ಸಹಕಾರಿ ಸಂಘಗಳ ಬಡ್ಡಿ ಮನ್ನಾ ಘೋಷಣೆ : ಪಿಎಲ್‍ಡಿ ಬ್ಯಾಂಕ್ ರಾಜ್ಯಾಧ್ಯಕ್ಷ ಕೆ. ಷಡಕ್ಷರಿ ಅವರಿಗೆ ಅಭಿನಂದನೆ

ಬಡ್ಡಿ ಮನ್ನಾ ಯೋಜನೆ ಸದ್ಬಳಕೆಗೆ ಎನ್‍ರಿಚ್ ಮಹದೇವಸ್ವಾಮಿ ಮನವಿ
ಚಾಮರಾಜನಗರ: ಸಹಕಾರ ಬ್ಯಾಂಕ್‍ಗಳಲ್ಲಿ ದೀರ್ಘಾವಧಿ ಹಾಗು ಮಧ್ಯಮಾವಧಿ ಸಾಲದ ಪಡೆದಿರುವ ರೈತರ ಬಡ್ಡಿ ಮನ್ನಾ ಯೋಜನೆಯನ್ನು ಜಾರಿ ಮಾಡಲು ಪ್ರಮುಖ ಪಾತ್ರ ವಹಿಸಿದ್ದ ಕಾರಣಕರ್ತರಾದ ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್‍ನ ಅಧ್ಯಕ್ಷರು ಹಾಗೂ ತಿಪಟೂರು ಕ್ಷೇತ್ರದ ಶಾಸಕ ಕೆ. ಷಡಕ್ಷರಿ ಅವರನ್ನು ಚಾ.ನಗರ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷರು ಹಾಗೂ ಆಡಳಿತ ಮಂಡಲಿಯವರು ಬೆಂಗಳೂರಿನಲ್ಲಿ ಸನ್ಮಾನಿಸಿದರು.

ಬೆಂಗಳೂರಿನ ಭೂ ಅಭಿವೃದ್ದಿ ಬ್ಯಾಂಕ್‍ನಲ್ಲಿರುವ ಅವರ ಕಚೇರಿಯಲ್ಲಿ ಚಾ.ನಗರ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಎನ್‍ರಿಚ್ ಮಹದೇವಸ್ವಾಮಿ ಹಾಗೂ ನಿರ್ದೇಶಕರು ರಾಜ್ಯಾಧ್ಯಕ್ಷರಿಗೆ ರೈತರ ಪರವಾದ ಕಾಳಜಿ ಹಾಗು ಪಿಎಲ್‍ಡಿ ಬ್ಯಾಂಕ್ ಅಭಿವೃದ್ದಿಗಾಗಿ ಕೈಗೊಂಡಿರುವ ಕಾರ್ಯಕ್ರಮಗಳ ಕುರಿತು ಗುಣಗಾನ ಮಾಡಿ, ಮೈಸೂರು ಪೇಟಾ ತೊಡಿಸಿ, ಶಾಲು, ಹಾರ ಹಾಕಿ ನೆನಪಿನ ಕಾಣಿಕೆಯನ್ನು ನೀಡಿ ಅಭಿನಂದಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅಧ್ಯಕ್ಷರಾದ ಕೆ. ಷಡಕ್ಷರಿ ಅವರು ರಾಜ್ಯ ಸರ್ಕಾರ ಬರಗಾಲದ ಹಿನ್ನೆಲೆಯಲ್ಲಿ ರೈತರು ಸಾಲ ಹಾಗು ಬಡ್ಡಿಯನ್ನು ಮರು ಪಾವತಿ ಮಾಡಲು ಕಷ್ಟವಾಗುತ್ತಿದೆ ಎಂಬುವುದನ್ನು ಮನಗಂಡು, ನಮ್ಮೆಲ್ಲರ ಒತ್ತಾಯಕ್ಕೆ ಮಣಿದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಹಕಾರ ಸಚಿವ ಕೆ. ರಾಜಣ್ಣ ಅವರು ಸಹಕಾರ ಸಂಘಗಳಲ್ಲಿ ರೈತರು ಪಡೆದಿರುವ ಸಾಲವನ್ನು ಮರು ಪಾವತಿ ಮಾಡಿದರೆ ಬಡ್ಡಿ ಮನ್ನಾಯೋಜನೆಯನ್ನು ಘೋಷಣೆ ಮಾಡಿದ್ದಾರೆ. ಇದರಿಂದ ಪಿಎಲ್‍ಡಿ ಬ್ಯಾಂಕ್‍ಗಳಿಗೆ ಹೆಚ್ಚಿನ ಲಾಭವಿದೆ. ರೈತರು ಸಾಲ ಮರುಪಾವತಿ ಮಾಡಿ ಬಡ್ಡಿ ಮನ್ನಾವನ್ನು ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಎನ್‍ರಿಚ್ ಮಹದೇವಸ್ವಾಮಿ ಸನ್ಮಾನಿಸಿ ಮಾತನಾಡಿ, ರಾಜ್ಯ ಸರ್ಕಾರ ರೈತರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಉತ್ತಮ ಹೆಜ್ಜೆ ಇದಾಗಿದೆ. ಪಿಎಲ್‍ಡಿ ಬ್ಯಾಂಕ್‍ಗಳಲ್ಲಿ ರೈತರು ಸಾಲ ಪಡೆದುಕೊಂಡು ಸುಸ್ತಿಯಾಗಿದ್ದು, ಮರು ಪಾವತಿ ಮಾಡಲು ತೊಂದರೆಯಾಗಿತ್ತು. ಈಗ ಬಡ್ಡಿ ಮನ್ನಾ ಯೋಜನೆ ಘೋಷಣೆಯನ್ನು ರೈತರು ಸದ್ಬಳಕೆ ಮಾಡಿಕೊಂಡು ಅಸಲು ಪಾವತಿ ಮಾಡಿ, ಮತ್ತೇ ಶೇ. 3 ರ ಬಡ್ಡಿ ದರದಲ್ಲಿ ಸಾಲ ಪಡೆದುಕೊಳ್ಳಲು ಅನುಕೂಲವಾಗುವಂತೆ ರಾಜ್ಯಾದ್ಯಕ್ಷರಾದ ಷಡಕ್ಷರಿ ಅವರು ಸಹಕಾರ ಸಂಘಗಳ ಬಡ್ಡಿ ಮನ್ನಾ ಯೋಜನೆಯನ್ನು ಜಾರಿಗೊಳಿಸಿದ್ದಾರೆ. ಇದರಿಂದ ಪಿಎಲ್‍ಡಿ ಬ್ಯಾಂಕ್‍ಗಳು ಚೇತರಿಕೆ ಕಾಣಲು ಸಾಧ್ಯವಾಗಿದೆ ಎಂದು ಪ್ರಶಂಸಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಬ್ಯಾಂಕ್‍ನ ನಿರ್ದೇಶಕ ಮಹದೇವಣ್ಣ, ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಚ್.ಎಂ. ಬಸವಣ್ಣ, ನಿರ್ದೇಶಕ ಮಹದೇವಪ್ಪ, ಬಿಸಲವಾಡಿ ಕುಮಾರ್, ಗುಂಡ್ಲುಪೇಟೆ ಪಿಎಲ್‍ಡಿಬ್ಯಾಂಕ್‍ನ ಅಧ್ಯಕ್ಷ ಮಹೇಶ್, ವಿವಿಧ ತಾಲೂಕುಗಳ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷರು ಹಾಗೂ ನಿರ್ದೇಶಕರು ಉಪಸ್ಥಿತಿರಿದ್ದರು.

Leave a Reply

Your email address will not be published. Required fields are marked *