ಬುಡಕಟ್ಟು ಜನರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಸಿವಿಲ್ ನ್ಯಾಯಾಧೀಶರಾದ ಈಶ್ವರ ಸಲಹೆ

ಚಾಮರಾಜನಗರ: ಬದಲಾದ ಜೀವನಶೈಲಿಯಿಂದ ಬುಡಕಟ್ಟು ಜನರಲ್ಲಿ ಆರೋಗ್ಯ ಸಮಸ್ಯೆಗಳು ಕಂಡುಬರುತ್ತಿದ್ದು, ಅದಿವಾಸಿಗಳು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಈಶ್ವರ ಅವರು ಸಲಹೆ ಮಾಡಿದರು.

   ನಗರದ ವರನಟ ಡಾ. ರಾಜ್‍ಕುಮಾರ್ ಜಿಲ್ಲಾ ರಂಗಮಂದಿರದಲ್ಲಿಂದು ಮೈಸೂರಿನ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ, ಬೆಂಗಳೂರಿನ ಇನ್ಸಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಹಾಗೂ ಬಿಳಿಗಿರಿರಂಗನ ಬೆಟ್ಟದ ಹೊಸಪೋಡು ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ‘ಜಿಲ್ಲಾ ಆದಿವಾಸಿ ಆರೋಗ್ಯ ಸಂವಾದ ಕಾರ್ಯಾಗಾರ’ದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

   ಬುಡಕಟ್ಟು ಜನರು ಸಮಾಜದ ನಾಗರಿಕರಾಗಿದ್ದು, ಅವರಿಗೂ ಮೂಲಭೂತ ಹಕ್ಕುಗಳಿವೆ. ಸಂವಿಧಾನದ ಭದ್ರತೆ ಇದೆ. ದೌರ್ಜನ್ಯಗಳಿಂದ ರಕ್ಷಿಸಿಕೊಳ್ಳುವ ಹಕ್ಕು ಅವಕಾಶಗಳು ಇವೆ. ಅದಿವಾಸಿಗಳಿಗೆ ಉತ್ತಮ ಆರೋಗ್ಯ ಸೌಲಭ್ಯಗಳನ್ನು ಒದಗಿಸಬೇಕಾಗಿರುವುದು ಸರ್ಕಾರದ ಆದ್ಯತೆಯಾಗಿದೆ. ಆದರೆ ಆದಿವಾಸಿಗಳು ಆಸ್ಪತ್ರೆಗಳಿಗೆ ದಾಖಲಾಗುವುದು ಕಡಿಮೆಯಾಗಿದ್ದು, ಆರೋಗ್ಯ ಸಮಸ್ಯೆಗೆ ಸಾಂಪ್ರಾದಾಯಿಕ ಔಷಧಿಗಳನ್ನು ಅವಲಂಬಿಸುವುದು ವಾಡಿಕೆ. ಇದು ಸಲ್ಲದು. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.

   ಮಕ್ಕಳಿಗೆ ಬಾಲ್ಯವಿವಾಹ ಬೇಡ, ಉತ್ತಮ ಶಿಕ್ಷಣ ಕೊಡಿಸಿ ಉನ್ನತ ಹುದ್ದೆ ಅಲಂಕರಿಸಲು ಬುಡಕಟ್ಟು ಜನಾಂಗದ ಪೋಷಕರು ನೆರವಾಗಬೇಕು. ಹೆಣ್ಣುಮಕ್ಕಳಿಗೆ 18 ವರ್ಷ ತುಂಬಿದ ಬಳಿಕವಷ್ಟೆ ದೈಹಿಕ ಹಾಗೂ ಮಾನಸಿಕ ಸದೃಢರಾದ ನಂತರ ಮದುವೆ ಮಾಡುವ ಪರಿಪಾಠ ಬರಬೇಕು. ತಪ್ಪಿದರೆ ಆರೋಗ್ಯ ಸಮಸ್ಯೆಗಳು ಉದ್ಭವಿಸಲಿವೆ. ಹೆಣ್ಣುಮಕ್ಕಳ ಬಗ್ಗೆ ತಾತ್ಸಾರ ಭಾವನೆ ಸಲ್ಲದು. ಇತ್ತೀಚೆಗೆ ಹೆಚ್ಚಾಗುತ್ತಿರುವ ಫೋಕ್ಸೋ ಪ್ರಕರಣಗಳಿಂದ ಗಂಡು ಹಾಗೂ ಹೆಣ್ಣು ಮಕ್ಕಳ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಬುಡಕಟ್ಟು ಜನರು ಕಾನೂನಿನ ಅರಿವು ಪಡೆದು ಜಾಗೃತರಾಗಬೇಕು. ಮಕ್ಕಳ ಆರೋಗ್ಯ, ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವಂತೆ ಸಿವಿಲ್ ನ್ಯಾಯಾಧೀಶರಾದ ಈಶ್ವರ ಅವರು ಸಲಹೆ ಮಾಡಿದರು.

   ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಶ್ರೀರೂಪ ಅವರು ಕಾಡಿನ ಒಡನಾಡಿಗಳಾಗಿರುವ ಬುಡಕಟ್ಟು ಜನರು ಮುಗ್ದರು. ಅರಣ್ಯದಲ್ಲಿ ದೊರೆಯುವ ಕಿರು ಉತ್ಪನ್ನಗಳನ್ನು ಸಂಗ್ರಹಿಸುವ ಅದಿವಾಸಿಗಳು ಮೊದಮೊದಲು ಹೆಚ್ಚು ಸದೃಢರಾಗಿದ್ದರೂ ಸಹ ಬಳಿಕ ತಾಂತ್ರಿಕತೆ ಬೆಳೆದಂತೆ ಅವರ ಜೀವನಶೈಲಿಯೂ ಬದಲಾಗುತ್ತಿದೆ. ದುಶ್ಚಟ ಹಾಗೂ ಇನ್ನಿತರೆ ಕಾರಣಗಳಿಂದ ಆರೋಗ್ಯದಲ್ಲಿ ಏರುಪೇರಾಗುತ್ತಿದೆ. ಸರ್ಕಾರವು ಕಾಲಕಾಲಕ್ಕೆ ಬುಡಕಟ್ಟು ಜನರ ಆರೋಗ್ಯ ತಪಾಸಣೆ ನಡೆಸಿ ಅವಶ್ಯ ಆರೋಗ್ಯ ಸೌಲಭ್ಯಗಳನ್ನು ಒದಗಿಸುತ್ತಿದೆ. ಸೌಲಭ್ಯಗಳ ಸದ್ಭಳಕೆಯಾಗಬೇಕು. ಆದಿವಾಸಿ ಜನರು ಮಕ್ಕಳಿಗೆ ಉತ್ತಮ ಆರೋಗ್ಯ ಹಾಗೂ ಶಿಕ್ಷಣ ನೀಡಬೇಕು. ಆರೋಗ್ಯ ಸಂವಾದದಲ್ಲಿ ಪಾಲ್ಗೊಂಡು ಯಾವುದೇ ಸಮಸ್ಯೆಗಳಿದ್ದರೂ ಪರಿಹರಿಸಿಕೊಳ್ಳಬೇಕು ಎಂದರು.

   ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಡಾ. ಸಿ. ಮಾದೇಗೌಡ ಅವರು ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿರುವ ಆದಿವಾಸಿಗಳ ಸಮಸ್ಯೆಗಳನ್ನು ಪ್ರಸ್ತಾಪಿಸಿ ಬುಡಕಟ್ಟು ಜನರ ಕುಂದುಕೊರತೆಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

   ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ಯು. ರಂಗೇಗೌಡ ಹಾಗೂ ಬೆಂಗಳೂರಿನ ಇನ್ಸಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ನಿರ್ದೇಶಕರಾದ ಎನ್.ಎಸ್. ಪ್ರಶಾಂತ್ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು.

   ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಚ್.ಎಸ್. ಬಿಂದ್ಯಾ, ಸೋಲಿಗರ ಅಭಿವೃದ್ಧಿ ಸಂಘದ ರಾಜ್ಯಧ್ಯಕ್ಷರಾದ ಎಂ. ಜಡೇಸ್ವಾಮಿ, ವಿವಿಧ ತಾಲೂಕುಗಳ ಸೋಲಿಗರ ಸಂಘದ ಅಧ್ಯಕ್ಷರಾದ ದೊಡ್ಡಸಿದ್ದಯ್ಯ, ಬೇದಮ್ಮ, ಮಾಧು, ಶಿವಣ್ಣ, ಅರಣ್ಯ ಹಕ್ಕು ಸಮಿತಿ ತಾಲೂಕು ಸದಸ್ಯರಾದ ಕೇತಮ್ಮ, ಇತರೆ ಗಿರಿಜನ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

   ವೇದಿಕೆ ಕಾರ್ಯಕ್ರಮದ ಬಳಿಕ ನಡೆದ ಮೊದಲನೇ ಗೋಷ್ಠಿಯಲ್ಲಿ ಆರೋಗ್ಯ ಮತ್ತು ಅರಣ್ಯ ಹಕ್ಕುಗಳು, 2ನೇ ಗೋಷ್ಠಿಯಲ್ಲಿ ಮಹಿಳೆ ಮತ್ತು ಆರೋಗ್ಯ ಹಾಗೂ ಪ್ರಾಥಮಿಕ ಮತ್ತು ತುರ್ತು ಆರೋಗ್ಯ ಸೇವೆಗಳು, 3ನೇ ಗೋಷ್ಠಿಯಲ್ಲಿ ಬಾಲ್ಯವಿವಾಹ ಮತ್ತು ಫೋಕ್ಸೋ ಪ್ರಕರಣಗಳು ಮತ್ತು ದುಶ್ಚಟಗಳ ಸಮಸ್ಯೆ ಮತ್ತು ಪರಿಹಾರಗಳು ಕುರಿತ ವಿಷಯಗಳು ಚರ್ಚೆಯಾದವು. ಗೋಷ್ಠಿಯಲ್ಲಿ ವಿವಿಧ ಗಿರಿಜನ ಮುಖಂಡರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *