ಮೆಗಾ ಲೋಕ್ ಅದಾಲತ್‍ನಲ್ಲಿ 85907 ಪ್ರಕರಣಗಳು ಇತ್ಯರ್ಥ : ಜಿಲ್ಲಾ ನ್ಯಾಯಾಧೀಶರಾದ ಜಿ. ಪ್ರಭಾವತಿ

ಚಾಮರಾಜನಗರ: ಸರ್ವರಿಗೂ ನ್ಯಾಯ ಒದಗಿಸುವ ಪರಿಕಲ್ಪನೆಯಡಿ ನಡೆದ ಈ ವರ್ಷದ ಮೊದಲ ಮೆಗಾ ಲೋಕ್ ಅದಾಲತ್‍ನಲ್ಲಿ ನ್ಯಾಯಾಲಯದ 2950 ಹಾಗೂ 82957 ವ್ಯಾಜ್ಯಪೂರ್ವ ಸೇರಿದಂತೆ ಒಟ್ಟು 85907 ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದು ಪ್ರಧಾನ ಜಿಲ್ಲಾ ಸೆಷೆನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಜಿ. ಪ್ರಭಾವತಿ ಅವರು ತಿಳಿಸಿದರು.

ನಗರದ ಜಿಲ್ಲಾ ನ್ಯಾಯಾಲಯದ ಎ.ಡಿ.ಆರ್. ಕಟ್ಟಡದ ಸಭಾಂಗಣದಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದಂತೆ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಿ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಹಾಗೂ ತಾಲೂಕು ಕಾನೂನು ಸೇವಾ ಸಮಿತಿಗಳಲ್ಲಿ ಮಾರ್ಚ್ 14ರಂದು ಲೋಕ್ ಅದಾಲತ್ ನಡೆಸಲಾಗಿತ್ತು ಎಂದರು.  

ಈ ಬಾರಿ ನಡೆದ ಮೆಗಾ ಲೋಕ್ ಅದಾಲತ್ ನ್ಯಾಯಾಲಯದ ಪ್ರಕರಣಗಳಲ್ಲಿ ಚಾಮರಾಜನಗರದ 661, ಯಳಂದೂರು 327, ಕೊಳ್ಳೇಗಾಲ 1270 ಹಾಗೂ ಗುಂಡ್ಲುಪೇಟೆಯ 692 ಪ್ರಕರಣಗಳು ಮತ್ತು ವ್ಯಾಜ್ಯಪೂರ್ವ ಪ್ರಕರಣಗಳಲ್ಲಿ ಚಾಮರಾಜನಗರದ 43697, ಯಳಂದೂರಿನ 8142, ಕೊಳ್ಳೇಗಾಲದ 20430 ಹಾಗೂ ಗುಂಡ್ಲುಪೇಟೆಯ 10688 ಪ್ರಕರಣಗಳು ಇತ್ಯರ್ಥಗೊಂಡಿವೆ. ನ್ಯಾಯಾಲಯದ 2950 ಪ್ರಕರಣಗಳಿಂದ ಒಟ್ಟು ರೂ. 12,89,52,857-00 ಮತ್ತು 82957 ವ್ಯಾಜ್ಯಪೂರ್ವ ಪ್ರಕರಣಗಳಿಂದ ಒಟ್ಟು 7,79,30,857 ರೂ, ಸೇರಿದಂತೆ ಒಟ್ಟು 20,68,83,714-00 ರೂ. ಗಳನ್ನು ರಿಕವರಿಯಾಗಿ ಸಂಗ್ರಹಿಸಲಾಗಿದೆ ಎಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದರು. 

ಎಲ್ಲಾ ರೀತಿಯ ಸಿವಿಲ್ ಹಾಗೂ ರಾಜಿಯಾಗುವಂತಹ ಕ್ರಿಮಿನಲ್ ಸೇರಿದಂತೆ ಇನ್ನಿತರೆ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸುವುದು ಲೋಕ್ ಅದಾಲತ್ ಪ್ರಮುಖ ಉದ್ದೇಶವಾಗಿದೆ. ಕಳೆದ ಬಾರಿ ನಡೆದ ಲೋಕ್ ಅದಾಲತ್‍ಗಿಂತ ಈ ಬಾರಿ ಹೆಚ್ಚುವರಿಯಾಗಿ 300 ಪ್ರಕರಣಗಳು ಮತ್ತು 6 ಕೋಟಿ ರೂ. ಗಳನ್ನು ಸಂಗ್ರಹಿಸಲಾಗಿದೆ. ಜಿಲ್ಲಾದ್ಯಂತ ಬಾಕಿ ಇದ್ದ ರಾಜಿಯೋಗ್ಯ ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳ ಇತ್ಯರ್ಥಕ್ಕಾಗಿ ವ್ಯಾಪಕ ಅರಿವು ಮೂಡಿಸಲಾಗಿತ್ತು. ನ್ಯಾಯಾಧೀಶರು, ವಕೀಲರು, ಸಂಧಾನಕಾರರು ಅದಾಲತ್‍ನಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಉಭಯ ಪಕ್ಷಾಕಾರರಿಗೆ ಪ್ರಕರಣಗಳ ಇತ್ಯರ್ಥಕ್ಕಾಗಿ ಸಲಹೆ ನೀಡಿದ್ದನ್ನು ಜಿಲ್ಲಾ ನ್ಯಾಯಾಧೀಶರು ಸ್ಮರಿಸಿದರು.

ನ್ಯಾಯಾಲಯಗಳಲ್ಲಿ ಸಾಕಷ್ಟು ವರ್ಷಗಳಿಂದ ಬಾಕಿ ಇದ್ದ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಬಗೆಹರಿಸಿಕೊಂಡಿರುವುದು ಜನಸಾಮಾನ್ಯರಿಗೆ ಸಮಯ, ಹಣ ಉಳಿತಾಯವಾಗಿ ಪಕ್ಷಾಕಾರರಲ್ಲಿ ಭಾಂಧವ್ಯ ಮೂಡಿದೆ. ಮೆಗಾ ಲೋಕ್ ಅದಾಲತ್‍ಗಳಲ್ಲಿ ವ್ಯಾಜ್ಯಪೂರ್ವ ಪ್ರಕರಣಗಳ ಇತ್ಯರ್ಥಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇದರಿಂದ ನ್ಯಾಯಾಲಯಗಳ ಹೊರೆಯು ತಗ್ಗಲಿದೆ. ವಿಚ್ಛೇದನ ಬಯಸುವ ಕುಟುಂಬಗಳನ್ನು ಸಂಧಾನ, ಸಲಹೆಗಳ ಮೂಲಕ ಒಂದುಗೂಡಿಸುವುದರಿಂದ ಸಂಸಾರ ಜೀವನ ಹಾಗೂ ಮಕ್ಕಳ ಭವಿಷ್ಯ ಉತ್ತಮಗೊಳ್ಳಲಿದೆ. ಅದಾಲತ್ ಯಶಸ್ಸಿಗೆ ಶ್ರಮಿಸಿದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್, ಕಂದಾಯ, ಅಬಕಾರಿ, ಕಾರ್ಮಿಕ ಇಲಾಖೆಗಳು, ತಂಬಾಕು ನಿಯಂತ್ರಣ ಘಟಕ, ಬ್ಯಾಂಕ್‍ಗಳಿಗೆ ಜಿಲ್ಲಾ ನ್ಯಾಯಾಧೀಶರಾದ ಜಿ. ಪ್ರಭಾವತಿ ಅವರು ಧನ್ಯವಾದಗಳನ್ನು ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿಗಳಾದ ಈಶ್ವರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ರಾಮಸಮುದ್ರ ಪುಟ್ಟಸ್ವಾಮಿ ಅವರು ಪ್ರತಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *