ಜಂತುಹುಳು ನಿವಾರಣೆಗೆ ಸಾಮುದಾಯಿಕ ಜಾಗೃತಿ ಅವಶ್ಯವಾಗಿದೆ : ಡಾ. ಮಲ್ಲಿಕಾ ಅಭಿಮತ

ಚಾಮರಾಜನಗರ: ಜಂತುಹುಳು ನಿವಾರಣೆಗೆ ಮಕ್ಕಳು, ಪೋಷಕರು ಹಾಗೂ ಸಾರ್ವಜನಿಕರು ಸೇರಿದಂತೆ ಎಲ್ಲರಲ್ಲೂ ಸಾಮುದಾಯಿಕ ಜಾಗೃತಿ ಅವಶ್ಯವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೈಸೂರು ವಿಭಾಗದ ಜಂಟಿನಿರ್ದೇಶಕರಾದ ಡಾ. ಮಲ್ಲಿಕಾ ಅವರು ಅಭಿಪ್ರಾಯಪಟ್ಟರು.

ತಾಲೂಕಿನ ಚಂದಕವಾಡಿಯ ಕರ್ನಾಟಕ ಪಬ್ಲಿಕ್ ಶಾಲೆಯ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿಂದು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮಗರಿವಿಲ್ಲದಂತೆ ದೇಹ ಸೇರಿ ಅನಾರೋಗ್ಯಕ್ಕೆ ಕಾರಣವಾಗುವ ಜಂತುಹುಳುಗಳಲ್ಲಿ ಕೊಕ್ಕೆಹುಳು, ಸೂಜಿಹುಳು ಸೇರಿದಂತೆ ಹಲವು ಬಗೆಯ ಜಂತುಹುಳುಗಳಿವೆ. ಅವು ಹೊಟ್ಟೆಯಲ್ಲಿದ್ದರೆ ನಾವು ತಿನ್ನುವ ಆಹಾರದಿಂದ ಉತ್ಪತ್ತಿಯಾಗುವ ರಕ್ತ ನಮಗೆ ದೊರೆಯದೇ ಜಂತುಹುಳುವಿನ ಪಾಲಾಗಿ ರಕ್ತಹೀನತೆ (ಅನಿಮೀಯ), ಅಪೌಷ್ಠಿಕತೆ, ಉಂಟಾಗಲಿದೆ. ಸುಸ್ತಾಗುವಿಕೆ, ಏಕಾಗ್ರತೆ, ನೆನಪಿನಶಕ್ತಿ, ರೋಗನಿರೋಧಕ ಶಕ್ತಿ ಕಡಿಮೆಯಾಗಲಿದೆ. ಈ ವಿಷವರ್ತುಲದಿಂದ ಪಾರಾಗಲು 1ರಿಂದ 19ರ ವಯೋಮಾನದ ಮಕ್ಕಳಿಗೆ ಶಾಲೆ, ಕಾಲೇಜು ಹಾಗೂ ಅಂಗನವಾಡಿಗಳಲ್ಲಿ ಅಲ್ಬೆಂಡಾಜೋಲ್ 400mg ಮಾತ್ರೆ ನೀಡಲಾಗುತ್ತಿದೆ. ಜಂತುಹುಳು ನಿವಾರಣೆಗೆ ಅಲ್ಬೆಂಡಾಜೋಲ್ ಸಂಜೀವಿನಿಯಾಗಿ ಪರಿಣಮಿಸಿದೆ ಎಂದರು.

