ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡದ ಕಾರ್ಯಕ್ರಮಗಳ ಪ್ರಗತಿ ಸಾಧಿಸಲು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ತಾಕೀತು

ಚಾಮರಾಜನಗರ: ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡದ ಯೋಜನೆ ಕಾರ್ಯಕ್ರಮಗಳನ್ನು ತ್ವರಿತವಾಗಿ ಅನುಷ್ಠಾನ ಮಾಡಿ ಪ್ರಗತಿ ಸಾಧಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಾಕೀತು ಮಾಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಪರಿಶಿಷ್ಟಜಾತಿ, ಗಿರಿಜನ ಉಪಯೋಜನೆ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರತಿ ಇಲಾಖೆಗಳಲ್ಲಿ ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡಗಳ ಕಾರ್ಯಕ್ರಮಕ್ಕಾಗಿ ನಿಗದಿಯಾಗಿರುವ ಅನುದಾನ ಸದ್ಬಳಕೆಯಾಗಬೇಕು. ವಿಳಂಬ ಮಾಡದೇ ಯೋಜನೆ ಅನುಷ್ಠಾನಗೊಳಿಸಿ ಪರಿಶಿಷ್ಟರ ಅಭಿವೃದ್ದಿಗೆ ಮುಂದಾಗಬೇಕು. ನಿಗದಿತ ಅವಧಿಯೊಳಗೆ ಸೌಲಭ್ಯಗಳು ತಲುಪಬೇಕು ಎಂದು ಜಿಲ್ಲಾಧಿಕಾರಿಯವರು ಸೂಚಿಸಿದರು.

ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಬೇಕು. ಯಾವುದೇ ರೀತಿಯ ದೂರುಗಳಿಗೆ ಅವಕಾಶವಾಗಬಾರದು. ಎಲ್ಲಿಯೂ ಗೊಂದಲಗಳಿಗೆ ಆಸ್ಪದ ನೀಡದಂತೆ ಸುಗಮವಾಗಿ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳು, ಸವಲತ್ತುಗಳು ಸಿಗುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದರು.

ಫಲಾನುಭವಿಗಳಿಗೆ ಯೋಜನೆಯಡಿ ನೀಡುವ ಸೌಲಭ್ಯ, ಪರಿಕರಗಳು ಗುಣಮಟ್ಟದಾಗಿರಬೇಕು. ಗಂಗಾ ಕಲ್ಯಾಣ ಯೋಜನೆಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಇತರೆ ಇಲಾಖೆಗಳು ಸಮರ್ಪಕವಾಗಿ ಯೋಜನೆಯ ಕಾರ್ಯಕ್ರಮಗಳನ್ನು ನಿಗದಿತ ಅವಧಿಯೊಳಗೆ ಅನುಷ್ಠಾನಗೊಳಿಸಿ ಪ್ರಗತಿ ಸಾಧಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.

ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಲಕ್ಷ್ಮಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಮಲ್ಲಿಕಾರ್ಜುನ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *