ಚಾಮರಾಜನಗರ: ಜಿಲ್ಲಾ ನಗರಾಭಿವೃದ್ಧಿ ಕೋಶ ಕಚೇರಿಯಲ್ಲಿ ಅನುಷ್ಠಾನಗೊಳಿಸಲಾಗಿರುವ ಇ-ಕಚೇರಿ (ಇ-ಔಜಿಜಿiಛಿe) ಆಡಳಿತ ವ್ಯವಸ್ಥೆಗೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಚಾಲನೆ ನೀಡಿದರು.
ನಗರದ ಜಿಲ್ಲಾಡಳಿತ ಭವನದ ಮೊದಲ ಮಹಡಿಯಲ್ಲಿರುವ ನಗರಾಭಿವೃದ್ಧಿ ಇಲಾಖೆಯ ಜಿಲ್ಲಾ ನಗರಾಭಿವೃದ್ಧಿ ಕೋಶ ಕಚೇರಿಯು ಸಂಪೂರ್ಣವಾಗಿ ಇ-ಕಚೇರಿ ತಂತ್ರಜ್ಞಾನವನ್ನು ಅಳವಡಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಇಂದು ಇ-ಆಫೀಸ್ ಕಂಪ್ಯೂಟರ್ ಆನ್ ಮಾಡುವ ಮೂಲಕ ವ್ಯವಸ್ಥೆಯನ್ನು ಉದ್ಘಾಟಿಸಿದರು.

ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಇ-ಆಫೀಸ್ ಕಚೇರಿ ಆಡಳಿತ ವ್ಯವಸ್ಥೆಯ ಒಂದು ವಿಶೇಷ, ವಿನೂತನ ಹೆಜ್ಜೆಯಾಗಿದೆ. ಸುಲಭವಾಗಿ ಸರಳ ವಿಧಾನದ ಮೂಲಕ ಜನರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸುವುದೇ ಕಾರ್ಯಕ್ರಮದ ಉದ್ದೇಶವಾಗಿದೆ. ಹಿಂದೆ ಟಫಾಲು ಸ್ವೀಕರಿಸಿ, ಪತ್ರಗಳನ್ನು ಪರಿಶೀಲಿಸಿ ಬಳಿಕ ಜನಸಾಮಾನ್ಯರ ಕುಂದುಕೊರತೆ, ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳಿಗೆ 2-3 ದಿನಗಳಾಗುತ್ತಿತ್ತು. ಇ-ಆಫೀಸ್ನಿಂದ ಸುಲಲಿತವಾಗಿ ಕೆಲಸ ಮಾಡಲು ಸಹಕಾರಿಯಾಗಿದೆ. ಇದರ ಜೊತೆಗೆ ಸಮಯದ ಉಳಿತಾಯ ಸಹ ಆಗಲಿದೆ ಎಂದರು.
ಅಧಿಕಾರಿಗಳು ಕಡ್ಡಾಯವಾಗಿ ಇ-ಆಫೀಸ್ ಮೂಲಕವೇ ಪತ್ರ ವ್ಯವಹಾರಗಳನ್ನು ನಡೆಸಬೇಕು. ಎಲ್ಲಾ ಕಚೇರಿಗಳಲ್ಲೂ ಕೂಡ ಇದೇ ಪ್ರಕ್ರಿಯೆ ಮೂಲಕ ಕಾರ್ಯ ನಿರ್ವಹಿಸಬೇಕು. ಈ ವ್ಯವಸ್ಥೆ ಚಾಲನೆಯಿಂದ ಕಡತಗಳು ಕಳೆದು ಹೋಗುವ ಸಾಧ್ಯತೆಗಳು ಕಡಿಮೆ ಇದ್ದು, ಪಾರದರ್ಶಕತೆಯಿಂದ ಕೆಲಸ ನಿರ್ವಹಿಸಲು ಸಹಕಾರಿಯಾಗುತ್ತದೆ. ಇದರಿಂದ ಜನರಿಗೆ ತ್ವರಿತವಾಗಿ ಪರಿಹಾರ ದೊರೆಯಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.
ಇದೇ ವೇಳೆ ಕಚೇರಿಯನ್ನು ವೀಕ್ಷಿಸಿ ಅಧಿಕಾರಿ, ಸಿಬ್ಬಂದಿಗಳ ಜೊತೆ ಮಾತನಾಡಿ ಕಚೇರಿ ಕೆಲಸಗಳು ನಿಗಧಿತ ಸಮಯದಲ್ಲಿ ಮುಗಿಯಬೇಕು. ಎಲ್ಲರೂ ಜನರ ನಂಬಿಕೆಗಳಿಗೆ ಧಕ್ಕೆ ಬರದಂತೆ ಕಾರ್ಯ ನಿರ್ವಹಿಸಬೇಕು. ಸಮಯಕ್ಕೆ ಸರಿಯಾಗಿ ಕೆಲಸಗಳಾಗಬೇಕು. ಕಚೇರಿಗೆ ಬೇಕಾಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಅಧಿಕಾರಿಗಳಿಗೆ ತಿಳಿಸಿದರು.
ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಎಂ.ವಿ. ಸುಧಾ, ನಗರಸಭೆಯ ಪೌರಾಯುಕ್ತರಾದ ಎಸ್.ವಿ. ರಾಮ್ದಾಸ್, ನಗರಾಭಿವೃದ್ದಿ ಕೋಶದ ಜಿಲ್ಲಾ ನೋಡೆಲ್ ಆಧಿಕಾರಿ ಡಾ. ಚೇತನ್ಕುಮಾರ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಎಂ. ರಾಮಚಂದ್ರ, ನಗರಸಭೆಯ ಪರಿಸರ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಗಿರಿಜಮ್ಮ, ಇತರರು ಇದೇ ವೇಳೆ ಇದ್ದರು.