
ಗಡಿ ಜಿಲ್ಲೆ ಚಾಮರಾಜನಗರ ಜನಪದ, ಸಾಂಸ್ಕೃತಿಕ ಮೌಲ್ಯದ, ಐತಿಹಾಸಿಕ ಮತ್ತು ಪೌರಾಣಿಕ ವಿಶ್ವ ಮಾನ್ಯತೆಯನ್ನು ಗಳಿಸಿದ ವಿಶೇಷ ಜಿಲ್ಲೆ.
ಚಾಮರಾಜನಗರ ಜನ ಮುಗ್ದರು,ಸತ್ಯವಂತರು ಶೀಲವಂತರು, ಸಜ್ಜನರು, ಶಕ್ತಿಶಾಲಿಗಳು, ಸಾಹಿಸಿಗರು, ಧೈರ್ಯವಂತರು, ಪ್ರಕೃತಿ ಪ್ರಿಯರು, ಪ್ರಾಣಿ ಪ್ರಿಯರು ಮಾನವೀಯ ಮೌಲ್ಯದ ಚೇತನರು, ಗಡಿ ಜಿಲ್ಲೆಯ ಮಹಾಜನರು.

ಚಾಮರಾಜನಗರದ ಹೆಸರು ಮೈಸೂರು ಒಡೆಯರ್ ಸಂಸ್ಥಾನದ ಚಾಮರಾಜ ಒಡೆಯರ್ ಅವರ ಜನನದ ನೆನಪಿನಲ್ಲಿ ಜನಪ್ರಿಯವಾಗಿರುವ ಜಿಲ್ಲೆ.
ಅರಿ ಕೊಠಾರ ವಾಗಿದ್ದ ಸಣ್ಣ ಗ್ರಾಮ. ಮೈಸೂರು ಸಂಸ್ಥಾನದ ಚಾಮರಾಜ ಒಡೆಯರ್ ಅವರು ಜನಿಸಿದ ಪರಿಣಾಮವಾಗಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು 200 ವರ್ಷಗಳ ಹಿಂದೆ ಶೃಂಗೇರಿ ಗುರುಗಳ ಆಶೀರ್ವಾದದಿಂದ ಶ್ರೀ ಚಾಮರಾಜೇಶ್ವರ ದೇವಸ್ಥಾನವನ್ನು ನಿರ್ಮಿಸಿ ನಗರವನ್ನು ವಿಸ್ತರಿಸಿ ಇಂದು ಜಿಲ್ಲಾ ಸ್ವರೂಪವಾಗಿ ಜಗತ್ತಿಗೆ ಬೆಳಗುತ್ತಿರುವ ಚಾಮರಾಜನಗರ ಶ್ರೀಮಲೆ ಮಹದೇಶ್ವರರು, ಮಂಟೇಸ್ವಾಮಿ, ಸಿದ್ದಪ್ಪಾಜಿ, ಶಂಕರ ದೇವರು, ನೆಲಸಿ ಸಂಚರಿಸಿ ನೆಲವನ್ನು, ಮನವನ್ನು ಶುದ್ಧಗೊಳಿಸಿ ಜಿಲ್ಲೆಯಲ್ಲಿ ನೆಲೆಯೂರಿ ಭವ್ಯ ಪರಂಪರೆಯನ್ನು ನೀಡಿ ಗಡಿ ಜನರ ಜೀವನವನ್ನು ಸಂತೃಪ್ತಗೊಳಿಸಿದ್ದಾರೆ.
ಇಡೀ ವಿಶ್ವದಲ್ಲಿ ವಿಶೇಷವಾದ ಅರಣ್ಯ ಪ್ರದೇಶವನ್ನು, ವಾತಾವರಣವನ್ನು ಹೊಂದಿ ನಗರೀಕರಣದ ಸೋಂಕಿಗೆ ಬಲಿಯಾಗದೆ, ಅಚ್ಚಹಸಿರಿನಿಂದ ಕಂಗೊಳಿಸುತ್ತಿರುವ ಚಾಮರಾಜನಗರ ಇಂದಿಗೂ ಹಾಡಿಗಳು, ಪೋಡುಗಳು, ಜನಪದ ಮೌಲ್ಯಗಳು, ಸಾಂಸ್ಕೃತಿಕ ಚಿಂತನೆಗಳು, ಪೌರಾಣಿಕ,ಸಂಪ್ರದಾಯ, ನಡೆ-ನುಡಿ, ಆಚಾರ ವಿಚಾರಗಳು, ಹಬ್ಬ, ಉತ್ಸವಗಳು, ಕ್ರೀಡೆಗಳು, ಉಳಿದು ಬೆಳೆದು ನಗರವನ್ನು ವಿಶ್ವಮಾನ್ಯಗೊಳಿಸಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ವಿವಿಧ ಧರ್ಮಗಳು, ಭಾಷೆಗಳು, ಚಿಂತನೆಗಳು, ಏಕತಾಭಾವದಿಂದ, ಸಮೃದ್ಧಿ ಜೀವನವನ್ನು ಕಟ್ಟಿಕೊಂಡು, ಸದಾ ಕಾಲ ಹಸಿರಾಗಿ, ಉಸಿರಾಗಿ,ಸಂತೋಷ ಸಂಭ್ರಮದಿಂದ ಜೀವನ ಸಾಗುತ್ತಿದೆ.
ಗಡಿ ಭಾಗವಾದ ಚಾಮರಾಜನಗರ ಕೇರಳ ಮತ್ತು ತಮಿಳುನಾಡಿನ ಸರಹದ್ದಿನ ವಿಶೇಷವಾದ ಪ್ರಾಂತ್ಯ. ತನ್ನದೇ ಆದ ವಿಶೇಷ ಭಾಷೆ, ಪೌರಾಣಿಕ ಮತ್ತು ಇತಿಹಾಸ ಪ್ರಸಿದ್ಧವಾದ ಚಾಮರಾಜನಗರ ಹಲವು ದಾಖಲೆಗಳನ್ನು ಹೊಂದಿದೆ.
ಅಕ್ಟೋಬರ್ 24 ಮತ್ತು 25ರ ಶನಿವಾರ ಮತ್ತು ಭಾನುವಾರ ಚಾಮರಾಜನಗರದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಬೌದ್ಧಮಹಾ ಸಮ್ಮೇಳನ 2026 ವಿಶ್ವ ದಾಖಲೆಯಾಗಿ ಚಾಮರಾಜನಗರದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯುವ ದಿನವಾಗಿದೆ.ಡಾ. ಬಿಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಚಾಮರಾಜನಗರದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಬಹುದೊಡ್ಡ ವಿಶಾಲವಾದ ವೇದಿಕೆಯನ್ನು ಸ್ಥಾಪಿಸಿ ಸರ್ವಜನರ ಹಿತಕ್ಕಾಗಿ ಸರ್ವ ಜನರ ಶುಭ ಹಾರೈಕೆಯೊಂದಿಗೆ ಅಂತಾರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನ ನಡೆಯುತ್ತಿರುವುದು ಚಾಮರಾಜನಗರದ ಜಿಲ್ಲೆಯ ಕೀರ್ತಿಯನ್ನು ವಿಶ್ವವಿಖ್ಯಾತ ಗೊಳಿಸುತ್ತಿರುವುದು ನಮಗೆಲ್ಲರಿಗೂ ಸಂತೋಷ ಸಂಭ್ರಮ, ಆನಂದ,ಹೆಮ್ಮೆ ಮತ್ತು ಗೌರವ ಸ್ಥಾನವನ್ನು ನೀಡುತ್ತಿದೆ.
ಗೌತಮ ಬುದ್ಧ ಬೌದ್ಧ ಧರ್ಮದ ಸ್ಥಾಪಕರು.ಸಾ ಶ ಪೂ 563 ರಲ್ಲಿ ನೇಪಾಳದ ಲುಂಬಿನಿ ವನ ದಲ್ಲಿ ಜನಿಸಿದರು. ತಂದೆ ರಾಜ ಶುದ್ಧೋದನ, ತಾಯಿ ರಾಣಿ ಮಾಯಾದೇವಿ. ಇವನ ಮೊದಲ ಹೆಸರು ಸಿದ್ದಾರ್ಥ.
ಸಿದ್ಧಾರ್ಥನನ್ನು ಅತ್ಯಂತ ಸುಖಭೋಗದಲ್ಲಿ ಬೆಳೆಸಲಾಯಿತು . 16ನೇ ವಯಸ್ಸಿಗೆ ಯಶೋಧರಾ ಳೊಂದಿಗೆ ವಿವಾಹ ಮಾಡಿ ನಂತರ ಜನಿಸಿದ ಗಂಡು ಮಗುವಿಗೆ ರಾಹುಲ ಎಂಬ ಹೆಸರನ್ನು ಇಡಲಾಯಿತು.
ಜಾತಕ ಕಥೆಗಳ ಪ್ರಕಾರ ರಾಜನ ಸಕಲ ವೈಭವ ಕೀರ್ತಿಯನ್ನು ಹೊಂದಬಹುದಾಗಿದ್ದ ಸಿದ್ದಾರ್ಥನು ತನ್ನ ಜೀವನದಲ್ಲಿ ಕಂಡ ಹಲವಾರು ಗಾಢವಾದ ದೃಶ್ಯಗಳನ್ನು ನೋಡಿ ಪ್ರಪಂಚಿಕ ಜೀವನವನ್ನು ತ್ಯಜಿಸಲು ನಿರ್ಧರಿಸಿ ದುಃಖಕ್ಕೆ ಮೂಲ ಕಾರಣವನ್ನು ಕಂಡುಹಿಡಿಯಲು ಇಡೀ ರಾಜ್ಯ, ರಾಜತ್ವ ಮತ್ತು ಕುಟುಂಬವನ್ನು ತ್ಯಜಿಸಿ ಮಹಾಪರಿತ್ಯಾಗಿ ಹೊರಬಂದು ತಪಸ್ಸಿನಿಂದ ಜ್ಞಾನೋದಯ ಸಾಧ್ಯವಿಲ್ಲವೆಂದು ಅರಿತು ಅಲೆಮಾರಿ ಸನ್ಯಾಸ ಜೀವನವನ್ನು ನಡೆಸಿ ಅಂತಿಮವಾಗಿ ಗಯಾದ ಅರಳಿಮರ ಒಂದರ ಕೆಳಗೆ ಜ್ಞಾನೋದಯವನ್ನು ಹೊಂದಿ ಬುದ್ಧನಾಗಿ ಜನಪ್ರಿಯ ನಾದನು. ಬುದ್ಧನಂದರೆ ಜ್ಞಾನ ಪಡೆದವನು ಎಂದರ್ಥ. ಬುದ್ಧನಿಗೆ ತಥಾ ಗತ ಎಂದು ಕರೆಯಲಾಯಿತು ತಥಾ ಗತ ಎಂದರೆ ಸತ್ಯವನ್ನು ಅರಿತವನು ಎಂದರ್ಥ
ಬುದ್ಧನ 4 ಮೂಲ ತತ್ವಗಳು, ಅಷ್ಟಾಂಗ ಮಾರ್ಗಗಳು ಸ್ಪೂರ್ತಿಯನ್ನು, ಶಕ್ತಿಯನ್ನು, ನೆಮ್ಮದಿಯನ್ನು ಉಂಟುಮಾಡುತ್ತದೆ. ಸರಳವಾದ ಸದಾ ಕಾಲ ಕ್ರಿಯಾಶೀಲವಾಗಿ ಜೀವನವನ್ನು ನಡೆಸಲು ಅನುಕೂಲಕರವಾದ ಬುದ್ಧನ ತತ್ವಗಳು ನಂತರ ಇಡೀ ವಿಶ್ವದಲ್ಲಿ ಬುದ್ಧನ ಸರಳ ಬೋಧನೆಗಳು, ದೇಶಿಯ ಭಾಷೆ, ಸಮಾನತೆಯ ಚಿಂತನೆ, ಬುದ್ಧನ ವ್ಯಕ್ತಿತ್ವ, ಬೌದ್ಧ ಸಂಘಗಳ ಪಾತ್ರ ಮತ್ತು ರಾಜರ ಆಶ್ರಯಗಳೊಂದಿಗೆ ದೇಶವಿದೇಶಗಳಲ್ಲಿ ವ್ಯಾಪಕವಾಗಿ ಜನಪ್ರಿಯವಾಗಿ ಇಂದಿಗೂ ಕೂಡ ಹಲವಾರು ದೇಶಗಳಲ್ಲಿ ಬೌದ್ಧ ಧರ್ಮವು ವ್ಯಾಪಕವಾಗಿ ಹರಡಿದೆ.
ಬುದ್ಧನ ಸಂದೇಶಗಳು ಮತ್ತು ಬುದ್ಧನ ವಿಚಾರಗಳ ಚಿಂತನೆಗಳು ಡಾ. ಬಿಆರ್ ಅಂಬೇಡ್ಕರ್ ಅವರು ಬೌದ್ಧ ಧರ್ಮವನ್ನು ಸ್ವೀಕರಿಸಿದ ನಂತರ ಲಕ್ಷಾಂತರ ಜನರ ಧರ್ಮವಾಗಿ ಇಂದಿಗೂ ನೆಲೆಸಿ ಅರಳುತ್ತಿದೆ.
ಅಕ್ಟೋಬರ್ 24 ಮತ್ತು 25 ಚಾಮರಾಜನಗರಕ್ಕೆ ದೇಶ ವಿದೇಶಗಳಿಂದ ಬುದ್ಧನ ಉಪಾಸಕರು, ಅನುಯಾಯಿಗಳು ಆಗಮಿಸುತ್ತಿರುವ ಅಂತರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನಕ್ಕೆ ಸರ್ವ ಧರ್ಮೀಯರು ಸ್ವಾಗತಿಸಲು ಸಂತೋಷ ಪಡುತ್ತಿದ್ದಾರೆ.
ಅಂತರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನವು ಅಕ್ಟೋಬರ್ 24ರ ಶನಿವಾರ ಧಮ್ಮನಡಿಗೆಯ ಮೂಲಕ ಧಮ್ಮ ಜ್ಯೋತಿಯೊಂದಿಗೆ ಚಾಮರಾಜನಗರದ ರಾಮಸಮುದ್ರದ ಭೀಮಸಮುದ್ರದ ಡಾ. ಬಿಆರ್ ಅಂಬೇಡ್ಕರ್ ಪ್ರತಿಮೆ ಮುಂಭಾಗದಿಂದ ಧಮ್ಮ ನಡಿಗೆಯೊಂದಿಗೆ ಬಿ ರಾಚಯ್ಯ ರಾಚಯ್ಯ ಜೋಡಿ ರಸ್ತೆ, ಶ್ರೀ ಭುವನೇಶ್ವರಿ ವೃತ್ತ, ಸಂತೆಮರಹಳ್ಳಿ ವೃತ್ತ, ಎಲ್ಐಸಿ ಮಾರ್ಗವಾಗಿ ಡಾ. ಬಿಆರ್ ಅಂಬೇಡ್ಕರ್ ಕ್ರೀಡಾಂಗಣವನ್ನು ಸೇರುವುದು.
ಶ್ರೀಲಂಕಾ ದೇಶದ ಕೊಲಂಬೋ ವಿಶ್ವವಿದ್ಯಾಲಯದ ಪೂಜ್ಯ ಶೀಲವಂತ ಮಹಾ ಥೇರು ಬಂತೆಜಿ ಮತ್ತು ಪೂಜ್ಯ ಬೋಧಿರತ್ನ ಬಂತೆ ಜಿ, ನಳಂದ ವಿಹಾರ ಕೂಡ್ಲೂರು ಟಿ ನರಸೀಪುರ ರವರ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆಗೊಳ್ಳಲಿದೆ.
ಮೆರವಣಿಗೆಯನ್ನು ಮಾನ್ಯ ಕರ್ನಾಟಕ ಸರ್ಕಾರದ ಪಶು ಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಸಿ ಪುಟ್ಟರಂಗಶೆಟ್ಟಿ ನೆರವೇರಿಸುವರು.
ಹಲವಾರು ಗ್ರಾಮಗಳ ಯಜಮಾನರು ಅಂತರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನ ಚಾಮರಾಜನಗರದ ಅಧ್ಯಕ್ಷತೆಯನ್ನು ವಹಿಸಿರುವ ಶಾಸಕರಾದ ಸನ್ಮಾನ್ಯ ಶ್ರೀ ಎ ಆರ್ ಕೃಷ್ಣಮೂರ್ತಿಯವರು ಮತ್ತು ಪೂಜ್ಯ ಮನೋಹರ್ ರಕ್ಷಿತ ಬಂತೇಜಿ ರವರ ಧ್ವಜಾರೋಹಣದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ.