ಜಂತುಹುಳು ನಿವಾರಣೆಗೆ ವೈಯಕ್ತಿಕ ಸ್ವಚ್ಚತೆ ಮುಖ್ಯವಾಗಿದೆ. ಮಕ್ಕಳು ಸೇರಿದಂತೆ ಎಲ್ಲಾ ವಯೋಮಾನದವರು ಸಾಬೂನಿನಿಂದ ಕೈತೊಳೆಯಬೇಕು. ನಿಯಮಿತವಾಗಿ ಉಗುರು ಕತ್ತರಿಸಬೇಕು. ಸುತ್ತಲಿನ ಪರಿಸರ ನೈರ್ಮಲ್ಯದಿಂದ ಕೂಡಿರುವಂತೆ ನೋಡಿಕೊಳ್ಳಬೇಕು. ಶುದ್ಧವಾದ ಬಿಸಿನೀರು, ಬೇಯಿಸಿದ ಆಹಾರ ಸೇವಿಸಬೇಕು. ಕಬ್ಬಿಣಾಂಶವಿರುವ ಸೊಪ್ಪು, ತರಕಾರಿ, ರಾಗಿ, ಬೆಲ್ಲವನ್ನು ಹೆಚ್ಚಾಗಿ ಬಳಸಬೇಕು. ಜಂತುಹುಳು ನಿವಾರಣೆ ಬಗ್ಗೆ ಶಾಲಾಮಕ್ಕಳು, ಪೋಷಕರಿಗೆ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ. ಜಂತುಹುಳು ನಿವಾರಣೆ ಮೂಲಕ ಜಿಲ್ಲೆ, ರಾಜ್ಯ ಹಾಗೂ ದೇಶವನ್ನು ಅನಿಮೀಯ ಮುಕ್ತಗೊಳಿಸಲು ನಾವೆಲ್ಲರೂ ಪಣ ತೊಡಬೇಕಾಗಿದೆ ಎಂದು ಡಾ. ಮಲ್ಲಿಕಾ ಅವರು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ ಅವರು ಕಾರ್ಯಕ್ರಮದಲ್ಲಿ ಹಾಜರಿದ್ದ ಶಾಲಾ ಮಕ್ಕಳಿಗೆ ನೀವು ಸಸ್ಯಹಾರಿಗಳೋ, ಮಾಂಸಹಾರಿಗಳೋ ?, ಬಯಲು ಮಲ ವಿಸರ್ಜನೆ ಇನ್ನೂ ಚಾಲ್ತಿಯಲ್ಲಿದೆಯೇ ಅಥವಾ ಮನೆಯಲ್ಲಿನ ಶೌಚಾಲಯ ಬಳಸುತ್ತೀರಾ ಹೀಗೆ ಹತ್ತು-ಹಲವು ಪ್ರಶ್ನೆಗಳನ್ನು ಕೇಳಿ, ಮಕ್ಕಳೊಂದಿಗೆ ನೇರವಾಗಿ ಸಂವಾದ ನಡೆಸಿದರು. ಆರೋಗ್ಯ ವರ್ಧನೆಗಾಗಿ ಮನೆಯ ಹಿತ್ತಲಲ್ಲಿ ಬೆಳೆಯುವ ಎಲ್ಲಾ ಬಗೆಯ ಸೊಪ್ಪುಗಳು, ಹಣ್ಣು, ತರಕಾರಿಗಳಂತಹ ಶಕ್ತಿಯುತ ಆಹಾರಗಳನ್ನು ಸೇವಿಸಬೇಕು. ವೈಯಕ್ತಿಕ ಸ್ವಚ್ಚತೆ ಬಗ್ಗೆ ಗಮನಹರಿಸಬೇಕು ಎಂದರು.

ಅಲ್ಬೆಂಡಾಜೋಲ್ ಮಾತ್ರೆ ಜಂತುಹುಳು ನಿವಾರಣೆಗೆ ರಾಮಬಾಣವಾಗಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿ 2015ರಿಂದ ಫೆಬ್ರವರಿ 10 ಮತ್ತು ಆಗಸ್ಟ್ 10ರಂದು ವರ್ಷಕ್ಕೆ 2 ಬಾರಿ ಜಿಲ್ಲಾದ್ಯಂತ ಜಂತುಹುಳು ನಿವಾರಣೆ ಜಾಗೃತಿಗಾಗಿ ಮಕ್ಕಳಿಗೆ ಅಲ್ಬೆಂಡಾಜೋಲ್ ಮಾತ್ರೆ ನೀಡಲಾಗುತ್ತಿದೆ. ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ, ಅರಣ್ಯ ಪ್ರದೇಶಗಳಲ್ಲಿ ಮಕ್ಕಳು ಹಾಗೂ ಮಹಿಳೆಯರಲ್ಲಿ ಅಪೌಷ್ಠಿಕತೆ ಹಾಗೂ ರಕ್ತಹೀನತೆ ಹೆಚ್ಚಾಗಿ ಕಂಡುಬಂದಿದೆ. ಇದನ್ನು ತಡೆಯಲು ವ್ಯಾಪಕವಾಗಿ ಅರಿವು ಶಿಬಿರಗಳನ್ನು ನಡೆಸಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಜಂತುಹುಳು ನಿವಾರಣೆ ಬಗ್ಗೆ ಮಕ್ಕಳು ತಾವು ಅರಿತು, ಇತರರಿಗೂ ತಿಳಿಸಬೇಕು ಎಂದು ಆರೋಗ್ಯಾಧಿಕಾರಿ ಡಾ. ಚಿದಂಬರ ಅವರು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ. ರಾಜೇಶ್‍ಕುಮಾರ್ ಅವರು ಇಂದಿನಿಂದ ಫೆಬ್ರವರಿ 16ರವರೆಗೆ ಜಿಲ್ಲಾದ್ಯಂತ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜಿಲ್ಲೆಯ ಎಲ್ಲಾ ಸರ್ಕಾರಿ, ಖಾಸಗಿ, ಶಾಲಾ ಕಾಲೇಜು, ಅಂಗನವಾಡಿ ಮಕ್ಕಳಿಗೆ ಉಚಿತವಾಗಿ ಮಾತ್ರೆಯನ್ನು ನೀಡಲಾಗುತ್ತಿದೆ. ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಚಾಮರಾಜನಗರ ತಾಲೂಕಿನ 72,488, ಗುಂಡ್ಲುಪೇಟೆ 42,857, ಕೊಳ್ಳೇಗಾಲ 37,554, ಹನೂರು 37,972 ಹಾಗೂ ಯಳಂದೂರು ತಾಲೂಕಿನ 16,225 ಸೇರಿದಂತೆ ಒಟ್ಟಾರೆ ಜಿಲ್ಲೆಯಲ್ಲಿ 2,07,096 ಮಕ್ಕಳಿಗೆ ಜಂತುಹುಳು ಮಾತ್ರೆ ನೀಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಚಂದ್ರಶೇಖರ್, ತಾಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್, ಚಂದಕವಾಡಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಮಹದೇವಸ್ವಾಮಿ, ವಾರ್ತಾ ಇಲಾಖೆಯ ವಾರ್ತಾ ಸಹಾಯಕರಾದ ಸುರೇಶ್‍ಕುಮಾರ್, ಚಂದಕವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ನಂದಿನಿ, ಆರೋಗ್ಯ ಶಿಕ್ಷಣಾಧಿಕಾರಿ ದೊರೆಸ್ವಾಮಿ ನಾಯಕ್, ಆರೋಗ್ಯ ಮೇಲ್ವಿಚಾರಣಾ ಅಧಿಕಾರಿ ವೆಂಕಟೇಶ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇದೇ ವೇಳೆ ಕಾರ್ಯಕ್ರಮದಲ್ಲಿ ಜಂತುಹುಳು ನಿವಾರಣಾ ಜಾಗೃತಿ ಕುರಿತ ಪೋಸ್ಟರ್‍ಅನ್ನು ಬಿಡುಗಡೆಗೊಳಿಸಲಾಯಿತು.

ವೇದಿಕೆ ಕಾರ್ಯಕ್ರಮದ ಬಳಿಕ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮದಡಿ ಅಂತರಾಷ್ಟ್ರೀಯ ಅಪಸ್ಮಾರ ದಿನದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ಏರ್ಪಡಿಸಲಾಗಿತ್ತು. ಜಾಥಾದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೈಸೂರು ವಿಭಾಗದ ಜಂಟಿನಿರ್ದೇಶಕರಾದ ಡಾ. ಮಲ್ಲಿಕಾ ಅವರು ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

Leave a Reply

Your email address will not be published. Required fields are marked *