ವಚನಕ್ರಾಂತಿಗೆ ದೇವರ ದಾಸಿಮಯ್ಯ ಸ್ಪೂರ್ತಿ : ಕಾಡಾ ಅಧ್ಯಕ್ಷರಾದ ಪಿ. ಮರಿಸ್ವಾಮಿ

ಚಾಮರಾಜನಗರ: ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ಸಮಸಮಾಜ ನಿರ್ಮಾಣಕ್ಕಾಗಿ 11ನೇ ಶತಮಾನದಲ್ಲಿ ತಮ್ಮ ವಚನಗಳ ಮೂಲಕ ಶ್ರಮಿಸಿದ ದೇವರ ದಾಸಿಮಯ್ಯ ಅವರು 12ನೇ ಶತಮಾನದಲ್ಲಿ ನಡೆದ ವಚನಕ್ರಾಂತಿಗೆ ಸ್ಪೂರ್ತಿಯಾಗಿದ್ದಾರೆ ಎಂದು ಕಾಡಾ ಅಧ್ಯಕ್ಷರಾದ ಪಿ. ಮರಿಸ್ವಾಮಿ ಅವರು ಹೇಳಿದರು. 

ನಗರದ ವರಟನಟ ಡಾ. ರಾಜ್‍ಕುಮಾರ್ ಜಿಲ್ಲಾ ರಂಗಮಂದಿರದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಸಮಾಜಕ್ಕೆ ವಚನಕಾರರ ಕೊಡುಗೆ ಸಾಕಷ್ಟು ಇದೆ. ದೇವರ ದಾಸಿಮಯ್ಯ ಅವರು 176 ವಚನಗಳನ್ನು ರಚಿಸಿದ್ದಾರೆ. 11ನೇ ಶತಮಾನದ ಕೊನೆಯ ಭಾಗದಲ್ಲಿ ದೇವರ ದಾಸಿಮಯ್ಯ ಅವರು ಸಮಾಜ ತಿದ್ದುವ ಕೆಲಸವನ್ನು ಮಾಡಿದ್ದಾರೆ. ಜಾತಿ ವ್ಯವಸ್ಥೆ ಹೋಗಲಾಡಿಸಿ ಸರ್ವರು ಸಮಾನರು ಎಂಬ ಸಂದೇಶವನ್ನು ತಮ್ಮ ಸರಳ ವಚನಗಳ ಮೂಲಕ ಸಾರಿದ್ದಾರೆ ಎಂದು ಅವರು ತಿಳಿಸಿದರು. 

ದೇವರ ದಾಸಿಮಯ್ಯ ಅವರು ಅಪಾರ ಜ್ಞಾನ ಹೊಂದಿದ್ದರು. ಗುರುಗಳಿಂದ ಉತ್ತಮ ಸಂಸ್ಕøತಿ ಜ್ಞಾನವನ್ನು ಪಡೆದರು. ಬಸವಣ್ಣನವರ ವಚನಕ್ರಾಂತಿಗೆ ದೇವರ ದಾಸಿಮಯ್ಯ ಅವರ ಪ್ರಭಾವ, ಸ್ಪೂರ್ತಿ ಇದೆ. ಸಮಾಜದ ಒಳಿತು, ತಿಳಿವಳಿಕೆ ದಾಸಿಮಯ್ಯ ಅವರ ವಚನಗಳಲ್ಲಿ ಕಾಣಬಹುದಾಗಿದೆ ಎಂದು ಕಾಡಾ ಅದ್ಯಕ್ಷರಾದ ಪಿ. ಮರಿಸ್ವಾಮಿ ಅವರು ಹೇಳಿದರು. 

ಅಧ್ಯಕ್ಷತೆ ವಹಿಸಿ ಮಾತನಾಡಿದ ಚೂಡಾ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ ಮುನ್ನಾ ಅವರು ದೇವರ ದಾಸಿಮಯ್ಯ ಅವರ ವಚನದಲ್ಲಿ ಸಾಕಷ್ಟು ಅರ್ಥಪೂರ್ಣ ವಿಚಾರ ಧಾರೆಗಳಿವೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕಿದೆ. ಎಲ್ಲ ವರ್ಗದ ಜನರ ಹಿತ ಬಯಸಿದ ದಾಸಿಮಯ್ಯ ಅವರ ಆದರ್ಶ ತತ್ವಗಳನ್ನು ಪಾಲಿಸಬೇಕೆಂದು ಸಲಹೆ ಮಾಡಿದರು. 

ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶೃತಿ ಅವರು ದೇವರ ದಾಸಿಮಯ್ಯ ಅವರು ಮಹಿಳಾ ಸಮಾನತೆ ಕುರಿತು ರಚಿಸಿರುವ ವಚನವೊಂದನ್ನು ವಾಚಿಸಿದರು. 11ನೇ ಶತಮಾನದಲ್ಲಿಯೇ ಹೆಣ್ಣಿಗೆ ಸಮಾನತೆ ನೀಡಬೇಕೆಂಬ ಬಹುಮುಖ್ಯ ಸಂದೇಶ ನೀಡಿದ ದೇವರ ದಾಸಿಮಯ್ಯ ಅವರ ವಿಚಾರಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು. 

ಮುಖ್ಯ ಭಾಷಣ ಮಾಡಿದ ಕೊಳ್ಳೇಗಾಲದ ಸಾಹಿತಿ ಡಾ. ಎನ್. ಮಧುಸೂದನ್ ಅವರು ಭಕ್ತಿಯೇ ಜೀವನವನ್ನಾಗಿ ಮಾಡಿಕೊಂಡು ಸಮಾಜವನ್ನು ಎಚ್ಚರಿಸಿದ ಆದ್ಯ ವಚನಕಾರರೆಂದರೆ ದೇವರ ದಾಸಿಮಯ್ಯ. ಇವರ ಬಗ್ಗೆ 18ನೆ ಶತಮಾನದ ಬಸವಣ್ಣನವರು ಸೇರಿದಂತೆ ಅನೇಕ ವಚನಕಾರರು, ಬರಹಗಾರರು ಸ್ಮರಿಸಿಕೊಂಡಿದ್ದಾರೆ. ಬಸವಣ್ಣನವರ ಭಕ್ತಿ, ಕಾಯಕ, ವಚನಗಳಿಗೆ ದೇವರ ದಾಸಿಮಯ್ಯ ಪ್ರಭಾವವಿದೆ ಎಂದರು. 

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ರಾಜು, ಸಮಾಜದ ಮುಖಂಡರಾದ ಶ್ರೀಧರ್, ವೆಂಕಟೇಶ್, ವಿಜಯ್ ಕುಮಾರ್, ರಾಮಮೂರ್ತಿ, ಗೋಪಾಲ್, ಕಾಂತರಾಜು, ರಾಮಶೆಟ್ಟಿ, ಸಿ.ಬಿ. ಕಾಂತರಾಜು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಚಾಮರಾಜೇಶ್ವರ ದೇವಾಲಯದ ಬಳಿ ದೇವರ ದಾಸಿಮಯ್ಯ ಅವರ ಭಾವಚಿತ್ರದ ಮೆರವಣಿಗೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ಚಾಲನೆ ನೀಡಿದರು.

Leave a Reply

Your email address will not be published. Required fields are marked *