ಬುದ್ಧ ವಂದನೆ, ಧಮ್ಮ ದೀಕ್ಷೆ, ಧರ್ಮ ಸಂದೇಶ ಮಹಾಸಮ್ಮೇಳನದ ಉದ್ಘಾಟನಾ ಸಮಾರಂಭ, ವಿಚಾರಗೋಷ್ಠಿಗಳು , ಬುದ್ಧ ಮತ್ತು ಬಹುತ್ವ ಸಂವಾದ, ಗೋಷ್ಠಿ, ಧಮ್ಮ ಕವಿಗೋಷ್ಠಿ ಮಕ್ಕಳ ಮೈತ್ರಿ, ತಮ್ಮ ಆಚರಣೆಯಲ್ಲಿ ಎದುರಾಗುವ ಕೌಟುಂಬಿಕ ಸಮಸ್ಯೆಗಳು, ವಿಚಾರಧಾರೆಗಳು ಸಮೂಹ ಮಾಧ್ಯಮಗಳು ದಲಿತ ಚಳುವಳಿಗಳು ಕವಿಗೋಷ್ಠಿ, ಯುವ ದುಂಡು ಮೇಜಿನ ಸಭೆ, ಮಹಿಳಾ ದುಂಡು ಮೇಜಿನ ಸಭೆ ಹಲವಾರು ವಿಷಯಗಳ ಕುರಿತು ವಿಚಾರಗೋಷ್ಠಿಗಳು ಹಾಗೂ ಸಮಾರೋಪ ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಮೂಲಕ ಎರಡು ದಿನಗಳ ನಿರಂತರವಾದ ವಿಶೇಷ ಕಾರ್ಯಕ್ರಮಗಳು ಜರುಗುತ್ತಿರುವ ಈ ಶುಭ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು, ಸಚಿವರುಗಳು, ಮಾಜಿ ಸಚಿವರುಗಳು, ಜ್ಞಾನಿಗಳು ಚಿಂತಕರು, ಉಪಾಸಕರುಗಳು ಕವಿಗಳು,ಸಾಹಿತಿಗಳು ಆಗಮಿಸಿ ಸಮ್ಮೇಳನದ ಶ್ರೇಷ್ಠತೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿರುವ ಎರಡು ದಿನಗಳ ಸಮ್ಮೇಳನಕ್ಕೆ ಆಗಮಿಸಿ ನಮ್ಮ ಜೀವಮಾನದಲ್ಲಿ ಚಾಮರಾಜನಗರದಲ್ಲಿ ನಡೆಯುತ್ತಿರುವ ಈ ಸಮ್ಮೇಳನ ಯಶಸ್ವಿಯಾಗಲಿ.
ಸರ್ವರಿಗೂ ಬುದ್ಧನ ಶಾಂತಿ, ಸಹನೆ,ಕರುಣೆ, ಸಹಬಾಳ್ವೆ, ಅಹಿಂಸಾ ತತ್ವದ ಚಿಂತನೆಗಳು, ಎಲ್ಲ ಮನಸ್ಸುಗಳಿಗೆ ಶುದ್ಧತೆ, ಪ್ರೀತಿ,ವಿಶ್ವಾಸ, ಮನೋ ಧೈರ್ಯ, ಆತ್ಮವಿಶ್ವಾಸ ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಮರ್ಶೆಗಳು ಮತ್ತು ಸ್ನೇಹ ವಿಶ್ವಾಸಗಳು ಹೆಚ್ಚಾಗಲಿ. ಸಮ್ಮೇಳನಗಳ ಮೂಲಕ ಪರಸ್ಪರ ಸಮಾಜಗಳು ಒಂದಾಗಲಿ, ಮನಸ್ಸುಗಳು ಅರಳಲಿ. ಪ್ರೀತಿ, ಮೌನವೊಂದೇ, ಧ್ಯಾನ ಒಂದೇ ಕರುಣೆ ಮೌಲ್ಯವೊಂದೆ ಮಾನವೀಯ ಮೌಲ್ಯ ನಮ್ಮೆಲ್ಲರನ್ನು ಒಂದುಗೂಡಿಸಿ, ಜ್ಞಾನವನ್ನು ಇಮ್ಮಡಿಗೊಳಿಸಿ ಶಾಶ್ವತವಾದ ನೆಮ್ಮದಿ ಸಿಗುವ ಹಾಗೆ ಮನಸ್ಸುಗಳು ಪರಿವರ್ತನೆ ಯಾಗಲಿ.
ಆ ಮೂಲಕ ಗಡಿ ಭಾಗದ ಕೀರ್ತಿಯನ್ನು ಹೆಚ್ಚಿಸುತ್ತಿರುವ ಅಂತರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನಕ್ಕೆ ಶುಭಾಶಯವನ್ನು ಕೋರುತ್ತಾ, ಈ ಸಮ್ಮೇಳನ ಅಷ್ಟು ಸುಲಭದ ಮಾತಲ್ಲ. ಎರಡು ದಿನಗಳ ಅಂತರಾಷ್ಟ್ರೀಯ ಸಮ್ಮೇಳನ ನಡೆಸುತ್ತಿರುವ, ನಡೆಯಲು ಶ್ರಮಿಸುತ್ತಿರುವ ಸರ್ವ ಬಂಧುಗಳಿಗೂ ಅನಂತ ಅನಂತ ಧನ್ಯವಾದಗಳುಮತ್ತು ಅಭಿನಂದನೆಗಳನ್ನು ಸಲ್ಲಿಸುತ್ತೇವೆ.

ಸುರೇಶ್ ಎನ್ ಋಗ್ವೇದಿ
ಉಪನ್ಯಾಸಕರು,
ಸಂಸ್ಕೃತಿ ಚಿಂತಕರು,
ಚಾಮರಾಜನಗರ.
