ಚಾಮರಾಜನಗರ: ಜಿಲ್ಲಾಧಿಕಾರಿ ಶ್ರೀರೂಪ ಅವರು ಇಂದು ಬೆಳಿಗ್ಗೆಯೇ ನಗರದ ಸೋಮವಾರಪೇಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಸ್ವಚ್ಚತೆ ಕುರಿತು ಖಡಕ್ ಸೂಚನೆ ನೀಡಿದ ಬೆನ್ನಲ್ಲೇ ಕೆಲವೇ ಗಂಟೆಗಳಲ್ಲಿ ನಗರಸಭೆ ಸಿಬ್ಬಂದಿ ಸೋಮವಾರಪೇಟೆಯ ಮುಖ್ಯ ರಸ್ತೆ ಹಾಗೂ ಇನ್ನಿತರ ಕಡೆ ಸ್ವಚ್ಚಗೊಳಿಸಿದ್ದಾರೆ.
ಜಿಲ್ಲಾಧಿಕಾರಿಯವರು ಬೆಳಿಗ್ಗೆಯೇ ಸೋಮವಾರಪೇಟೆಯ ಮುಖ್ಯ ರಸ್ತೆ ಹಾಗೂ ಸೋಮವಾರಪೇಟೆಯ ಬಡಾವಣೆ ವೀಕ್ಷಿಸಿ ಅಲ್ಲಿ ಸುರಿದಿದ್ದ ಕಸದ ರಾಶಿ ಕಂಡು ಕೂಡಲೇ ತೆರವುಗೊಳಿಸುವಂತೆ ನಗರಸಭೆ ಸಿಬ್ಬಂದಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದರು. ಪರಿಣಾಮ ನಗರಸಭೆ ಸಿಬ್ಬಂದಿ ತೀವ್ರವಾಗಿ ತೊಡಗಿಕೊಂಡು ಸೋಮವಾರಪೇಟೆಯ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಬಿದ್ದಿದ್ದ ಕಸವನ್ನು ತೆರವುಗೊಳಿಸಿದ್ದಾರೆ.
ಒಂದನೇ ವಾರ್ಡಿನ ಸೋಮವಾರಪೇಟೆ ಬಡಾವಣೆಯ ಬೀದಿಯನ್ನು ಸ್ವಚ್ಚಗೊಳಿಸಿದ್ದಾರೆ. ಸೋಮವಾರಪೇಟೆ ಮುಖ್ಯರಸ್ತೆಯಿಂದ ಪ್ರವಾಸಿಮಂದಿರದ ವರೆಗಿನ ರಸ್ತೆ ಬದಿಯನ್ನು ಸ್ವಚ್ಚಗೊಳಿಸಿ ಕಸವನ್ನು ತೆರವು ಮಾಡಲಾಗಿದೆ. ಜಿಲ್ಲಾಧಿಕಾರಿ ಶ್ರೀರೂಪ ಅವರ ದಿಢೀರ್ ಭೇಟಿ ಹಾಗೂ ಸೂಚನೆ ಪರಿಣಾಮದ ಫಲವಾಗಿ ಕೆಲವೇ ಗಂಟೆಗಳ ಅವಧಿಯಲ್ಲಿ ಸೋಮವಾರಪೇಟೆ ರಸ್ತೆ ಹಾಗೂ ಸುತ್ತಮುತ್ತಲ ಪ್ರದೇಶಗಳು ಸ್ವಚ್ಚವಾಗಿವೆ.
Related