ಚಾಮರಾಜನಗರ: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ 2023-24ನೇ ಸಾಲಿನಲ್ಲಿ ಹಾಲು ಉತ್ಪಾದಕರ ಉತ್ತೇಜನ ಕಾರ್ಯಕ್ರಮದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಹೈನು ಘಟಕ-ಒಂದು ಮಿಶ್ರ ತಳಿ ಹಾಲು ಕರೆಯುವ ಹಸು ಘಟಕ ಕಾರ್ಯಕ್ರಮವನ್ನು ಅನುμÁ್ಠನಗೊಳಿಸಲು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಿಂದ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಘಟಕದ ಮೊತ್ತ 65,000 ರೂ.ಗಳಾಗಿದ್ದು ಇದರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಫಲಾನುಭವಿಗಳಿಗೆ ಶೇಕಡ 90ರಷ್ಟು ಅಂದರೆ 58,500 ರೂ.ಗಳ ಸಹಾಯಧನ ನೀಡಲಾಗುವುದು. ಘಟಕದ ಸಹಾಯಧನದ ಹೊರತು ಪಡಿಸಿದಂತೆ ಉಳಿದ ಮೊತ್ತವನ್ನು ಫಲಾನುಭವಿಯ ವಂತಿಕೆ ಶೇಕಡ 10ರಷ್ಟು ಅಂದರೆ 6,500 ರೂ.ಗಳನ್ನು ಫಲಾನುಭವಿ ವಂತಿಕೆ ಅಥವಾ ಸಾಲದ ರೂಪದಲ್ಲಿ ಬ್ಯಾಂಕ್ನಿಂದ ಪಡೆಯಬೇಕಾಗಿದೆ.
ಚಾಮರಾಜನಗರ ಜಿಲ್ಲೆಗೆ ಪರಿಶಿಷ್ಟ ಜಾತಿಗೆ 25 ಘಟಕ ಮತ್ತು ಪರಿಶಿಷ್ಟ ಪಂಗಡದವರಿಗೆ 24 ಘಟಕ ಸೇರಿದಂತೆ ಒಟ್ಟು 49 ಗುರಿಯನ್ನು ನಿಗದಿಪಡಿಸಲಾಗಿದೆ. ಈ ಯೋಜನೆಯ ಮಾರ್ಗಸೂಚಿ ಪ್ರಕಾರ ಆಸಕ್ತಿಯುಳ್ಳ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಸರ್ಕಾರದ ನಿಯಮಗಳಂತೆ ಮಹಿಳೆಯರಿಗೆ (ಶೇ 33.3ರಷ್ಟು), ವಿಶೇಷ ಚೇತನರಿಗೆ (ಶೇ 3ರಷ್ಟು) ಆದ್ಯತೆ ನೀಡಲಾಗುವುದು.
ಈ ಯೋಜನೆಗೆ ತಾಲ್ಲೂಕಿನ ಶಾಸಕರು ಆಯ್ಕೆ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಆಯಾ ತಾಲ್ಲೂಕಿನ ಶಾಸಕರು ಅರ್ಜಿಯನ್ನು ಪರಿಶೀಲಿಸಿ ಫಲಾನುಭವಿಗಳನ್ನು ಆಯ್ಕೆ ಮಾಡುತ್ತಾರೆ. ಆಸಕ್ತ ರೈತರು ಅರ್ಜಿಗಳನ್ನು ತಾಲ್ಲೂಕಿನ ಪಶುಪಾಲನಾ ಇಲಾಖೆಯ ಮುಖ್ಯ ಪಶುವೈದ್ಯಾಧಿಕಾರಿಗಳ ಕಚೇರಿಯಲ್ಲಿ ಪಡೆದು ನವೆಂಬರ್ 30ರೊಳಗೆ ಸಲ್ಲಿಸಬಹುದು.
ವಿವರಗಳಿಗಾಗಿ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ಹನೂರು, ಯಳಂದೂರು ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿಗಳನ್ನು ಸಂಪರ್ಕಿಸುವಂತೆ ಪಶುಪಾಲನಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.