ಚಾಮರಾಜನಗರ: ಜಿಲ್ಲಾಮಟ್ಟದ ವಿಕಲಚೇತನರ ದಿನಾಚರಣೆ ಕಾರ್ಯಕ್ರಮವನ್ನು ಡಿಸೆಂಬರ್ 3ರಂದು ನಗರದಲ್ಲಿ ಹಮಿಕೊಳ್ಳಲಾಗುತ್ತಿದ್ದು, ಈ ಸಂಬಂಧ ಅಗತ್ಯ ಸಿದ್ದತೆಗಳನ್ನು ವ್ಯವಸ್ಥಿತವಾಗಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ವಿಕಲಚೇತನರ ದಿನ ಆಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಭೆಯ ಆರಂಭದಲ್ಲಿ ಜಿಲ್ಲಾಮಟ್ಟದ ವಿಕಲಚೇತನರ ದಿನಾಚರಣೆ ಕಾರ್ಯಕ್ರಮಕ್ಕಾಗಿ ಜಿಲ್ಲಾಮಟ್ಟದ ವಿವಿಧ ಇಲಾಖೆ ಅಧಿಕಾರಿಗಳ ಸಮಿತಿ ರಚಿಸಲಾಗಿದ್ದು, ಸಮಿತಿ ಅಧಿಕಾರಿಗಳು ಸಂಘಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ವಹಿಸಿರುವ ಸಿದ್ದತಾ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಕಾರ್ಯಕ್ರಮ ನಿರ್ವಹಣೆಯಲ್ಲಿ ಯಾವುದೇ ಲೋಪಗಳಾಗದಂತೆ ವ್ಯವಸ್ಥಿತವಾಗಿ ಆಯೋಜಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಯವರು ಸೂಚಿಸಿದರು.
ವಿಕಲಚೇತನರ ದಿನ ಆಚರಣೆ ಸ್ಪೂರ್ತಿದಾಯಕ ಕಾರ್ಯಕ್ರಮವಾಗಿದ್ದು, ಕಾರ್ಯಕ್ರಮದ ಅಂಗವಾಗಿ ನವೆಂಬರ್ 21ರಂದು ವಿಕಲಚೇತನರ ಕ್ರೀಡಾಕೂಟ ನಡೆಯಲಿದ್ದು, ಡಿಸೆಂಬರ್ 3ರಂದು ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ವೇದಿಕೆ ಕಾರ್ಯಕ್ರಮ ಹಾಗೂ ಅಂದು ಬೆಳಿಗ್ಗೆ ಜಾಥಾ ಏರ್ಪಡಿಸಲಾಗಿದೆ. ನಗರದ ಡಾ. ಬಿ.ಆರ್ ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ವಿಕಲಚೇತನರ ಕ್ರೀಡಾಕೂಟಕ್ಕಾಗಿ ನಗರದ ಚಾಮರಾಜೇಶ್ವರ ದೇವಾಲಯದಿಂದ ಕ್ರೀಡಾಂಗಣದವರೆಗೆ ಕ್ರೀಡಾಜ್ಯೋತಿಯನ್ನು ಕೊಂಡೊಯ್ಯಲಾಗುವುದು ಎಂದರು.
ಕ್ರೀಡಾಕೂಟ ನಡೆಯುವ ಜಿಲ್ಲಾ ಕ್ರೀಡಾಂಗಣದಲ್ಲಿ ಸಾಂಸ್ಕøತಿಕ ಸ್ಪರ್ಧೆಗಳು ನಡೆಯಲಿರುವುದರಿಂದ ಕ್ರೀಡಾಂಗಣದ ಸ್ವಚ್ಚತೆ, ಕುಡಿಯುವ ನೀರು, ಮಣ್ಣಿಗೆ ನೀರು ಹಾಕಿ ಹದಗೊಳಿಸುವುದು ಹಾಗೂ ಶೌಚಾಲಯಗಳು ಸಮರ್ಪಕವಾಗಿರಬೇಕು. ಕ್ರೀಡಾಂಗಣದಲ್ಲಿರುವ ಶೌಚಾಲಯದೊಂದಿಗೆ ಕ್ರೀಡಾಕೂಟದಲ್ಲಿ ಬಾಗವಹಿಸುವ ವಿಕಲಚೇತನರಿಗೆ ಇತರೆ 5 ಮೊಬೈಲ್ ಶೌಚಾಲಯಗಳ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿಯವರು ನಗರಸಭಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕ್ರೀಡಾಕೂಟ ಹಾಗೂ ವೇದಿಕೆ ಕಾರ್ಯಕ್ರಮ ಈ ಎರಡು ದಿನಗಳಲ್ಲಿ ವಿಕಲಚೇತನರನ್ನು ಜಿಲ್ಲೆಯ ಎಲ್ಲಾ 130 ಗ್ರಾಮ ಪಂಚಾಯಿತಿಗಳಿಂದ ಕರೆತರಲು ಅನುಕೂಲವಾಗುವಂತೆ ಬಸ್ ವ್ಯವಸ್ಥೆ ಮಾಡಬೇಕು. ವಿಕಲಚೇತನರ ದಿನಾಚರಣೆಯಂದು ಮಾರ್ಗದರ್ಶಿ ಸಂಸ್ಥೆ ವಸ್ತುಪ್ರದರ್ಶನ ಮಳಿಗೆ ವ್ಯವಸ್ಥೆ ಮಾಡಲಿದೆ. ಆಲ್ಲದೇ ವಿಕಲಚೇತನರ ಆರೋಗ್ಯ ಶಿಬಿರ ನಡೆಯಲಿದೆ. ಆರೋಗ್ಯ ಶಿಬಿರದಲ್ಲಿ ನೇತ್ರದಾನ ಮಾಡಲು ನೊಂದಣಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ದಿನಾಚರಣೆಯಂದು ಯುಡಿಐಡಿ ಕಾರ್ಡ್ ಆಗಿಲ್ಲದ ವಿಕಲಚೇತನರಿಗೆ ಕಾರ್ಡ್ ಮಾಡಿಕೊಡುವ ವ್ಯವಸ್ಥೆಯು ಸಹ ಇರಲಿದೆ. ಅಲ್ಲದೆ ಜಿಲ್ಲಾ ಪಂಚಾಯಿತಿಯಿಂದ ಕಡ್ಡಾಯ ಮತದಾನದ ಬಗ್ಗೆ ಸ್ವೀಪ್ ಜಾಗೃತಿ ನಡೆಯಲಿದೆ. ಕಾರ್ಯಕ್ರಮ ಯಶಸ್ಸಿಗೆ ಸಹಕಾರ ಹಾಗೂ ಸಮನ್ವಯ ಅಗತ್ಯ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಲಕ್ಷ್ಮೀ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸುರೇಶ್, ಜಿಲ್ಲಾಮಟ್ಟ ಅಧಿಕಾರಿಗಳು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಇತರರು ಸಭೆಯಲ್ಲಿ ಹಾಜರಿದ್ದರು.