ಚಾಮರಾಜನಗರ: ಜಿಲ್ಲೆಯ ಚಿಕ್ಕಲ್ಲೂರಿನಲ್ಲಿ ನಡೆಯಲಿರುವ ಜಾತ್ರಾ ಮಹೋತ್ಸವಕ್ಕೆ ಬರುವ ಭಕ್ತಾಧಿಗಳಿಗೆ ಅಗತ್ಯ ಮೂಲ ಸೌಕರ್ಯವನ್ನು ಸಮರ್ಪಕವಾಗಿ ಕಲ್ಪಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಚಿಕ್ಕಲ್ಲೂರು ಜಾತ್ರಾ ಸಂಬಂಧ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚಿಕ್ಕಲ್ಲೂರು ಕ್ಷೇತ್ರದಲ್ಲಿ ಜನವರಿ 25 ರಿಂದ ನಡೆಯಲಿರುವ ಘನನೀಲ ಸಿದ್ದಾಪ್ಪಾಜಿ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಕುಡಿಯುವ ನೀರು, ಶೌಚಾಲಯ, ವಾಹನ ನಿಲುಗಡೆ ಸೇರಿದಂತೆ ಮೂಲ ಸೌಲಭ್ಯಗಳನ್ನು ಕೊರತೆಯಾಗದಂತೆ ಒದಗಿಸಬೇಕು. ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಅಧಿಕಾರಿಗಳು ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಹೆಚ್ಚಿನ ಭಕ್ತಾಧಿಗಳು ಜಾತ್ರೆಗೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಕೆಎಸ್.ಆರ್.ಟಿಸಿ ಯಿಂದ ವಿವಿಧ ಕಡೆ ಹೆಚ್ಚು ಸಂಖ್ಯೆಯಲ್ಲಿ ಬಸ್ಸುಗಳನ್ನು ನಿಯೋಜಿಸಬೇಕು. ಕ್ಷೇತ್ರದಲ್ಲಿ ನಿಗದಿತ ಸ್ಥಳದಲ್ಲಿ ಬಸ್ ನಿಲುಗಡೆಗೆ ಸ್ಥಳ ಗೊತ್ತು ಮಾಡಬೇಕು. ಸಂಚಾರ ಮಾರ್ಗಗಳ ಬಗ್ಗೆ ಮೊದಲೇ ಮಾಹಿತಿ ನೀಡಬೇಕು. ಅಗತ್ಯವಿರುವೆಡೆ ಸೂಚನಾ ಫಲಕಗಳನ್ನು ಅಳವಡಿಸಬೇಕು. ಇತರೆ ವಾಹನಗಳ ಸುಗಮ ಸಂಚಾರಕ್ಕೂ ಅಗತ್ಯ ಕ್ರಮ ವಹಿಸಬೇಕು ಎಂದರು.
ಕ್ಷೇತ್ರ ಸಂಪರ್ಕಿಸುವ ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ಆರಂಭಿಸಬೇಕು. ಗುಣಮಟ್ಟದ ಕೆಲಸ ಆಗಬೇಕು. ಅಧಿಕಾರಿಗಳು ಖುದ್ದು ಸ್ಥಳದಲ್ಲಿದ್ದು ಪರಿಶೀಲಿಸಬೇಕು. ಇತರೆ ಕೆಲಸಗಳಿಗೂ ಆದ್ಯತೆ ನೀಡಿ ಜಾತ್ರೆಗೆ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಜಾತ್ರಾ ಸಮಯದಲ್ಲಿ ಸ್ವಚ್ಚತೆಗೆ ವಿಶೇಷ ಗಮನ ನೀಡಿ, ಪ್ರತಿ ದಿನವು ನೈರ್ಮಲ್ಯ ಕಾಪಾಡಿ. ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಿ. ವಿಶೇಷವಾಗಿ ಪಂಚಾಯತ್ ಅಧಿಕಾರಿಗಳು ಸುವ್ಯವಸ್ಥಿತವಾಗಿ ಸ್ವಚ್ಚತಾ ಕಾರ್ಯಕ್ಕೆ ಸಕಲ ವ್ಯವಸ್ಥೆಯನ್ನು ಮಾಡಬೇಕು ಎಂದರು.
ಹೆಚ್ಚು ಜನರು ಸೇರುವುದರಿಂದ ಆರೋಗ್ಯದ ಹಿತದೃಷ್ಠಿಯಿಂದ ಮಾಸ್ಕ್ ಗಳನ್ನು ಧರಿಸುವುದು ಒಳಿತು. ಆರೋಗ್ಯ ಸಂಬಂಧಿ ಮುಂಜಾಗ್ರತಾ ಕ್ರಮಗಳನ್ನು ಆರೋಗ್ಯ ಇಲಾಖೆ ನೋಡಿಕೊಳ್ಳಬೇಕಿದೆ. ಕ್ಷೇತ್ರದಲ್ಲಿಯೇ ಆರೋಗ್ಯ ಕೇಂದ್ರ ತೆರೆಯಬೇಕು. ವಿದ್ಯುತ್ ಸರಬರಾಜು ನಿಗಮದ ಅಧಿಕಾರಿಗಳು ಜಾತ್ರೆ ಆವರಣದಲ್ಲಿ ಯಾವುದೇ ವಿದ್ಯುತ್ ಅವಘಡಗಳಿಗೆ ಅವಕಾಶವಾಗದಂತೆ ಮುನ್ನೆಚ್ಚರಿಕೆ ಕ್ರಮಗಳಿಗೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಭಕ್ತಾಧಿಗಳಿಗೆ ಚಿಕ್ಕಲ್ಲೂರು ಮಠದ ವತಿಯಿಂದಲೂ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಬೇಕು. ಪೊಲೀಸ್ ಬಂದೋ ಬಸ್ತ್ ನಿರ್ವಹಣೆಗಾಗಿ ಚೆಕ್‍ಪೋಸ್ಟ್ ಗಳ ಸ್ಥಾಪನೆ, ಬ್ಯಾರಿಕೇಡ್‍ಗಳ ಅಳವಡಿಕೆ ಮಾಡಬೇಕು. ಜಾತ್ರಾ ಸಂಬಂಧ ನೀಡಲಾಗುವ ಸೂಚನೆ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ತಹಶೀಲ್ದಾರ್ ಮಂಜುಳ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿ ಶ್ರೀನಿವಾಸ್, ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಚಿಕ್ಕಲ್ಲೂರು ಮಠದ ಜ್ಞಾನಾನಂದ ಚನ್ನರಾಜೇ ಅರಸ್, ಬಿ.ಪಿ ಭರತರಾಜೇ ಅರಸ್, ಸನ್ಮತಿ ಅರಸ್, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.