಿಸಲು ವ್ಯವಸ್ಥೆ ಮಾಡಿದೆ.

ರಾಜ್ಯ ಸರ್ಕಾರದ ಪಿಂಚಣಿದಾರರಿಗೆ/ ಕುಟುಂಬ ಪಿಂಚಣಿದಾರರಿಗೆ ಡಿಜಿಟಲ್ ಲೈಫ್ ಸರ್ಟಿಫಿಕೇಟ್ (ಡಿಎಲ್.ಸಿ) ಸೇವೆಗಳನ್ನು ಸುಲಭವಾಗಿ ಒದಗಿಸಲು, ಖಜಾನೆ ಆಯುಕ್ತರೊಂದಿಗೆ ಭಾರತೀಯ ಅಂಚೆ ಇಲಾಖೆಯಡಿಯಲ್ಲಿ ಬರುವ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಎಂಒಯುಗೆ ಸಹಿ ಹಾಕಿದೆ. ಈ ಪ್ರಕಾರ ನವೆಂಬರ್ 1 ರಿಂದ ನವೆಂಬರ್ 30ರವರೆಗಿನ ಮಸ್ಟರಿಂಗ್ ಅವಧಿಯಲ್ಲಿ 5.4 ಲಕ್ಷಕ್ಕಿಂತ ಹೆಚ್ಚು ಕರ್ನಾಟಕ ಸರಕಾರದ ಪಿಂಚಣಿದಾರರು/ಕುಟುಂಬ ಪಿಂಚಣಿದಾರರಿಗೆ ಡಿಎಲ್‍ಸಿ ಸೇವೆಗಳನ್ನು ಒದಗಿಸುತ್ತದೆ.

ಪಿಂಚಣಿದಾರರು ತಮ್ಮ ಡಿಜಿಟಲ್ ಲೈಫ್ ಪ್ರಮಾಣ ಪತ್ರವನ್ನು ಕೆಲವೇ ನಿಮಿಷಗಳಲ್ಲಿ ಪೋಸ್ಟ್ ಸ್ಕ್ಯಾನ್ ಮೂಲಕ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ಪಿಪಿಒ ಸಂಖ್ಯೆ ಮತ್ತು ಪಿಂಚಣಿದಾರರ ಬ್ಯಾಂಕ್ ಖಾತೆಯ ವಿವರಗಳೊಂದಿಗೆ ತಮ್ಮ ಬಯೋಮೆಟ್ರಿಕ್ (ಬೆರಳಚ್ಚು) ವೆರಿಫೈ ಮಾಡಿ ಸಲ್ಲಿಸಬಹುದು.

ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ)ಅನ್ನು ಸೆಪ್ಟೆಂಬರ್ 01, 2018ರಂದು ರಾಷ್ಟ್ರವ್ಯಾಪಿ ಪ್ರಾರಂಭಿಸಲಾಯಿತು. ಐಪಿಪಿಬಿಯ ಸೇವೆಗಳು ಈಗಾಗಲೇ ಸೇರ್ಪಡೆಗೊಂಡಿರುವ 8 ಕೋಟಿಗೂ ಹೆಚ್ಚು ಗ್ರಾಹಕರಿಗೆ ಹಾಗೂ ಇನ್ನಿತರರಿಗೆ, ದೇಶಾದ್ಯಂತ 1,36,000 ಅಂಚೆ ಕಚೇರಿಗಳ ಮೂಲಕ ಲಭ್ಯವಿದೆ. ಕರ್ನಾಟಕದಲ್ಲಿ ಐಪಿಪಿಬಿಯ 31 ಶಾಖೆಗಳನ್ನು ಹೊಂದಿದ್ದು ಅದರ ಜೊತೆಗೆ 9500ಕ್ಕೂ ಹೆಚ್ಚು ಪೋಸ್ಟ್ ಸ್ಕ್ಯಾನ್‍ಗಳು ಅವರ ದೈನಂದಿನ ಡೆಲಿವರಿ ಬೀಟ್ ನಲ್ಲಿ ಬ್ಯಾಂಕಿಂಗ್ ಸೇವೆಗಳನ್ನು ನೀಡಲು ಸ್ಮಾರ್ಟ್ ಫೋನ್ ಮತ್ತು ಬಯೋಮೆಟ್ರಿಕ್ ಸಾಧನಗಳನ್ನು ಹೊಂದಿದ್ದಾರೆ.

ಪಿಂಚಣಿದಾರರು/ಕುಟುಂಬ ಪಿಂಚಣಿದಾರರು ತಮ್ಮ ಹತ್ತಿರದ ಅಂಚೆ ಕಚೇರಿಯಲ್ಲಿ ಅಥವಾ ಪೋಸ್ಟ್ ಸ್ಕ್ಯಾನ ಮೂಲಕ ಕೇವಲ 70 ರೂ. (ಜಿಎಸ್‍ಟಿ ಸೇರಿದಂತೆ) ಶುಲ್ಕ ನೀಡಿ ಈ ಸೌಲಭ್ಯವನ್ನು ಪಡೆದು ತಮ್ಮ ಡಿಜಿಟಲ್ ಲೈಫ್ ಪ್ರಮಾಣ ಪತ್ರವನ್ನು ಸಲ್ಲಿಸಬಹುದಾಗಿದೆ. ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *